ಸೆಕ್ಷನ್ 377: ಬದಲಾದ ಕೇಂದ್ರದ ನಿಲುವು, ಹೆಚ್ಚಿದ ನಿರೀಕ್ಷೆ ಸಲಿಂಗ ಕಾಮವನ್ನು ಅಪರಾಧ ಎಂದು ಪರಿಗಣಿಸುವ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377ರ ಸಿಂಧುತ್ವದ ಬಗ್ಗೆ ನಿರ್ಧಾರ ಕೈಗೊಳ್ಳುವ ವಿವೇಚನೆಯನ್ನು ಸುಪ್ರೀಂ ಕೋರ್ಟ್‌ಗೇ ಕೇಂದ್ರ ಸರ್ಕಾರ ಬಿಟ್ಟುಕೊಟ್ಟಿದೆ. ಈ ವಿಚಾರದಲ್ಲಿ ಯಾವುದೇ ನಿಲುವು ತೆಗೆದುಕೊಳ್ಳದೆ ಕೇಂದ್ರ ಸರ್ಕಾರ ತಟಸ್ಥ ನಿಲುವು ತಳೆದಿರುವುದು ಪ್ರಮುಖ ಬೆಳವಣಿಗೆ. ಈ ಹಿಂದೆ, ಸೆಕ್ಷನ್‌ 377 ಅನ್ನು ಅಪರಾಧ ವ್ಯಾಪ್ತಿಯಿಂದ ಹೊರತಂದಾಗ ಅಧಿಕಾರದಲ್ಲಿದ್ದ ಸರ್ಕಾರಗಳು ಅದನ್ನು ಪ್ರಶ್ನಿಸಿವೆ. ಹೀಗಾಗಿ ಈಗ ಚೆಂಡು ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ಈ ಕರಾಳ ಸೆಕ್ಷನ್ ಸಿಂಧುತ್ವದ ವಿಚಾರವನ್ನು ನಿರ್ಣಾಯಕವಾಗಿ ಅಂತ್ಯಗೊಳಿಸುವಂತಹ ಅವಕಾಶ ಏರ್ಪಟ್ಟಿದೆ. ಸೆಕ್ಷನ್ 377ರ ಬಗ್ಗೆ ರಾಜಕೀಯ ನೇತಾರರು ಈವರೆಗೆ ಗೊಂದಲದ ನಿಲುವುಗಳನ್ನು ಪ್ರದರ್ಶಿಸಿಕೊಂಡು ಬಂದಿದ್ದಾರೆ. ಈಗಲೂ ಈ ವಿಚಾರದ ಬಗ್ಗೆ ಖಚಿತ ನಿಲುವು ತಳೆಯುವ ಬದಲು ತಟಸ್ಥ ನಿಲುವು ಆಯ್ಕೆ ಮಾಡಿಕೊಂಡಿರುವಲ್ಲಿ ಹಿಂಜರಿಕೆ ವ್ಯಕ್ತವಾಗುತ್ತದೆ. ಪ್ರಮುಖ ರಾಜಕೀಯ ಪಕ್ಷಗಳ ನೇತಾರರಿಗೆ ಸಾಂಪ್ರದಾಯಿಕ ಮತದಾರರನ್ನು ಎದುರು ಹಾಕಿಕೊಳ್ಳುವ ಭೀತಿ ಬಹುಶಃ ಇದಕ್ಕೆ ಕಾರಣ ಇರಬಹುದು. ಆದರೆ ಸಲಿಂಗ ಕಾಮವನ್ನು ಅಪರಾಧ ವ್ಯಾಖ್ಯೆಗೆ ಮರಳಿ ತಂದಂತಹ ಸುಪ್ರೀಂ ಕೋರ್ಟ್‌ನ 2013ರ ತೀರ್ಪಿನ ಬಗ್ಗೆ ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿ ಹಾಗೂ ಬಿಜೆಪಿ ನಾಯಕ ಅರುಣ್ ಜೇಟ್ಲಿ ಅವರಂತಹವರು ಟೀಕಿಸಿದ್ದರು. ಸಲಿಂಗ ಕಾಮವನ್ನು ಅಪರಾಧ ವ್ಯಾಖ್ಯೆಯಿಂದ ಕೈಬಿಡುವುದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಶಶಿ ತರೂರ್ ಅವರು ಮಂಡಿಸಿದ್ದ ಖಾಸಗಿ ಮಸೂದೆಯು ಲೋಕಸಭೆಯಲ್ಲಿ ‘ಬಹುಸಂಖ್ಯಾತ ಬಲ’ದಲ್ಲಿ ಸೋಲುಂಡಿತ್ತು. ‘ಸಲಿಂಗ ಕಾಮ ಅನೈಸರ್ಗಿಕ’ ಎಂದು ಬಿಜೆಪಿಯ ರಾಜನಾಥ್ ಸಿಂಗ್ ಹಾಗೂ ಕಾಂಗ್ರೆಸ್‌ನ ಗುಲಾಂ ನಬಿ ಆಜಾದ್ ವಾದಿಸಿದ್ದೂ ಇದೆ. ಸೆಕ್ಷನ್ 377– ಸಂವಿಧಾನದ 14, 16 ಹಾಗೂ 21ನೇ ವಿಧಿಗಳ ಉಲ್ಲಂಘನೆಯಾಗಿದೆ ಎಂದು 2009ರಲ್ಲಿ ದೆಹಲಿ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿತ್ತು. ಆದರೆ ಈ ತೀರ್ಪನ್ನು ರದ್ದು ಮಾಡಿ, ಈ ಕುರಿತಂತೆ ಕಾನೂನು ತಿದ್ದುಪಡಿ ಮಾಡುವುದು ಸಂಸತ್‌ಗೆ ಸೇರಿದ್ದು ಎಂದು ಸುಪ್ರೀಂ ಕೋರ್ಟ್ 2013ರಲ್ಲಿ ತೀರ್ಪು ನೀಡಿತ್ತು. ಆದರೆ ಈಗ ಸರ್ಕಾರ ಇದನ್ನು ಸುಪ್ರೀಂ ಕೋರ್ಟ್ ವಿವೇಚನೆಗೇ ಬಿಟ್ಟುಕೊಟ್ಟಿದೆ. ಖಾಸಗಿತನದ ಹಕ್ಕು, ಸಂವಿಧಾನ ನೀಡಿರುವ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಕಳೆದ ವರ್ಷ ತೀರ್ಪು ನೀಡಿದೆ. ಲೈಂಗಿಕತೆಯೂ ಖಾಸಗಿ ವಿಚಾರವಾದ್ದರಿಂದ ಸೆಕ್ಷನ್ 377 ಸಹಜವಾಗಿಯೇ ಅರ್ಥಹೀನವಾಗುತ್ತದೆ. ‘ಲೈಂಗಿಕತೆ ಎಂಬುದು ಖಾಸಗಿತನದ ಅಗತ್ಯ ಅಂಶ. ಲೈಂಗಿಕತೆ ಆಧಾರದ ಮೇಲೆ ವ್ಯಕ್ತಿಯ ವಿರುದ್ಧ ತಾರತಮ್ಯ ಮಾಡುವುದು ವ್ಯಕ್ತಿಯ ಘನತೆಗೆ ಧಕ್ಕೆ ತರುವಂತಹದ್ದು’ ಎಂದು ಆ ತೀರ್ಪಿನಲ್ಲಿ ನ್ಯಾಯಮೂರ್ತಿ ಚಂದ್ರಚೂಡ್ ಅವರು ಬರೆದಿದ್ದರು. ಭಾರತೀಯ ದಂಡ ಸಂಹಿತೆಯನ್ನು ನಮಗೆ ನೀಡಿದ ಬ್ರಿಟಿಷರ ನಾಡಿನಲ್ಲೇ ಸಲಿಂಗ ಕಾಮ ಅಪರಾಧವಾಗಿ ಉಳಿದಿಲ್ಲ ಎಂಬುದನ್ನು ನಾವು ಗಮನಿಸಬೇಕು. ಭಾರತೀಯ ಪುರಾತನ ಸಮಾಜದಲ್ಲಿ ಸಲಿಂಗ ಕಾಮ ಇತ್ತು ಎಂಬುದನ್ನು ಪುರಾತನ ದೇವಾಲಯಗಳಲ್ಲಿರುವ ಶಿಲ್ಪಗಳೂ ಸಾರಿಹೇಳುತ್ತಿವೆ. ಆದರೆ ಭಾರತ ಈಗಲೂ ವಿಕ್ಟೋರಿಯನ್ ಕಾಲದ ನೀತಿಸಂಹಿತೆಗಳಿಗೆ ಜೋತುಬಿದ್ದಿರುವುದು ವಿಪರ್ಯಾಸ. 158 ವರ್ಷಗಳಷ್ಟು ಹಳೆಯದಾದ ಸವಕಲಾದ ಕಾನೂನನ್ನು ರದ್ದುಪಡಿಸಲು ಈಗ ಸಕಾಲ. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ನ್ಯಾಯಶಾಸ್ತ್ರದ ಪರಿಕಲ್ಪನೆಗಳೂ ಬದಲಾಗಬೇಕು. ಸೆಕ್ಷನ್ 377 ರದ್ದಾದರೆ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಸಮಾಜದಲ್ಲಿ ಇರುವ ಅಸ್ಪೃಶ್ಯತಾ ಭಾವವೂ ದೂರವಾಗುತ್ತದೆ ಎಂದು ಈ ವಿಚಾರದ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ಪೀಠ ಅಭಿಪ್ರಾಯಪಟ್ಟಿರುವುದು ಸ್ವಾಗತಾರ್ಹ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.