ಜನತಾಂತ್ರಿಕ ದನಿಯ ದಮನ ನಿಲ್ಲಲಿ ಕೋರೆಗಾಂವ್ ಭೀಮಾ ಎಂಬುದು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಭೀಮಾ ನದಿ ತೀರದ ಗ್ರಾಮ. ಕೋರೆಗಾಂವ್ ಗ್ರಾಮ ದಲಿತ ಸ್ವಾಭಿಮಾನದ ಐತಿಹಾಸಿಕ ಪ್ರತೀಕಗಳಲ್ಲಿ ಒಂದು. 1818ರ ಜನವರಿಯಲ್ಲಿ ಭೀಮಾ ಕೋರೆಗಾಂವ್ ಬಳಿ ನಡೆದ ಬ್ರಿಟಿಷ್ - ಮರಾಠಾ ಯುದ್ಧದಲ್ಲಿ ಅಂತಿಮ ಜಯ ಬ್ರಿಟಿಷ್ ಸೇನೆಯದಾಗಿತ್ತು. ಬ್ರಿಟಿಷರ ಸೇನೆಯಲ್ಲಿ ದಲಿತರಿದ್ದರು. ಈ ವಿಜಯ ಮೇಲ್ಜಾತಿಗಳ ದೌರ್ಜನ್ಯದ ವಿರುದ್ಧದ ವಿಜಯ ಎಂದು ದಲಿತರು ಬಗೆಯುತ್ತ ಬಂದರು. ಇದೇ ವರ್ಷದ ಜನವರಿಯಲ್ಲಿ ಈ ವಿಜಯದ 200ನೇ ವರ್ಷದ ದೊಡ್ಡ ರೀತಿಯ ಆಚರಣೆಗೆ 260 ಸಂಘಟನೆಗಳ ಎಲ್ಗಾರ್ ಪರಿಷತ್ ಮುಂದಾಗಿತ್ತು. ಕೋರೆಗಾಂವ್ ಭೀಮಾದ ನೆರೆಯ ಹಳ್ಳಿಯಲ್ಲಿ ಶಿವಾಜಿಯ ಮಗ ಸಂಭಾಜಿಯ ಸಮಾಧಿಯಿದೆ. ಅದರ ಪಕ್ಕದಲ್ಲಿರುವ ಮತ್ತೊಂದು ಪುಟ್ಟ ಸಮಾಧಿ ‘ಅಸ್ಪೃಶ್ಯ’ ಮಹಾರ್ ಜಾತಿಗೆ ಸೇರಿದ ಗೋವಿಂದ ಗಾಯಕ್‌ವಾಡನದು. ಔರಂಗಜೇಬನಿಂದ ಚಿತ್ರಹಿಂಸೆಗೀಡಾಗಿ ಕೊಲ್ಲಲ್ಪಟ್ಟ ಸಂಭಾಜಿಯ ದೇಹದ ಭಾಗಗಳನ್ನು ಹೊಲಿದು ಅಂತ್ಯಕ್ರಿಯೆ ನೆರವೇರಿಸಿದವನು ಗೋವಿಂದ ಗಾಯಕ್‌ವಾಡ ಎಂಬುದು ವ್ಯಾಪಕ ನಂಬಿಕೆ. ಮರಾಠ ಜನಾಂಗ ಈ ನಂಬಿಕೆಯನ್ನು ಒಪ್ಪುವುದಿಲ್ಲ. ಗಾಯಕ್‌ವಾಡ ಯಾರು ಎಂದು ವಿವರಿಸುವ ಫಲಕವನ್ನು ಕಿತ್ತೆಸೆದು ಆತನ ಸಮಾಧಿಯನ್ನು ವಿರೂಪಗೊಳಿಸುವ ಕೃತ್ಯ ಕೋರೆಗಾಂವ್ ಭೀಮಾ ವಿಜಯೋತ್ಸವದ ಮುನ್ನಾದಿನ ನಡೆಯಿತು. ಪರಿಣಾಮವಾಗಿ ಜನವರಿ ಒಂದರಂದು ಪುಣೆ ಮುಂಬಯಿ ಶಹರಗಳಲ್ಲಿ ಭಾರೀ ಹಿಂಸೆ- ಪ್ರತಿಹಿಂಸೆಯ ಪ್ರಕರಣಗಳು ಜರುಗಿದವು. ಈ ಹಿಂಸಾಚಾರ ಕುರಿತು ಮಹಾರಾಷ್ಟ್ರದ ಪೊಲೀಸರು ತನಿಖೆ ನಡೆಸಿದ್ದಾರೆ. ಕಳೆದ ಜೂನ್ ತಿಂಗಳಿನಲ್ಲಿ ‘ಅರ್ಬನ್ ನಕ್ಸಲೈಟ್ಸ್’ ಹಣೆಪಟ್ಟಿ ಹಚ್ಚಿ ಹತ್ತು ಮಂದಿ ಮಾನವ ಹಕ್ಕುಗಳ ಹೋರಾಟಗಾರರನ್ನು ಬಂಧಿಸಿದ್ದರು. ಅವರು ನೀಡಿದ ‘ಸುಳಿವಿನ ಮೇರೆಗೆ’ ಹೈದರಾಬಾದ್, ಪುಣೆ, ಫರೀದಾಬಾದ್, ಮುಂಬೈ, ಪಣಜಿಯಲ್ಲಿ ದಾಳಿ ನಡೆಸಿ ಐವರು ಕವಿ- ಬರಹಗಾರ- ಮಾನವಹಕ್ಕುಗಳ ಹೋರಾಟಗಾರರನ್ನು ಮಂಗಳವಾರ ಅಕ್ರಮ ಚಟುವಟಿಕೆಗಳ ತಡೆ ಕಾಯಿದೆಯಡಿ ಬಂಧಿಸಲಾಗಿದೆ. ಈ ಬಂಧನದ ವಿರುದ್ಧ ಹಿರಿಯ ಚಿಂತಕರು, ಇತಿಹಾಸಕಾರರು, ಲೇಖಕರು, ಮಾನವಹಕ್ಕುಗಳ ಹೋರಾಟಗಾರರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಖ್ಯಾತ ಇತಿಹಾಸಜ್ಞೆ ರೊಮಿಲಾ ಥಾಪರ್ ಮತ್ತು ಇತರರು ಬುಧವಾರ ಈ ಕುರಿತು ಸುಪ್ರೀಂ ಕೋರ್ಟ್ ಕದ ತಟ್ಟಿದರು. ಬಂಧನ ರದ್ದು ಮತ್ತು ಸ್ವತಂತ್ರ ತನಿಖೆಯ ಅವರ ಬೇಡಿಕೆಯ ಅರ್ಜಿಯನ್ನು ನ್ಯಾಯಾಲಯ ವಿಚಾರಣೆಗೆ ಅಂಗೀಕರಿಸಿದೆ. ಬಂಧಿತರನ್ನು ಗೃಹಬಂಧನದಲ್ಲಿ ಇರಿಸಬೇಕು ಎಂಬ ರಿಯಾಯಿತಿ ನೀಡಿರುವ ಸುಪ್ರೀಂ ಕೋರ್ಟ್ ಪ್ರತಿಕ್ರಿಯೆ ನೀಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ನೀಡಿರುವ ಆದೇಶ ಜನತಾಂತ್ರಿಕ ವ್ಯವಸ್ಥೆಯಲ್ಲಿ ನಂಬಿಕೆಯನ್ನು ಸದ್ಯಕ್ಕೆ ಎತ್ತಿ ಹಿಡಿದಿದೆ. ಮಾವೋವಾದಿಗಳ ನಂಟು ಹೊಂದಿರುವ ಈ ಕಾರ್ಯಕರ್ತರು ಭೀಮಾ ಕೋರೇಗಾಂವ್ ವಿಜಯೋತ್ಸವ ನಂತರದ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದವರು ಎಂಬುದು ಪೊಲೀಸರ ಆರೋಪ. ಪ್ರಧಾನಿ ಮೋದಿಯವರ ಹತ್ಯೆಯ ಸಂಚಿನ ಗುರುತರ ಆಪಾದನೆಯನ್ನೂ ಈ ಐವರು ಮಾನವ ಹಕ್ಕುಗಳ ಪ್ರತಿಪಾದಕರ ಮೇಲೆ ಹೊರಿಸಲಾಗಿದೆ. ಆದರೆ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ್ದ ಆರೋಪ ಹೊತ್ತಿದ್ದ ಬಲಪಂಥೀಯ ಸಂಘಟನೆಗಳ ಮುಂದಾಳುಗಳಾದ ಮಿಲಿಂದ್ ಏಕಬೋಟೆ ಮತ್ತು ಭಿಡೆ ಗುರೂಜಿ ಅವರನ್ನು ಕಾನೂನಿನ ಕೈಗಳು ಮುಟ್ಟದಿರುವುದು ಪ್ರಭುತ್ವದ ಪಕ್ಷಪಾತದ ನಡೆಯ ಸಂದೇಹವನ್ನು ಮೂಡಿಸಿದೆ. ಕೇಂದ್ರ ಸರ್ಕಾರದ ಕಾರ್ಪೊರೇಟ್ ಮಿತ್ರರು ಈ ಬಂಧನಗಳ ಹಿಂದಿದ್ದಾರೆ. ಆದಿವಾಸಿಗಳನ್ನು ಒಕ್ಕಲೆಬ್ಬಿಸಿ ಅಡವಿಗಳನ್ನೂ, ಖನಿಜ ಸಂಪನ್ಮೂಲಗಳನ್ನು ಕಿತ್ತುಕೊಳ್ಳುವುದು ಅವರ ಹುನ್ನಾರ ಎಂಬ ಆರೋಪಗಳನ್ನು ಮಾಡಲಾಗುತ್ತಿದೆ. ನಿರ್ದಿಷ್ಟ ಕೋಮು ಮತ್ತು ಜಾತಿಗಳ ವ್ಯಕ್ತಿಗಳನ್ನು ಗೋವಿನ ಹೆಸರಿನಲ್ಲಿ ಹಾಡಹಗಲೇ ಜಜ್ಜಿ ಕೊಲ್ಲುವ ಕೋಮುವಾದಿ ಗುಂಪುಗಳ ಮೇಲೆ ಕ್ರಮ ಜರುಗುವುದಿಲ್ಲ. ಬದಲಾಗಿ ಕೇಂದ್ರ ಮಂತ್ರಿಗಳೇ ಅವರ ಕೊರಳಿಗೆ ಹೂ ಹಾರ ತೊಡಿಸಿ ಸನ್ಮಾನ ಮಾಡಿ ಕಾನೂನಿನ ಕೈಗಳಿಂದ ಕಾಪಾಡುವಂತಹ ವಿದ್ಯಮಾನ ಜರುಗುತ್ತದೆ. ಹಿಂದೂ ಬಹುಸಂಖ್ಯಾತವಾದದ ವಿರುದ್ಧ ದನಿ ಎತ್ತುವವರು, ನ್ಯಾಯ ಕೇಳಿ ಬಾಯಿ ತೆರೆಯುವವರನ್ನು ಅಪರಾಧಿಯ ಸ್ಥಾನದಲ್ಲಿ ನಿಲ್ಲಿಸಲಾಗುತ್ತಿದೆ. ಹತ್ಯೆಗಳೂ ನಡೆದಿವೆ. ಲೋಕಸಭಾ ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ಸಂವಿಧಾನದ ಆಶಯಗಳು ಮತ್ತು ವ್ಯಕ್ತಿ ಸ್ವಾತಂತ್ರ್ಯ ಹನನದ ಪ್ರಯತ್ನ ನಡೆದಿದೆ. ದೇಶದಲ್ಲಿ ಒಂದು ಬಗೆಯ ಭಯದ ವಾತಾವರಣವನ್ನು ನಿರ್ಮಿಸಲಾಗುತ್ತಿದೆ ಎಂಬ ಟೀಕೆಗಳನ್ನು ಸುಲಭವಾಗಿ ತಳ್ಳಿ ಹಾಕಲು ಬರುವುದಿಲ್ಲ. ಜನತಂತ್ರದ ದನಿಗಳ ದಮನದ ಆರೋಪದಿಂದ ಪ್ರಭುತ್ವ ಮುಕ್ತವಾಗಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.