‘ನವ ಪಾಕಿಸ್ತಾನ’– ಅಸ್ಥಿರತೆನಡುವೆ ಹೊಸ ಮಜಲು! ಕ್ರಿಕೆಟ್ ತಾರೆ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ತೆಹ್ರೀಕ್ ಎ ಇನ್ಸಾಫ್ (ಪಿಟಿಐ), ಪಾಕಿಸ್ತಾನ ಚುನಾವಣೆಗಳಲ್ಲಿ ಹೆಚ್ಚಿನ ಸ್ಥಾನ ಗಳಿಸಿದ ಬೃಹತ್ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ನಿಚ್ಚಳ ಬಹುಮತ ಸಾಧಿಸುವುದು ಸಾಧ್ಯವಾಗಿಲ್ಲ. ಹೀಗಿದ್ದೂ ಇತರ ಕೆಲವು ಸಣ್ಣ ಪಕ್ಷಗಳು ಹಾಗೂ ಪಕ್ಷೇತರರ ಬೆಂಬಲದಿಂದ ಪಾಕಿಸ್ತಾನದ ಆಡಳಿತ ಸೂತ್ರ ಹಿಡಿಯಲು ಇಮ್ರಾನ್ ಖಾನ್ ಸಜ್ಜಾಗಿರುವುದು ಸ್ಪಷ್ಟ. ಅಕ್ರಮ ಸಂಪತ್ತಿನ ಪ್ರಕರಣದಲ್ಲಿ ಜೈಲು ಸೇರಿರುವ ಪದಚ್ಯುತ ಪ್ರಧಾನಿ ನವಾಜ್ ಷರೀಫ್ ಅವರ ಪಾಕಿಸ್ತಾನ ಮುಸ್ಲಿಂ ಲೀಗ್– ನವಾಜ್ (ಪಿಎಂಎಲ್-ಎನ್) ಪಕ್ಷಕ್ಕೆ ಈ ಚುನಾವಣೆಯಲ್ಲಿ ಭಾರಿ ಹೊಡೆತ ಬಿದ್ದಿದೆ. ಬಿಲಾವಲ್ ಭುಟ್ಟೊ ಜರ್ದಾರಿ ಅವರ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯೂ ಹೆಚ್ಚಿನ ಸ್ಥಾನಗಳನ್ನು ಗಳಿಸಿಲ್ಲ. ಪನಾಮಾ ಪೇಪರ್ಸ್ ಹಗರಣದಿಂದಾಗಿ ಭ್ರಷ್ಟಾಚಾರ ಆರೋಪಗಳಿಗೆ ಗುರಿಯಾಗಿರುವ ನವಾಜ್ ಷರೀಫ್ ಅವರು ಜೈಲಿನಲ್ಲಿದ್ದಾರೆ. ಷರೀಫ್ ಅವರ ಪುತ್ರಿ ಮರಿಯಮ್ ನವಾಜ್ ಹಾಗೂ ಅಳಿಯ ಕ್ಯಾಪ್ಟನ್ (ನಿವೃತ್ತ) ಸಫ್ದಾರ್ ಅವರೂ ಜೈಲಿನಲ್ಲಿದ್ದಾರೆ. ನಿಜವಾದ ಸ್ಪರ್ಧೆ ಇದ್ದದ್ದು ನವಾಜ್ ಷರೀಫ್ ಹಾಗೂ ಇಮ್ರಾನ್ ಖಾನ್‌ರ ಪಕ್ಷಗಳ ನಡುವೆ. ವಿದೇಶದಿಂದ ಪಾಕಿಸ್ತಾನಕ್ಕೆ ಬಂದು ಜೈಲು ಸೇರಿದ ನವಾಜ್ ಷರೀಫ್ ಅವರಿಗೆ ಚುನಾವಣೆಯಲ್ಲಿ ಹೆಚ್ಚಿನ ರಾಜಕೀಯ ಲಾಭವಾಗಿಲ್ಲ. ಚುನಾವಣೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿರುವ ದೂರುಗಳಿವೆ. ಪಾಕಿಸ್ತಾನದ ಸೇನೆಯು ಯಾರ ಬಗ್ಗೆ ಒಲವು ವ್ಯಕ್ತಪಡಿಸುತ್ತದೆಯೋ ಅವರೇ ಮುಂದಿನ ಪ್ರಧಾನಿಯಾಗುತ್ತಾರೆ ಎಂಬ ವಿಶ್ಲೇಷಣೆಗಳು ಚುನಾವಣೆ ಘೋಷಣೆ ಆದಾಗಿನಿಂದಲೇ ಕೇಳಿ ಬಂದಿವೆ. ಚುನಾವಣಾ ಪ್ರಚಾರ ಸಭೆಗಳಲ್ಲಿ ಭಯೋತ್ಪಾದನಾ ದಾಳಿಗಳು ನಡೆದಿದ್ದವು. ಮಾಧ್ಯಮಗಳಿಗೆ ನಿರ್ಬಂಧ ಹಾಕಲಾಗಿತ್ತು. ಚುನಾವಣೆಯಲ್ಲಿ ಉಗ್ರ ಗುಂಪುಗಳ ಭಾಗವಹಿಸುವಿಕೆ ಬಗ್ಗೆ ಕಳವಳಗಳೂ ವ್ಯಕ್ತವಾಗಿದ್ದವು. ಒಂದು ಕ್ಷೇತ್ರದಲ್ಲಂತೂ ಮುಂಬೈ ದಾಳಿಯ ಸಂಚು ಕೋರ ಹಫೀಜ್ ಸಯೀದ್‌ನ ಜಮಾತ್- ಉದ್ ದವಾದ ಅಭ್ಯರ್ಥಿ ಗೆಲುವಿನ ಹಾದಿಯಲ್ಲಿದ್ದಾರೆ. 1947ರ ನಂತರ ಪಾಕಿಸ್ತಾನದಲ್ಲಿ ನಡೆಯುತ್ತಿರುವ 11ನೇ ಸಾರ್ವತ್ರಿಕ ಚುನಾವಣೆ ಇದು. ಅಣ್ವಸ್ತ್ರ ಹೊಂದಿರುವ ಈ ರಾಷ್ಟ್ರವನ್ನು ಕಳೆದ 70 ವರ್ಷಗಳಲ್ಲಿ ಬಹುಪಾಲು ಅವಧಿಗೆ ಸೇನೆಯೇ ಆಳಿದೆ. ಮಿಲಿಟರಿ ಕ್ಷಿಪ್ರಕ್ರಾಂತಿ ಅಥವಾ ಭ್ರಷ್ಟಾಚಾರ ಹಗರಣಗಳಲ್ಲಿ ಪದೇಪದೇ ಅಸ್ಥಿರತೆ ಅನುಭವಿಸುತ್ತಿರುವ ರಾಷ್ಟ್ರ ಇದು. ಪೂರ್ಣಾವಧಿ ಆಡಳಿತ ನಡೆಸಿದ ನಾಗರಿಕ ಸರ್ಕಾರವೊಂದು ಮತ್ತೊಂದು ಚುನಾಯಿತ ಸರ್ಕಾರಕ್ಕೆ ಅಧಿಕಾರ ಹಸ್ತಾಂತರಿಸುತ್ತಿದೆ ಎಂಬುದೇ ಈಗ ದೊಡ್ಡದು. ಇಂತಹದೊಂದು ಪ್ರಕ್ರಿಯೆ ನಡೆಯುತ್ತಿರುವುದು ಇದು ಎರಡನೇ ಬಾರಿ. ಮಿಲಿಟರಿ ಹಸ್ತಕ್ಷೇಪ, ಭಯೋತ್ಪಾದನಾ ದಾಳಿಗಳ ನಡುವೆಯೂ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು ಮುಖ್ಯ. ‘ನಯಾ ಪಾಕಿಸ್ತಾನ’ (ನವ ಪಾಕಿಸ್ತಾನ) ಕಟ್ಟುವುದು, ಇಮ್ರಾನ್ ಖಾನ್ ಅವರು ತಮ್ಮ ಚುನಾವಣಾ ಪ್ರಚಾರಸಭೆಗಳಲ್ಲಿ ಮಾಡಿದ ಮುಖ್ಯ ಘೋಷಣೆ. ಇಮ್ರಾನ್‌ ಖಾನ್ ಅವರಿಂದ ಭಾರತ ಹೆಚ್ಚಿನದನ್ನು ನಿರೀಕ್ಷಿಸಬಹುದೇ ಎಂಬುದಕ್ಕೆ ಕಾಲವೇ ಉತ್ತರ ಹೇಳಬೇಕು. ಪಾಕಿಸ್ತಾನ ಚುನಾವಣಾ ಪ್ರಚಾರಗಳಲ್ಲಿ ಭಾರತದ ಬಗ್ಗೆ ಏನೂ ಪ್ರಸ್ತಾಪವಿರಲಿಲ್ಲ. ಕಾಶ‍್ಮೀರ ವಿಚಾರ ಕೆಲವು ಬಾರಿ ಪ್ರಸ್ತಾಪವಾಗಿದೆ. ವಿಶ‍್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯದ ಅನುಸಾರ ಪರಿಹಾರ ಕಂಡುಕೊಳ್ಳಲಾಗುವುದು ಎಂಬಂಥ ಮಾಮೂಲು ಧಾಟಿಯ ನಿಲುವು ಖಾನ್ ಅವರ ಪಕ್ಷದ ಪ್ರಣಾಳಿಕೆಯಲ್ಲಿದೆ. ಧಾರ್ಮಿಕ ಮೂಲಭೂತವಾದಿಗಳ ಜೊತೆಗೆ ಇಮ್ರಾನ್ ಅವರ ಸ್ನೇಹ ಭಾರತಕ್ಕೆ ಸಂಬಂಧಿಸಿದಂತೆ ಕಳವಳಕಾರಿ. ನವಾಜ್ ಷರೀಫ್ ಅವರು ಭಾರತದ ಜೊತೆ ಉತ್ತಮ ಬಾಂಧವ್ಯ ಹೊಂದುವುದರ ಪರ ಇದ್ದರು. ಆದರೆ ಪಾಕಿಸ್ತಾನ ಸೇನೆಗೆ ಇದು ಪಥ್ಯವಾಗಿರಲಿಲ್ಲ. ವಿದೇಶಾಂಗ ಹಾಗೂ ಭದ್ರತಾ ನೀತಿಗಳಲ್ಲಿ ಪಾಕಿಸ್ತಾನದ ಸೇನೆಗೆ ಸವಾಲೊಡ್ಡಿದ ಕಾರಣದಿಂದಾಗಿಯೇ ಷರೀಫ್ ಅವರ ಹುದ್ದೆಗೆ ಕುತ್ತು ಬಂತು ಎಂದು ವ್ಯಾಖ್ಯಾನಿಸಲಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಭಾರತ- ಪಾಕಿಸ್ತಾನ ಬಾಂಧವ್ಯ ನನೆಗುದಿಗೆ ಸಿಲುಕಿದೆ. ವಿದೇಶಾಂಗ, ಭದ್ರತಾ ನೀತಿಗಳಲ್ಲದೆ ಪ್ರಮುಖ ಆಂತರಿಕ ವ್ಯವಹಾರಗಳಲ್ಲಿ ಸೇನೆಯ ಹಿಡಿತ ಈಗಲೂ ಬಲವಾಗಿದೆ. ಸರ್ಕಾರ ಬದಲಾವಣೆಯಾಗುತ್ತದೆ ಅಷ್ಟೆ. ಆದರೆ ಆಡಳಿತ ಸೂತ್ರ ಸೇನೆಯ ಹಿಡಿತದಲ್ಲೇ ಇರುತ್ತದೆ ಎಂಬುದು ಸಾಮಾನ್ಯವಾಗಿ ಹೇಳುವ ಮಾತು. ಇಂತಹ ಸನ್ನಿವೇಶಗಳ ಮಧ್ಯೆ ಇಮ್ರಾನ್ ಖಾನ್ ಪ್ರತಿಪಾದಿಸಿರುವ ‘ನವ ಪಾಕಿಸ್ತಾನ’ ಹೇಗೆ ಉದಯವಾಗಲಿದೆ ಎಂಬುದು ನೆರೆ ರಾಷ್ಟ್ರವಾದ ನಮಗೆ ಮುಖ್ಯವಾದುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.