ಗುಂಪುಗೂಡಿ ಸಾಯಬಡಿಯುವ ಕ್ರೌರ್ಯ ಆಡಿದ ಮಾತನ್ನು ನಡೆಸಿಕೊಡಬೇಕು ಗುಂಪುಗೂಡಿ ಸಾಯಬಡಿಯುವ ಕೃತ್ಯಗಳನ್ನು ತಡೆಯಲು ಕಾನೂನು ರೂಪಿಸುವ ಸಲುವಾಗಿ ಉನ್ನತ ಮಟ್ಟದ ಎರಡು ಸಮಿತಿಗಳನ್ನು ಕೇಂದ್ರ ಸರ್ಕಾರ ರಚಿಸಿದೆ. ಗೃಹ ಇಲಾಖೆಯ ಕಾರ್ಯದರ್ಶಿ ರಾಜೀವ್ ಗೌಬಾ ಅವರ ನೇತೃತ್ವದ ಅಧಿಕಾರಿಗಳ ಸಮಿತಿಯು ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಚಿವರ ಸಮೂಹಕ್ಕೆ ವರದಿ ಸಲ್ಲಿಸಲಿದೆ. ಅದನ್ನು ಆಧರಿಸಿ ಸಚಿವರ ಸಮೂಹವು ಹೊಸ ಕಾನೂನು ಕುರಿತು ನಾಲ್ಕು ವಾರಗಳಲ್ಲಿ ತನ್ನ ಶಿಫಾರಸುಗಳನ್ನು ಪ್ರಧಾನಿಯವರಿಗೆ ಸಲ್ಲಿಸಬೇಕಿದೆ. ಈ ಭಯಾನಕ ಕೃತ್ಯಗಳನ್ನು ತಡೆಯಲು ಪರಿಣಾಮಕಾರಿ ಕಾನೂನು ಜಾರಿಗೆ ತರುವಂತೆ ಸುಪ್ರೀಂ ಕೋರ್ಟ್ ಕಳೆದ ವಾರ ಸಲಹೆ ನೀಡಿತ್ತು. ದೇಶದಲ್ಲಿ ನಿಲ್ಲದೆ ನಡೆದಿರುವ ಮಾರಕ ಗುಂಪುದಾಳಿಗಳನ್ನು ತಹಬಂದಿಗೆ ತರುವ ಕುರಿತ ತನ್ನ ಇರಾದೆಗಳು ಪ್ರಾಮಾಣಿಕವೆಂದು ಕೇಂದ್ರ ಸರ್ಕಾರ ಇನ್ನಾದರೂ ಮನವರಿಕೆ ಮಾಡಿಕೊಡಬೇಕಿದೆ. ರಾಜಸ್ಥಾನದಲ್ಲಿ ಗೋವು ಸಾಗಿಸುತ್ತಿದ್ದ ರಕ್ಬರ್ ಖಾನ್ ಎಂಬುವರನ್ನು ಗೋರಕ್ಷಕರು ಮತ್ತು ಪೊಲೀಸರು ಸಾಯಬಡಿದಿರುವುದು ಈ ಸರಣಿಯ ಇತ್ತೀಚಿನ ಘಟನೆ. ಸದ್ಯದಲ್ಲೇ ವಿಧಾನಸಭೆ ಚುನಾವಣೆ ಎದುರಿಸಬೇಕಿರುವ ರಾಜಸ್ಥಾನದಲ್ಲಿ ಗೋವಿನ ಹೆಸರಿನಲ್ಲಿ ಮನುಷ್ಯರನ್ನು ಸಾಯಬಡಿದಿರುವ ಮೂರನೆಯ ಪ್ರಕರಣವಿದು. ದೇಶದಾದ್ಯಂತ ನಡೆಯುತ್ತಿರುವ ಇಂತಹ ಹತ್ಯೆಗಳಿಗೆ ಹೆಚ್ಚಾಗಿ ಮುಸ್ಲಿಮರು ಮತ್ತು ದಲಿತರು ಶಿಕಾರಿಗಳಾಗುತ್ತಿದ್ದಾರೆ. ಅಪರಾಧಿಗಳ ಮೇಲೆ ಬಿಗಿ ಕಾನೂನು ಕ್ರಮ ಜರುಗಿಸುವ ಮಾತನ್ನು ಕೇಂದ್ರ ಸರ್ಕಾರ ಮತ್ತು ಸಂಬಂಧಪಟ್ಟ ರಾಜ್ಯ ಸರ್ಕಾರಗಳು ಪ್ರತಿಬಾರಿಯೂ ಆಡಿವೆ. ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲೇ ಹೆಚ್ಚಾಗಿ ಜರುಗಿರುವ ಈ ಪ್ರಕರಣಗಳ ಮುಂದೆ ಖುದ್ದು ನರೇಂದ್ರ ಮೋದಿಯವರೂ ಅಸಹಾಯಕರು ಎಂಬುದು ವ್ಯಥೆಯ ವಿಷಯ. ಗೋರಕ್ಷಕರ ಗುಂಪು ಹಿಂಸಾಚಾರವನ್ನು ಪ್ರಧಾನಿ ಮೂರು ಬಾರಿ ಖಂಡಿಸಿದ್ದಾರೆ. ಬಹುಪಾಲು ಹಿಂಸಾಚಾರಿಗಳು ಗೋರಕ್ಷಕರ ಮುಖವಾಡ ಧರಿಸಿದ ಸಮಾಜಘಾತಕ ಶಕ್ತಿಗಳು. ಇವರ ಪೈಕಿ ಶೇ 80ರಷ್ಟು ಮಂದಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದವರು. ಗೋರಕ್ಷಣೆಯ ಹೆಸರಿನಲ್ಲಿ ದಂಧೆ ನಡೆಸಲಾಗುತ್ತಿದೆ. ರಾತ್ರಿ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ. ಹಗಲು ಗೋರಕ್ಷಣೆಯ ಸೋಗು ಹಾಕುತ್ತಾರೆ. ದನದ ವ್ಯಾಪಾರಿಗಳು,ಗೋಮಾಂಸ ಸೇವಿಸುವವರು ಹಾಗೂ ಹಾಲು ವ್ಯಾಪಾರ ಮಾಡುವ ರೈತರನ್ನು ಗೋರಕ್ಷಣೆಯ ಹೆಸರಿನಲ್ಲಿ ಕೊಲ್ಲುವುದನ್ನು ಒಪ್ಪಲಾಗದು ಎಂಬ ಮಾತುಗಳನ್ನು ಅವರು ಆಡಿ ವರ್ಷಗಳು ಉರುಳಿವೆ.ಪರಿಣಾಮ ಶೂನ್ಯ. ಬಾಯಿಮಾತಿನ ಖಂಡನೆಯಷ್ಟೇ ಸಾಕೇ, ಅಥವಾ ಆಡಿದ ಮಾತನ್ನು ನಡೆಸಿಕೊಡಬೇಕೇ? ಪ್ರಧಾನಿಯವರ ಖಂಡನೆಯ ಬೆನ್ನಿನಲ್ಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥರು ‘ನೈಜ’ ಗೋರಕ್ಷಕರಿಗೆ ಅಭಯ ನೀಡಿದ್ದರು. ಪ್ರಧಾನಿ ಮತ್ತು ಸುಪ್ರೀಂ ಕೋರ್ಟ್‌ನ ಸದುದ್ದೇಶದ ಟೀಕೆ ಟಿಪ್ಪಣಿಗಳಿಂದ ನೈಜ ಗೋರಕ್ಷಕರು ವಿಚಲಿತರಾಗುವ ಅಗತ್ಯವಿಲ್ಲ ಎಂದಿದ್ದರು. ಮೋದಿ ಸಂಪುಟದ ಮಂತ್ರಿಗಳು ಗೋರಕ್ಷಕ ಗುಂಪುಗಳ ದಾಳಿಯನ್ನು ಸಮರ್ಥಿಸಿ ಹೇಳಿಕೆ ನೀಡುವುದನ್ನು ಈಗಲೂ ನಿಲ್ಲಿಸಿಲ್ಲ. ಜಾಮೀನಿನ ಮೇಲೆ ಹೊರಬೀಳುವ ಇಂತಹ ಆರೋಪಿಗಳಿಗೆ ಹೂಮಾಲೆ ತೊಡಿಸಿ ಸನ್ಮಾನಿಸಿದರು ಸಚಿವ ಜಯಂತ್ ಸಿನ್ಹಾ. ಮತ್ತೊಬ್ಬ ಸಚಿವರು ಜೈಲಿಗೆ ಭೇಟಿ ನೀಡಿ ಆರೋಪಿಗಳ ಬೆನ್ನು ತಟ್ಟಿದರು. ಗೋಮಾಂಸ ತಿನ್ನುವುದನ್ನು ಬಿಡುವ ತನಕ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ ಎಂದಿದ್ದಾರೆ ಆರೆಸ್ಸೆಸ್ ನಾಯಕ ಇಂದ್ರೇಶ್ ಕುಮಾರ್. ದಾದ್ರಿಯಲ್ಲಿ ಅಖ್ಲಾಕ್ ಅಹ್ಮದ್ ಹತ್ಯೆ ಪ್ರಕರಣದ ಆರೋಪಿಯ ಶವಕ್ಕೆ ರಾಷ್ಟ್ರಧ್ವಜ ಹೊದೆಸಿ ಗೌರವಿಸಲಾಗಿತ್ತು. ಗುಜರಾತಿನ ಊನಾದಲ್ಲಿ ದಲಿತ ಯುವಕರನ್ನು ಸಾರ್ವಜನಿಕವಾಗಿ ಥಳಿಸಲಾದ ಪ್ರಕರಣದ ವಿಚಾರಣೆ ಇತ್ತೀಚಿನವರೆಗೆ ಆರಂಭ ಆಗಿರಲಿಲ್ಲ. ಜಾಮೀನಿನ ಮೇಲೆ ಹೊರಬಿದ್ದಿರುವ ಆರೋಪಿಗಳು ಮತ್ತೆ ಹಲ್ಲೆ ನಡೆಸಿದ್ದಾರೆ. ಪೆಹಲೂಖಾನ್ ಅವರನ್ನು ಸಾಯಬಡಿದ ವಿಡಿಯೊ ಇದ್ದರೂ, ಹಂತಕರು ಈವರೆಗೆ ಪತ್ತೆಯಾಗಿಲ್ಲ! ‘ವಿವಿಧತೆಯಲ್ಲಿ ಏಕತೆ’ ಮತ್ತು ‘ವಸುಧೈವಕ ಕುಟುಂಬಕಂ’ ಎಂಬ ಮೌಲ್ಯಗಳು ಕೇವಲ ಬಾಯಿ ಮಾತಿನ ಬಡಾಯಿಗಳಾಗಿ ಉಳಿದಿವೆ. ಈ ಆಶಯಗಳ ಆಳದಲ್ಲಿ ದ್ವೇಷ, ಅಸಹನೆಯ ನಂಜಿನ ಹೂಳು ತುಂಬಿದೆ ಎಂಬ ಟೀಕೆ ಟಿಪ್ಪಣಿಗಳಿಗೆ ಪುಷ್ಟಿ ನೀಡುವಂತೆ ಹತ್ಯೆಗಳ ಸರಣಿ ಮುಂದುವರೆದಿದೆ. ಪರಿಸ್ಥಿತಿ ಕೈಮೀರಿ ಹೋಗತೊಡಗಿದೆ. ಇಂದು ಮುಸ್ಲಿಮರು- ದಲಿತರು, ನಾಳೆಯ ಸರದಿ ಯಾರದೂ ಆದೀತು. ‘ಸುಳ್ಳು ಸುದ್ದಿಗಳು, ಕಟ್ಟುಕತೆಗಳನ್ನು ಸೇವಿಸಿ ನೈತಿಕತೆಯ ಸ್ವಯಂಘೋಷಿತ ಉದ್ಧಾರಕರ ಪಾತ್ರ ವಹಿಸುವ ಉನ್ಮಾದದ ಗುಂಪುಗಳು ಅಲೆಗಳಂತೆ ಏಳತೊಡಗಿದ್ದು, ಬಿರುಗಾಳಿಯಂತಹ ಪೆಡಂಭೂತಗಳಂತೆ ದೇಶವನ್ನು ನುಂಗಲಿವೆ’ ಎಂಬ ಸುಪ್ರೀಂ ಕೋರ್ಟ್ ಕಳವಳ ನಿರಾಧಾರ ಅಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.