ಸಂಪಾದಕೀಯ | ಮಂದಿರ ಸೌಹಾರ್ದದ ಸಂಕೇತವಾಗಲಿ; ರಾಮನ ಆದರ್ಶಗಳು ಮೈಗೂಡಲಿ ದೇಶದೆಲ್ಲೆಡೆ ಸಂಭ್ರಮ, ಉತ್ಸಾಹ ಹಾಗೂ ಕುತೂಹಲ ಮೂಡಿಸಿದ್ದ ಅಯೋಧ್ಯೆಯಲ್ಲಿನ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಪ್ರಕ್ರಿಯೆ ಅದ್ದೂರಿಯಾಗಿ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲೇ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ಪೂಜಾ ವಿಧಿಗಳು ನಡೆದಿವೆ. ಬಹುಸಂಖ್ಯಾತರ ಭಾವನೆಗಳ ಅಭಿವ್ಯಕ್ತಿ, ಹಿಂದೂ ಧರ್ಮದ ಪುನರುತ್ಥಾನ ಹಾಗೂ ಭಾರತದ ಅಸ್ಮಿತೆ ಎನ್ನುವ ಬಣ್ಣನೆಗಳು ಸೇರಿದಂತೆ ಹಲವು ರೂಪಗಳಲ್ಲಿ ಮಂದಿರವನ್ನು ವ್ಯಾಖ್ಯಾನಿಸಲಾಗುತ್ತಿದೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಬಹುಜನ ಒಪ್ಪುವ ವ್ಯಾಖ್ಯಾನಗಳನ್ನು ನಿರಾಕರಿಸಲು ಸಾಧ್ಯವಿಲ್ಲ. ಆದರೆ, ಈ ಭಕ್ತಿ–ಭಾವ ಪರವಶತೆಯ ವ್ಯಾಖ್ಯಾನಗಳ ಜೊತೆಜೊತೆಯಲ್ಲೇ ಮಂದಿರ ನಿರ್ಮಾಣದ ಹಿನ್ನೆಲೆಯಲ್ಲಿ ನಡೆದ ಕಹಿ ವಿದ್ಯಮಾನಗಳು ನಮಗೆ ಪಾಠವಾಗಬೇಕು. ಸಂಘರ್ಷಗಳ ದಾರಿಯಲ್ಲಿ ಮೈದಳೆದಿರುವ ಮಂದಿರವು ಸೌಹಾರ್ದದ ಸಂಕೇತವಾಗಬೇಕಾಗಿದೆ. ಮಂದಿರವನ್ನು ಸಾಮರಸ್ಯದ ಕೇಂದ್ರವನ್ನಾಗಿ ರೂಪಿಸುವುದು ದೇಶದ ಮುಂದೆ ಈಗ ಉಳಿದಿರುವ ಸವಾಲು ಹಾಗೂ ಸಾಧ್ಯತೆ. ಬಾಲರಾಮನ ಅನಾವರಣದೊಂದಿಗೆ ಕಹಿ ಘಟನೆಗಳನ್ನು ಮರೆಯುವುದು ಹಾಗೂ ಸೌಹಾರ್ದದ ಹಂಬಲದೊಂದಿಗೆ ಮುನ್ನಡೆಯುವುದು ದೇಶದ ಹಿತಾಸಕ್ತಿಯ ದೃಷ್ಟಿಯಿಂದ ಭಾರತೀಯರೆಲ್ಲರಿಗೂ ಅನಿವಾರ್ಯವಾಗಿದೆ. ಸುಪ್ರೀಂ ಕೋರ್ಟ್‌ ತೀರ್ಪು ಹಾಗೂ ಕೇಂದ್ರ ಸರ್ಕಾರದ ಒತ್ತಾಸೆಯ ಮೇರೆಗೆ ರೂಪುಗೊಂಡಿರುವ ಮಂದಿರ ಇನ್ನುಮುಂದೆ ದೇಶದ ಏಕತೆ ಹಾಗೂ ಬಹುತ್ವವನ್ನು ಎತ್ತಿಹಿಡಿಯುವುದಕ್ಕೆ ಪ್ರೇರಣೆ ನೀಡುವಂತಾಗಬೇಕು ಎನ್ನುವುದು ಈ ದೇಶದ ಆರೋಗ್ಯವನ್ನು ಹಂಬಲಿಸುವವರ ಅಪೇಕ್ಷೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಧಾರ್ಮಿಕ ಸಂಭ್ರಮವೊಂದು ಇಷ್ಟು ವ್ಯಾಪಕವಾಗಿ ಪ್ರಕಟಗೊಂಡಿದ್ದು ಇದೇ ಮೊದಲು. ಈ ಸಂದರ್ಭವು ಸಂಭ್ರಮಕ್ಕಷ್ಟೇ ಸೀಮಿತಗೊಳ್ಳದೆ ಜವಾಬ್ದಾರಿಯ ರೂಪದಲ್ಲಿ ಬದಲಾದಾಗಷ್ಟೇ ಅಯೋಧ್ಯೆಯ ಮಂದಿರ ದೇಶದ ಸಮಗ್ರತೆಯನ್ನು ಬಿಂಬಿಸುವ ಕೇಂದ್ರವಾಗುವುದು ಸಾಧ್ಯವಾಗಬಹುದು. ಮಂದಿರದಲ್ಲಿ ರಾಮನನ್ನು ಪ್ರತಿಷ್ಠಾಪಿಸುವ ಸಡಗರ ಮುಗಿದು, ರಾಮನ ಆದರ್ಶಗಳನ್ನು ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರುವ ಸವಾಲು ಉಳಿದಿದೆ. ಮಂದಿರ ನಿರ್ಮಾಣವು ಭಕ್ತಿ ಹಾಗೂ ಬದ್ಧತೆಯ ಬಾಹ್ಯ ಪ್ರದರ್ಶನವಾಗಿದ್ದು, ರಾಮನ ಆದರ್ಶಗಳನ್ನು ಕಾರ್ಯರೂಪಕ್ಕೆ ತಂದಾಗಷ್ಟೇ ವಾಲ್ಮೀಕಿ ಕಾವ್ಯದ ನಾಯಕನಿಗೆ ನಿಜವಾದ ಗೌರವ ಸಲ್ಲಿಸಿದಂತಾಗುವುದು. ರಾಮನ ಆಡಳಿತ ಪ್ರಜಾಪ್ರಭುತ್ವದ ಮೌಲ್ಯ ವ್ಯವಸ್ಥೆಯನ್ನು ಪ್ರತಿನಿಧಿಸುವಂತಹದ್ದು; ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಭಿಪ್ರಾಯವನ್ನೂ ಸಮಾಧಾನದಿಂದ ಆಲಿಸುವಂತಹದ್ದು ಹಾಗೂ ಗೌರವಿಸುವಂತಹದ್ದು. ರಾಮ ಪಾಲಿಸಿದ್ದ ವಚನ ಪರಿಪಾಲನೆಯ ಮೌಲ್ಯವು ಸಮಕಾಲೀನ ಪ್ರಜಾಪ್ರತಿನಿಧಿಗಳಿಗೆ ಮಾದರಿಯಾಗಬೇಕು. ಸಂವಿಧಾನದ ಹೆಸರಿನಲ್ಲಿ ಅಧಿಕಾರ ಸ್ವೀಕರಿಸಿದವರು ತಮ್ಮ ಪ್ರತಿಜ್ಞಾವಿಧಿಗೆ ಬದ್ಧರಾಗಿರಲು ಶ್ರೀರಾಮ ಆತ್ಮಸಾಕ್ಷಿಯಾಗಿ ಪರಿಣಮಿಸಬೇಕು. ಚುನಾವಣೆ ಸಂದರ್ಭದಲ್ಲಿ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವ ಇಚ್ಛಾಶಕ್ತಿಯನ್ನೂ ಪ್ರಜಾಪ್ರತಿನಿಧಿಗಳು ರಾಮನಿಂದ ಪಡೆಯಬಹುದು. ಇವೆಲ್ಲದರ ಜೊತೆಗೆ, ಎಲ್ಲ ವರ್ಗದ ಜನರ ಸಂಕಷ್ಟಗಳಿಗೆ ಮಿಡಿಯುವ ಹಾಗೂ ಸಂವಿಧಾನಕ್ಕೆ ನಿಷ್ಠರಾಗಿರುವ ಅಗತ್ಯವನ್ನು ರಾಜಕಾರಣಿಗಳು ಮನಗಾಣಬೇಕು. ಅಧಿಕಾರ ಸ್ಥಾನದಲ್ಲಿರುವವರು ತ್ಯಾಗವನ್ನು ಮೈಗೂಡಿಸಿಕೊಳ್ಳಬೇಕೇ ಹೊರತು, ಭೋಗದ ಪ್ರತಿರೂಪಗಳಾಗಬಾರದು ಎನ್ನುವುದಕ್ಕೂ ರಾಮನೇ ಆದರ್ಶ. ನಂಜಿಲ್ಲದ, ರಾಮಪ್ರೇರಿತ ಜನಪರ ರಾಜಕಾರಣವನ್ನು ಕಾರ್ಯರೂಪಕ್ಕೆ ತರುವ ಹೊಣೆಗಾರಿಕೆಯು ಮಂದಿರ ನಿರ್ಮಾಣಕ್ಕೆ ಹೆಗಲು ಕೊಟ್ಟಿರುವ ಸರ್ಕಾರದ್ದೇ ಆಗಿದೆ. ಮಂದಿರ ನಿರ್ಮಾಣ ಸಂಪೂರ್ಣಗೊಳ್ಳುವ ಮೊದಲೇ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ವಿಧಿ ನಡೆದಿರುವುದನ್ನು ರಾಜಕೀಯ ತಂತ್ರಗಾರಿಕೆಯ ರೂಪದಲ್ಲಿ ನೋಡಲಾಗುತ್ತಿದೆ. ಧಾರ್ಮಿಕ ಸಂಭ್ರಮವಾದ ಮಂದಿರ ನಿರ್ಮಾಣವು ರಾಜಕೀಯ ದಾಳವಾಗಿ ಬಳಕೆಯಾಗಿರುವುದು ಧರ್ಮ ಹಾಗೂ ರಾಜಕಾರಣದ ನಡುವಿನ ಗೆರೆ ಅಳಿಸಿಹೋಗುತ್ತಿರುವುದಕ್ಕೆ ನಿದರ್ಶನದಂತಿದೆ. ಇನ್ನುಮುಂದಾದರೂ, ಅಯೋಧ್ಯೆಯ ಮಂದಿರವು ರಾಮಭಕ್ತರ ಶ್ರದ್ಧಾಕೇಂದ್ರವಾಗಿಯಷ್ಟೇ ಮುಂದುವರಿಯಲಿ. ರಾಜಕೀಯ ಆಟಗಳ ಕೇಂದ್ರವನ್ನಾಗಿ ಮಂದಿರವನ್ನು ಬಳಸಿಕೊಳ್ಳುವ ಉಮೇದಿನಿಂದ ರಾಜಕಾರಣಿಗಳು ಹೊರಬರಬೇಕು. ರಾಜಕೀಯ ಅಸ್ತಿತ್ವಕ್ಕಾಗಿ ಧರ್ಮ–ದೇವರುಗಳನ್ನು ಬಳಸಿಕೊಳ್ಳುವ ಚಾಳಿ ಕೊನೆಗೊಳ್ಳಬೇಕು. ಜನಸಾಮಾನ್ಯರಿಗೆ ಸಂಬಂಧಿಸಿದ ಧಾರ್ಮಿಕ ವಿಷಯಗಳಲ್ಲಿ ರಾಜಕಾರಣಿಗಳ ಹಸ್ತಕ್ಷೇಪ ಸಲ್ಲದು. ಜನಪ್ರತಿನಿಧಿಗಳು ತೊಡಗಿಕೊಳ್ಳಬೇಕಾದುದು ದೇಶದ ಅಭಿವೃದ್ಧಿಗೆ ಬೇಕಾದ ಶಾಲೆ, ಆಸ್ಪತ್ರೆ, ಕಾರ್ಖಾನೆಗಳಂಥ ‘ಮಂದಿರ’ಗಳನ್ನು ರೂಪಿಸುವುದರಲ್ಲೇ ಹೊರತು ಧಾರ್ಮಿಕ ಸ್ಥಾವರಗಳ ನಿರ್ಮಾಣದಲ್ಲಿ ಅಲ್ಲ. ಧರ್ಮನಿರಪೇಕ್ಷ ದೇಶದಲ್ಲಿ ಸಾಂವಿಧಾನಿಕ ಸ್ಥಾನ ಹೊಂದಿರುವವರು ಶುದ್ಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವುದು ಸರಿಯಲ್ಲ. ಎರಡು– ಮೂರು ತಿಂಗಳುಗಳಿಂದ ದೇಶದ ತುಂಬೆಲ್ಲ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಸುದ್ದಿಯೇ ಆವರಿಸಿಕೊಂಡಿತ್ತು; ಆಡಳಿತಯಂತ್ರ ಕೂಡ ಭಕ್ತಿಯ ಭಾವೋದ್ವೇಗದಲ್ಲಿ ಮೈಮರೆತಂತಿತ್ತು. ಇನ್ನು ಮುಂದಾದರೂ ಅಭಿವೃದ್ಧಿ ಚಟುವಟಿಕೆಗಳತ್ತ ಪ್ರಜಾಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನಹರಿಸಬೇಕು. ಉತ್ಸವದ ಕಾಲ ಮುಗಿದ ಮೇಲೆ, ಜನರ ಸಮಸ್ಯೆಗಳತ್ತ ಗಮನಹರಿಸುವುದು ಅನಿವಾರ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.