ಪೌರ ಕಾರ್ಮಿಕರ ವೇತನ ವಿಳಂಬ ಆಡಳಿತ ಯಂತ್ರದ ವೈಫಲ್ಯ ಆರು ತಿಂಗಳಿಂದ ಸಂಬಳ ಸಿಗದೆ ನಿರಾಶೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಎಸ್‌. ಸುಬ್ರಮಣಿ ಎನ್ನುವ ಪೌರ ಕಾರ್ಮಿಕನ ಸಾವಿಗೆ ಆಡಳಿತ ಯಂತ್ರದ ವೈಫಲ್ಯ ನೇರ ಕಾರಣವಾಗಿದೆ. ಯಾವ ಯಾವುದೋ ಕಾರಣಗಳನ್ನು ನೀಡಿ ಆರು ತಿಂಗಳ ಕಾಲ ಸಂಬಳವನ್ನು ನೀಡದೆ ಇರುವುದು ಅಧಿಕಾರಿಗಳ ಕರ್ತವ್ಯಲೋಪ ಆಗಿರುವುದಲ್ಲದೆ ಅಮಾನವೀಯತೆಯೂ ಆಗಿದೆ. ಬಾಕಿ ಸಂಬಳ ನೀಡುವಂತೆ ಒತ್ತಾಯಿಸಿ ಪೌರ ಕಾರ್ಮಿಕರು ಕಳೆದ ತಿಂಗಳು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ, ಮೂರು ದಿನಗಳಲ್ಲಿ ಬಾಕಿ ವೇತನ ನೀಡುವುದಾಗಿ ಬಿಬಿಎಂಪಿ ಆಯುಕ್ತರು ಭರವಸೆ ನೀಡಿದ್ದರು. ಅವರ ಮಾತು ಕೂಡ ಕಾಗದದ ಮೇಲಷ್ಟೇ ಉಳಿದಿರುವುದು ಕಾರ್ಮಿಕರ ಹತಾಶೆಯನ್ನು ಸಹಜವಾಗಿಯೇ ಹೆಚ್ಚಿಸಿದೆ. ಗುತ್ತಿಗೆದಾರರು 32 ಸಾವಿರ ಪೌರಕಾರ್ಮಿಕರ ಪಟ್ಟಿಯೊಂದನ್ನು 2017ರ ಮೇ ತಿಂಗಳಲ್ಲಿ ಬಿಬಿಎಂಪಿಗೆ ಸಲ್ಲಿಸಿದ್ದರು. ಆದರೆ, ಪ್ರತಿ 700 ನಾಗರಿಕರಿಗೆ ಒಬ್ಬರ ಸರಾಸರಿಯಂತೆ ಪೌರಕಾರ್ಮಿಕರ ಸಂಖ್ಯೆಯನ್ನು 18 ಸಾವಿರಕ್ಕೆ ಸೀಮಿತಗೊಳಿಸಲಾಗಿತ್ತು. ಇದೆಲ್ಲ ಕಸರತ್ತಿನ ನಂತರ, ಕಳೆದ ಜನವರಿ ತಿಂಗಳಿನಿಂದ ಪೌರ ಕಾರ್ಮಿಕರ ವೇತನವನ್ನು ಅವರ ಬ್ಯಾಂಕ್‌ ಖಾತೆಗೆ ನೇರವಾಗಿ ಪಾವತಿ ಮಾಡಲು ಬಿಬಿಎಂಪಿ ನಿಶ್ಚಯಿಸಿತ್ತು. ಈವರೆಗೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಪಟ್ಟಿಯಲ್ಲಿನ ನಕಲಿ ಕಾರ್ಮಿಕರ ಹೆಸರುಗಳನ್ನು ತೆಗೆದುಹಾಕುವ ಪ್ರಕ್ರಿಯೆ ನಡೆಯುತ್ತಿರುವುದರಿಂದ ಸಂಬಳ ವಿಳಂಬವಾಗುತ್ತಿದೆ ಎನ್ನುವುದು ಅಧಿಕಾರಿಗಳ ಸಮಜಾಯಿಷಿ. ಬೆಂಗಳೂರಿನಂಥ ಮಹಾನಗರದಲ್ಲಿ ಮನೆ ಬಾಡಿಗೆ ನೀಡಿ, ಜೀವನ ನಿರ್ವಹಣೆ ನಡೆಸುವ ಕಾರ್ಮಿಕರ ಕಷ್ಟವನ್ನು ಅರ್ಥ ಮಾಡಿಕೊಳ್ಳದಷ್ಟು ಅಧಿಕಾರಿ ವರ್ಗ ಜಡ್ಡುಗಟ್ಟಿದೆ. ಗುತ್ತಿಗೆದಾರರ ಹಿತಾಸಕ್ತಿಯನ್ನು ರಕ್ಷಿಸುವ ದೃಷ್ಟಿಯಿಂದ ವೇತನದ ನೇರ ಪಾವತಿಗೆ ಬಿಬಿಎಂಪಿ ಉತ್ಸಾಹ ತೋರುತ್ತಿಲ್ಲ ಎನ್ನುವ ಕಾರ್ಮಿಕರ ಸಂಘಟನೆಯ ದೂರನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಕಾರ್ಮಿಕರ ದಿನಗೂಲಿಯಲ್ಲಿ ಪಾಲು ಪಡೆಯುವ ಗುತ್ತಿಗೆದಾರರ ಕಮಿಷನ್‌ ದಂಧೆಯೊಂದಿಗೆ ಅಧಿಕಾರಿಗಳೂ ಕೈಜೋಡಿಸಿರುವ ಆರೋಪಗಳ ಬಗ್ಗೆ ತನಿಖೆ ನಡೆದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರನ್ನು ಒಂದು ಬ್ರ್ಯಾಂಡ್‌ ಆಗಿ ಬಿಂಬಿಸುವ ಬಿಬಿಎಂಪಿ, ಇನ್ನೊಂದೆಡೆ ಪೌರಕಾರ್ಮಿಕರ ಬದುಕು ಅಸಹನೀಯವಾಗುವಂತೆ ವರ್ತಿಸುವುದು ಲಜ್ಜೆಗೇಡಿ ವರ್ತನೆ. ಆತ್ಮಹತ್ಮೆ ಮಾಡಿಕೊಂಡ ಕಾರ್ಮಿಕನ ಕುಟುಂಬಕ್ಕೆ ₹ 10 ಲಕ್ಷ ಪರಿಹಾರವನ್ನು ಬಿಬಿಎಂಪಿ ನೀಡಿದೆ. ಪರಿಹಾರ ನೀಡುವುದರೊಂದಿಗೆ ಅದು ಕೈತೊಳೆದುಕೊಳ್ಳುವುದು ಸಾಧ್ಯವಿಲ್ಲ. ಎಲ್ಲ ಪೌರ ಕಾರ್ಮಿಕರ ಸಂಬಳವನ್ನು ತಕ್ಷಣವೇ ಬಿಡುಗಡೆ ಮಾಡುವುದು ಹಾಗೂ ಮುಂದಿನ ದಿನಗಳಲ್ಲಿ ವೇತನ ಪಾವತಿ ವಿಳಂಬವಾಗದಿರುವಂತೆ ನೋಡಿಕೊಳ್ಳುವ ಹೊಣೆಗಾರಿಕೆಯನ್ನು ಹೊರಬೇಕಾಗಿದೆ. ಸಂಬಳದ ಜೊತೆಗೆ ಪೌರಕಾರ್ಮಿಕರ ಸುರಕ್ಷತೆಯ ಬಗ್ಗೆಯೂ ಪಾಲಿಕೆ ಮುತುವರ್ಜಿ ವಹಿಸಬೇಕು. ಕೊಳೆತ ಹಾಗೂ ರಾಸಾಯನಿಕಗಳು ಸೇರಿದ ತ್ಯಾಜ್ಯವನ್ನು ವಿಲೇವಾರಿ ಮಾಡುವ ಸಂದರ್ಭದಲ್ಲಿ ಕಾರ್ಮಿಕರು ವಿವಿಧ ರೀತಿಯ ಸೋಂಕುಗಳಿಗೆ ನೇರವಾಗಿ ಒಳಗಾಗುತ್ತಾರೆ. ಆ ಕಾರಣದಿಂದಲೇ ಅನೇಕ ಕಾರ್ಮಿಕರು ಚರ್ಮದ ಅಲರ್ಜಿ ಹಾಗೂ ಶ್ವಾಸಕೋಶದ ಸಮಸ್ಯೆಗಳಿಂದ ಬಳಲುತ್ತಾರೆ. ಬೆನ್ನೆಲುಬು ಗಾಸಿಗೊಂಡು ನರಳುತ್ತಿರುವ ಪೌರಕಾರ್ಮಿಕರ ಉದಾಹರಣೆಗಳೂ ವರದಿಯಾಗಿವೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದ ಎಚ್‌. ಆಂಜನೇಯ, ‘ಶೇ 90ರಷ್ಟು ಕಾರ್ಮಿಕರು ನಿವೃತ್ತಿಗೆ ಮೊದಲೇ ಸಾವಿಗೀಡಾಗುತ್ತಾರೆ’ ಎಂದು ಹೇಳಿದ್ದನ್ನೂ ಇಲ್ಲಿ ನೆನಪಿಸಿಕೊಳ್ಳಬೇಕು. ನಗರದ ಆರೋಗ್ಯವನ್ನು ರಕ್ಷಿಸಲು ದುಡಿಯುವ ಪೌರಕಾರ್ಮಿಕರ ಆರೋಗ್ಯದ ರಕ್ಷಣೆ ಸರ್ಕಾರದ ಜವಾಬ್ದಾರಿ. ಭವಿಷ್ಯನಿಧಿ, ಇಎಸ್‌ಐ ಸೌಲಭ್ಯದ ಜೊತೆಗೆ ಶೂ, ಕೈಗವಸು, ಸಮವಸ್ತ್ರ, ಮುಖಗವಸುಗಳು ಕಾರ್ಮಿಕರಿಗೆ ಸರಿಯಾಗಿ ದೊರೆಯುವಂತೆ ನಿಗಾ ವಹಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.