ಸಂಪಾದಕೀಯ: ವಿಮಾನಯಾನ; ಸೌಲಭ್ಯ ಹೆಚ್ಚಲಿ, ಪ್ರಯಾಣಿಕರ ಹಿತರಕ್ಷಣೆಗೆ ಸಿಗಲಿ ಆದ್ಯತೆ ವಿಮಾನ ಸಂಚಾರ ವಿಳಂಬವಾಗಿದ್ದಕ್ಕೆ ಪ್ರಯಾಣಿಕರೊಬ್ಬರು ಪೈಲಟ್‌ ಮೇಲೆ ಹಲ್ಲೆ ನಡೆಸಿರುವುದು ಧೂರ್ತತನದ ಪ್ರತಿಕ್ರಿಯೆಯಾಗಿದೆ. ಅವರ ಮೇಲೆ ಕ್ರಮ ಕೈಗೊಂಡಿರುವುದು ನ್ಯಾಯಸಮ್ಮತವೇ ಹೌದು. ಆದರೆ, ಹಲ್ಲೆ ನಡೆಸಿದ ಪ್ರಯಾಣಿಕ ಮತ್ತು ಇತರ ಪ್ರಯಾಣಿಕರು ಅನುಭವಿಸಿದ ಹಿಂಸೆಯೇನೂ ಕಡಿಮೆಯಲ್ಲ ಎಂಬುದನ್ನೂ ಗಮನದಲ್ಲಿ ಇರಿಸಿಕೊಳ್ಳಬೇಕಾಗಿದೆ. ಪ್ರಯಾಣಿಕರು ಈ ತಿಂಗಳ 14ರಂದು ಬೆಳಿಗ್ಗೆ ವಿಮಾನ ಹೊರಡುವಿಕೆಯ ನಿಗದಿತ ಸಮಯಕ್ಕಿಂತ ಎರಡು ತಾಸು ಮುಂಚೆ ನಿಲ್ದಾಣಕ್ಕೆ ಬಂದಿದ್ದಾರೆ. ವಿಮಾನ ಸಂಚಾರವು ಒಂದು ತಾಸು ವಿಳಂಬವಾಗಲಿದೆ, ಒಂದು ತಾಸು ವಿಳಂಬವಾಗಲಿದೆ ಎಂದು ಹೇಳುತ್ತಲೇ ಪ್ರಯಾಣಿಕರು 12 ತಾಸು ಕಾಯುವಂತೆ ಮಾಡಲಾಯಿತು. ವಿಮಾನಗಳು ವಿಳಂಬವಾಗಿ ಹೊರಡುವುದು ಗಂಭೀರವಾದ ಸಮಸ್ಯೆಯಾಗಿದೆ ಮತ್ತು ಈ ಸಮಸ್ಯೆ ಈಗಲೂ ಮುಂದುವರಿದಿದೆ. ಆ ದಿನ, ರಾಜಧಾನಿ ದೆಹಲಿಯ ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ 100ಕ್ಕೂ ಹೆಚ್ಚು ವಿಮಾನಗಳ ಸಂಚಾರ ವ್ಯತ್ಯಯಗೊಂಡಿದೆ. ನಂತರದ ದಿನಗಳಲ್ಲಿಯೂ ವಿಳಂಬ ಮತ್ತು ವಿಮಾನ ಸಂಚಾರ ರದ್ದತಿ ನಿರಂತರವಾಗಿ ನಡೆದುಕೊಂಡು ಬಂದಿದೆ. ಬುಧವಾರ 53 ವಿಮಾನಗಳ ಸಂಚಾರ ರದ್ದಾಗಿದೆ. ವಿಮಾನ ಹಾರಾಟದಲ್ಲಿ ವಿಳಂಬ ಮತ್ತು ಸಂಚಾರ ರದ್ದತಿ ಪ್ರತಿವರ್ಷವೂ ಚಳಿಗಾಲದಲ್ಲಿ ಸಾಮಾನ್ಯ ಎಂಬಂತಾಗಿದೆ. ದಟ್ಟ ಮಂಜಿನಿಂದಾಗಿ ವಿಮಾನ ಸಂಚಾರ ಸಾಧ್ಯವಾಗುವುದಿಲ್ಲ. ದೆಹಲಿ ವಿಮಾನ ನಿಲ್ದಾಣದಲ್ಲಿ ಈ ಸಮಸ್ಯೆ ಇನ್ನೂ ಹೆಚ್ಚು ಗಂಭೀರವಾಗಿದೆ. ದೆಹಲಿಯಲ್ಲಿ ವಿಮಾನ ಸಂಚಾರ ವಿಳಂಬದಿಂದಾಗಿ ಇತರೆಡೆಗಳಲ್ಲಿಯೂ ಸಂಚಾರ ವ್ಯತ್ಯಯ ವಾಗುತ್ತದೆ. ಹವಾಮಾನದಲ್ಲಿನ ಏರುಪೇರಿನ ನಿಯಂತ್ರಣವು ವಿಮಾನಯಾನ ಸಂಸ್ಥೆಗಳು ಅಥವಾ ವಿಮಾನ ನಿಲ್ದಾಣ ನಿರ್ವಹಣಾ ಸಂಸ್ಥೆಗಳ ನಿಯಂತ್ರಣದಲ್ಲಿ ಇಲ್ಲ ಎಂಬುದು ನಿಜ. ಆದರೆ ಹವಾಮಾನ ಏರುಪೇರಾದ ಸಂದರ್ಭದಲ್ಲಿ ಈ ಸಂಸ್ಥೆಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂಬ ದೂರು ಇದೆ. ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ವಿಮಾನ ವಿಳಂಬದ ಸಮಸ್ಯೆಯನ್ನು ಪರಿಹರಿಸಲು ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಸಿಎಟಿ– ಸಾಮರ್ಥ್ಯದ ನಾಲ್ಕನೇ ರನ್‌ವೇ ಕಾರ್ಯಾರಂಭಕ್ಕೆ ಸಂಬಂಧಿಸಿದಂತೆಯೂ ಕ್ರಮಗಳನ್ನು ಕೈಗೊಳ್ಳಲಾಗಿದೆ. ಗೋಚರತೆ ಕಡಿಮೆ ಇದ್ದಾಗಲೂ ವಿಮಾನ ಸಂಚಾರವನ್ನು ನಿರ್ವಹಿಸ ಬಲ್ಲ ಸಾಮರ್ಥ್ಯದ ರನ್‌ವೇಗಳು ಇರುವುದು ಬಹಳ ಮುಖ್ಯ. ಪ್ರಯಾಣಿಕರಿಗೆ ಯಾವೆಲ್ಲ ಸೌಲಭ್ಯ ಗಳನ್ನು ಒದಗಿಸಬೇಕು ಎಂಬ ಕುರಿತು ನಾಗರಿಕ ವಾಯುಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ಮಾರ್ಗಸೂಚಿ ನೀಡಿದೆ. ಮುಂಬೈ ವಿಮಾನ ನಿಲ್ದಾಣದ ಟಾರ್‌ಮ್ಯಾಕ್‌ನಲ್ಲಿ ಕುಳಿತು ಪ್ರಯಾಣಿಕರು ಆಹಾರ ಸೇವಿಸಿದ ವಿಡಿಯೊ ವೈರಲ್‌ ಆಗಿದೆ; ಇದು ವಿಮಾನ ನಿಲ್ದಾಣಗಳ ಪರಿಸ್ಥಿತಿಗೆ ಕನ್ನಡಿ ಹಿಡಿದಿದೆ. ವಿಳಂಬದಿಂದಾಗಿ ಎದುರಿಸಬೇಕಾದ ಹಲವು ಸಮಸ್ಯೆಗಳ ಕುರಿತು ಪ್ರಯಾಣಿಕರು ಹೇಳಿಕೊಂಡಿದ್ದಾರೆ. ಸೌಲಭ್ಯಗಳ ಕೊರತೆ ಇದೆ, ವಿಮಾನ ನಿಲ್ದಾಣ ಮತ್ತು ವಿಮಾನಯಾನ ಸಂಸ್ಥೆಗಳು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂಬ ಅಂಶಗಳು ಕೂಡ ಪ್ರಯಾಣಿಕರು ಹೇಳಿಕೊಂಡ ಸಮಸ್ಯೆಗಳಲ್ಲಿ ಸೇರಿವೆ. ಭಾರತದ ವಾಯುಯಾನ ಕ್ಷೇತ್ರವು ಬಹಳ ಮುಖ್ಯವಾದ ಮತ್ತು ಸಾರ್ವಜನಿಕ ಉಪಯುಕ್ತತೆಯ ಉದ್ಯಮವಾಗಿದೆ. ಇದು ಅಪಾರ ಸಾಧ್ಯತೆಗಳು ಇರುವ ಕ್ಷೇತ್ರ ಕೂಡ ಹೌದು. ದೇಶಿ ಮಾರ್ಗಗಳಲ್ಲಿ 15 ಕೋಟಿಗೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸಿ 2023ರಲ್ಲಿ ಹೊಸ ದಾಖಲೆಯೊಂದು ಸೃಷ್ಟಿಯಾಗಿದೆ. ಅಗತ್ಯಗಳು ಹೆಚ್ಚುತ್ತಿರುವಂತೆಯೇ ಮೂಲಸೌಕರ್ಯಗಳನ್ನೂ ಹೆಚ್ಚಿಸಲು ಹೂಡಿಕೆ ಮಾಡಬೇಕು. ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಅಗತ್ಯಗಳು ಮತ್ತು ಸಮಸ್ಯೆಗಳನ್ನು ಮನಗಂಡು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಹವಾಮಾನದ ಏರುಪೇರಿನ ನಿರ್ವಹಣೆ ಮೇಲೆ ವಿಶೇಷ ಗಮನ ಹರಿಸಬೇಕಾಗಿದೆ. 3.6 ಲಕ್ಷ ಪ್ರಯಾಣಿಕರು ವಿಮಾನ ವಿಳಂಬದಿಂದಾಗಿ ಕಳೆದ ತಿಂಗಳು ಸಮಸ್ಯೆ ಅನುಭವಿಸಿದ್ದಾರೆ ಎಂದು ಡಿಜಿಸಿಎ ಹೇಳಿದೆ. ಅನುಕೂಲ ಮತ್ತು ಸಮಯ ಉಳಿತಾಯದ ಕಾರಣಕ್ಕೆ ಜನರು ವಿಮಾನ ಪ್ರಯಾಣವನ್ನು ಆರಿಸಿಕೊಳ್ಳುತ್ತಾರೆ. ಹಾಗಾಗಿ, ಪ್ರಯಾಣಿಕರಿಗೆ ಆಗುವ ಅನನುಕೂಲಗಳ ಕುರಿತು ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣ ನಿರ್ವಹಣಾ ಸಂಸ್ಥೆಗಳು ಕಳಕಳಿ ಹೊಂದಿರಬೇಕು. ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರನ್ನು ನೋಡಿಕೊಳ್ಳುವ ರೀತಿ ಉತ್ತಮಗೊಳ್ಳಬೇಕು. ಒರಟು ವರ್ತನೆ ಮತ್ತು ಅಸಡ್ಡೆ ಕುರಿತು ಗಂಭೀರವಾದ ದೂರುಗಳು ಇವೆ. ಈ ಕ್ಷೇತ್ರದಲ್ಲಿ ಕೆಲವೇ ಸಂಸ್ಥೆಗಳ ಪ್ರಾಬಲ್ಯ ಇರುವುದರಿಂದ ಸ್ಪರ್ಧೆ ಕಡಿಮೆ ಇದೆ ಎಂಬುದು ಕೂಡ ಈಗಿನ ನಿರ್ಲಕ್ಷ್ಯಕ್ಕೆ ಕಾರಣ ಆಗಿರಬಹುದು. ವಿಮಾನಯಾನಕ್ಕೆ ಸಂಬಂಧಿಸಿದ ಎಲ್ಲ ಆಯಾಮಗಳ ನಿಖರವಾದ ಮಾಹಿತಿ ಪ್ರಯಾಣಿಕರಿಗೆ ಸಕಾಲದಲ್ಲಿ ದೊರಕಬೇಕು. ಸಿಬ್ಬಂದಿಯ ವರ್ತನೆಯು ಸೌಜನ್ಯದಿಂದ ಕೂಡಿರಬೇಕು. ವಿಮಾನ ಸಂಚಾರವು ವಿಳಂಬವಾದರೆ ಅಥವಾ ರದ್ದಾದರೆ ಪ್ರಯಾಣಿಕರಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.