ಸಂಪಾದಕೀಯ | ಕನ್ನಡ ನಾಮಫಲಕ ಆಂದೋಲನ: ಸದಾಶಯದಲ್ಲಿ ಸಂಘರ್ಷ ಬೇಡ ನಾಮಫಲಕಗಳಲ್ಲಿ ಕನ್ನಡ ಬಳಸುವ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಕ್ಷಣಾ ವೇದಿಕೆ ನಡೆಸಿರುವ ‘ನಾಮಫಲಕ ಜಾಗೃತಿ ಆಂದೋಲನ’ದ ಉದ್ದೇಶ ಸ್ವಾಗತಾರ್ಹ. ಆದರೆ, ಕಾಳಜಿಯನ್ನು ಕಾರ್ಯಗತಗೊಳಿಸುವಲ್ಲಿ ಚಳವಳಿಗಾರರು ಕಾನೂನನ್ನು ಕೈಗೆ ತೆಗೆದುಕೊಳ್ಳುವಂತೆ ವರ್ತಿಸಿರುವುದನ್ನು ಯಾವುದೇ ಕಾರಣಕ್ಕೆ ಒಪ್ಪುವುದು ಸಾಧ್ಯವಿಲ್ಲ. ಇಂಗ್ಲಿಷ್‌ ನಾಮಫಲಕಗಳಿಗೆ ವಿರೋಧ ಸೂಚಿಸಿ ಬೆಂಗಳೂರಿನಲ್ಲಿ ರಕ್ಷಣಾ ವೇದಿಕೆ ನಡೆಸಿರುವ ಮೆರವಣಿಗೆ ಅಹಿತಕರ ಘಟನೆಗಳಿಗೆ ಕಾರಣವಾಗಿದೆ. ಇಂಗ್ಲಿಷ್‌ನಲ್ಲಿದ್ದ ನಾಮಫಲಕಗಳನ್ನು ಕನ್ನಡ ಕಾರ್ಯಕರ್ತರು ಕಿತ್ತುಹಾಕಿದ್ದು, ಕೀಳಲು ಸಾಧ್ಯವಾಗದ ಫಲಕಗಳಿಗೆ ಮಸಿ ಬಳಿದಿದ್ದಾರೆ. ಕೆಲವು ಅಂಗಡಿಗಳ ಲೈಟಿಂಗ್‌ ಬೋರ್ಡ್‌ಗಳನ್ನು ಒಡೆದು ಹಾಕಲಾಗಿದ್ದು, ಹೋರ್ಡಿಂಗ್‌ಗಳನ್ನು ಹರಿಯಲಾಗಿದೆ. ಇಂಗ್ಲಿಷ್‌ ನಾಮಫಲಕಗಳನ್ನು ನಾಶಪಡಿಸುವ ಸಂದರ್ಭದಲ್ಲಿ ಕನ್ನಡ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಸಂಘರ್ಷ ನಡೆದಿದೆ. ನಗರದ ಹಲವು ಭಾಗಗಳಲ್ಲಿ ಏಕಕಾಲಕ್ಕೆ ಆಂದೋಲನ ನಡೆದುದರಿಂದ ಸಾರಿಗೆ ಸಂಚಾರಕ್ಕೂ ಅಡಚಣೆಯುಂಟಾಗಿದೆ. ಕನ್ನಡನಾಡಿನಲ್ಲಿನ ನಾಮಫಲಕಗಳು ಕನ್ನಡದಲ್ಲಿ ಇರಬೇಕೆನ್ನುವುದನ್ನು ಯಾರೂ ಅಲ್ಲಗಳೆಯಲಾರರು. ಕನ್ನಡ ನಿರ್ಲಕ್ಷ್ಯಕ್ಕೊಳಗಾದ ಸಂದರ್ಭದಲ್ಲಿ ಅದನ್ನು ವಿರೋಧಿಸಿ ಪ್ರತಿಭಟಿಸುವುದು ಪ್ರಜಾಸತ್ತಾತ್ಮಕ ನಡವಳಿಕೆಯೇ ಆಗಿದೆ. ಆದರೆ, ಕನ್ನಡ ಜಾಗೃತಿಯ ಉದ್ದೇಶದ ಪ್ರಯತ್ನಗಳು ಹಿಂಸೆ ಹಾಗೂ ಆಸ್ತಿಪಾಸ್ತಿ ನಾಶಕ್ಕೆ ಕಾರಣವಾಗಬಾರದು. ಇಂತಹ ಬೆಳವಣಿಗೆಗಳು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ‘ಸೌಹಾರ್ದ ಕರ್ನಾಟಕ’ದ ವರ್ಚಸ್ಸಿಗೆ ಧಕ್ಕೆ ಉಂಟುಮಾಡುವಂತಹವು. ಅನುನಯ, ಒತ್ತಾಯ ಹಾಗೂ ಕಾನೂನು ಮಾರ್ಗಗಳ ಮೂಲಕ ಕನ್ನಡ ಅನುಷ್ಠಾನದ ಪ್ರಯತ್ನಗಳನ್ನು ನಡೆಸಬೇಕೇ ವಿನಾ ಬಲವಂತದ ಮಾರ್ಗದಿಂದಲ್ಲ. ವಾಣಿಜ್ಯ ಸಂಸ್ಥೆಗಳ ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡದ ಬಳಕೆಯಿರಬೇಕು ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿರ್ದೇಶನ ವಿದ್ದು, ಅದರ ಪಾಲನೆಗೆ 2024ರ ಫೆಬ್ರುವರಿ 28ರವರೆಗೆ ಸಮಯವಿದೆ. ಆ ಗಡುವಿನವರೆಗೂ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಕೋರಿದೆ. ಈ ಕೋರಿಕೆ ಸಮಂಜಸವಾದುದು. ಗೊತ್ತುಪಡಿಸಿರುವ ಸಮಯದವರೆಗೆ ತಾಳ್ಮೆಯಿಂದ ಕಾಯುವುದು ಅನಿವಾರ್ಯ. ಗಡುವಿನ ನಂತರವೂ ನಾಮಫಲಕ ವನ್ನು ಬದಲಿಸದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೇ ಹೊರತು, ಜನಸಾಮಾನ್ಯರು ಅಥವಾ ಸಂಘಟನೆಗಳ ಕಾರ್ಯಕರ್ತರು ಕಾನೂನನ್ನು ಕೈಗೆತ್ತಿಕೊಳ್ಳಬಾರದು. ರಾಜ್ಯದಲ್ಲಿನ ಎಲ್ಲ ಅಂಗಡಿ, ಆಸ್ಪತ್ರೆ, ಹೋಟೆಲ್‌, ವ್ಯಾಪಾರಿ ಸಂಸ್ಥೆಗಳ ನಾಮಫಲಕ ಗಳಲ್ಲಿ ಶೇ 60ರಷ್ಟು ಕನ್ನಡ ಇರಬೇಕೆನ್ನುವುದನ್ನು ಸರ್ಕಾರವೂ ಒಪ್ಪಿಕೊಂಡಿದೆ. ಅದಕ್ಕೆ ಪೂರಕವಾಗಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ನಿರ್ಧಾರವನ್ನು ತ್ವರಿತವಾಗಿ ಅನುಷ್ಠಾನಕ್ಕೆ ತರುವ ಉದ್ದೇಶದಿಂದ ಸುಗ್ರೀವಾಜ್ಞೆ ಹೊರಡಿಸಲು ಸರ್ಕಾರ ಮುಂದಾಗಿದೆ. ನಾಮಫಲಕಗಳಲ್ಲಿ ಕನ್ನಡ ಕಡ್ಡಾಯಗೊಳಿಸುವಿಕೆಯ ಕಾನೂನನ್ನು ಬಲಪಡಿಸಲು ಮುಂದಾಗಿರುವ ಸರ್ಕಾರದ ಚಿಂತನೆ ಸ್ವಾಗತಾರ್ಹ. ಆದರೆ, ಇದು ಕಾಯ್ದೆಗಳಿಂದಷ್ಟೇ ಆಗುವ ಕೆಲಸವಲ್ಲ. ಕರ್ನಾಟಕದ ರಾಜಧಾನಿಯಲ್ಲಿ ಕನ್ನಡದ ಪರಿಸರವನ್ನು ಉಳಿಸುವುದು ಸರ್ಕಾರದ ಇಚ್ಛಾಶಕ್ತಿಯನ್ನು ಅವಲಂಬಿಸಿದೆ. ಸರ್ಕಾರದ ಈವರೆಗಿನ ಕನ್ನಡ ಕಾಳಜಿ ಹೇಳಿಕೆಗಳಲ್ಲಿದೆಯೇ ಹೊರತು, ಇಚ್ಛಾಶಕ್ತಿಯ ರೂಪದಲ್ಲಿ ಪ್ರಕಟಗೊಂಡಿಲ್ಲ. ನಾಮಫಲಕಗಳಿಗೆ ಮಸಿ ಬಳಿಯುವ ಇಲ್ಲವೇ ಅವುಗಳನ್ನು ಕಿತ್ತುಹಾಕುವ ಪ್ರಯತ್ನ ಇದು ಮೊದಲನೆಯದೇನಲ್ಲ. ಕನ್ನಡ ಚಳವಳಿ ರೂಪುಗೊಂಡಾಗಿನಿಂದ ಇಂಗ್ಲಿಷ್‌ ಸೇರಿದಂತೆ ಕನ್ನಡೇತರ ಭಾಷೆಯಲ್ಲಿರುವ ನಾಮಫಲಕಗಳ ವಿರುದ್ಧ ಪ್ರತಿಭಟನೆ ಆಗಾಗ ರೂಪುಗೊಳ್ಳುತ್ತಲೇ ಇದೆ. ಕನ್ನಡ ಚಳವಳಿ ಕಾರ್ಯಕರ್ತರ ನಿರಂತರ ಪ್ರಯತ್ನದ ನಂತರವೂ ಪರಿಸ್ಥಿತಿಯಲ್ಲಿ ಆಶಾದಾಯಕ ಬದಲಾವಣೆ ಆಗಿಲ್ಲ. ಕರ್ನಾಟಕದಲ್ಲಿ ಕನ್ನಡಕ್ಕೆ ಅವಕಾಶವಿರಬೇಕೆಂದು ಒತ್ತಾಯಿಸಿ ಬೀದಿಗಿಳಿಯುವ ಪರಿಸ್ಥಿತಿ ಸೃಷ್ಟಿಯಾಗಿರುವುದು ದುರದೃಷ್ಟಕರ. ಬೆಂಗಳೂರು ಮಹಾನಗರವು ಅಂತರರಾಷ್ಟ್ರೀಯ ವರ್ಚಸ್ಸು ಪಡೆದ ನಂತರವಂತೂ ಹೋಟೆಲ್‌ಗಳು ಹಾಗೂ ವ್ಯಾಪಾರಿ ಮಳಿಗೆಗಳ ನಾಮಫಲಕಗಳಲ್ಲಿ ಇಂಗ್ಲಿಷ್‌ ಏಕಸ್ವಾಮ್ಯ ಹೆಚ್ಚಾಗುತ್ತಿದೆ. ಸಾರ್ವಜನಿಕ ಪ್ರದೇಶಗಳಲ್ಲಿನ ಸೂಚನಾಫಲಕಗಳಲ್ಲಿ ಇಂಗ್ಲಿಷ್‌ ಜೊತೆಗೆ ಹಿಂದಿಯೂ ಕಾಣಿಸಿಕೊಳ್ಳತೊಡಗಿ, ಕನ್ನಡ ನೇಪಥ್ಯಕ್ಕೆ ಸರಿಯುವಂತಾಗಿದೆ. ಕನ್ನಡವನ್ನು ನಿರ್ಲಕ್ಷಿಸಿ ಹಿಂದಿ ಮತ್ತು ಇಂಗ್ಲಿಷನ್ನು ಮೆರೆಸುವುದರ ವಿರುದ್ಧ ಕನ್ನಡ ಚಳವಳಿಗಾರರು ನಿರಂತರವಾಗಿ ದನಿ ಎತ್ತುತ್ತಲೇ ಇದ್ದಾರೆ. ಕನ್ನಡದ ಬಗೆಗಿನ ಅವರ ಕಾಳಜಿ ಮೆಚ್ಚುವಂತಹದ್ದು. ಆದರೆ, ಈ ಕಾಳಜಿ ಕಾನೂನಿನ ಉಲ್ಲಂಘನೆಗೆ ಕಾರಣವಾಗಬಾರದು. ಕನ್ನಡ ಅನುಷ್ಠಾನ ಸರ್ಕಾರದ ಕೆಲಸ. ಕನ್ನಡಕ್ಕೆ ಯಾವುದೇ ಹಂತದಲ್ಲಿ ಹಿನ್ನಡೆಯಾದಲ್ಲಿ, ಅದರ ಸಂಪೂರ್ಣ ಹೊಣೆ ಸರ್ಕಾರದ್ದೇ ಆಗಿದೆ. ಸಾಂವಿಧಾನಿಕ ವ್ಯವಸ್ಥೆ ಮಾಡಬೇಕಾದ ಕೆಲಸವನ್ನು ಜನಸಾಮಾನ್ಯರು ಮಾಡುವ ಸ್ಥಿತಿ ಸೃಷ್ಟಿಯಾಗಿರುವುದರ ಜವಾಬ್ದಾರಿಯೂ ಸರ್ಕಾರದ್ದೇ ಆಗಿದೆ. ಚಳವಳಿಗಾರರೊಂದಿಗೆ ಸಹಾನುಭೂತಿಯಿಂದ ನಡೆದುಕೊಳ್ಳುವ ಮೂಲಕ ಪ್ರಸಕ್ತ ಬಿಕ್ಕಟ್ಟನ್ನು ಪರಿಹರಿಸಲು ಸರ್ಕಾರ‍ಪ್ರಯತ್ನಿಸಬೇಕು. ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಕನ್ನಡ ಪರಿಸರವನ್ನು ಮೂಡಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ಪ್ರಾಮಾಣಿಕವಾಗಿ ನಡೆಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.