ಅಸುರಕ್ಷಿತ ಬಾಲಿಕಾ ಗೃಹನಿಗಾ ವ್ಯವಸ್ಥೆ ಬಲಪಡಿಸಿ ಬಿಹಾರದ ಮುಜಫ್ಫರ್‌ಪುರದ ಸರ್ಕಾರಿ ವಸತಿ ಗೃಹದ 44 ಹೆಣ್ಣುಮಕ್ಕಳ ಪೈಕಿ 29 ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಪ್ರಕರಣ ವರದಿಯಾಗಿದೆ. ಸರ್ಕಾರಿ ವಸತಿ ಗೃಹಗಳ ಬಗ್ಗೆ ಮುಂಬೈನ ಟಾಟಾ ಇನ್‍ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ ಅಧ್ಯಯನ ನಡೆಸಿದ ಸಂದರ್ಭದಲ್ಲಿ ಈ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಈ ಹೆಣ್ಣುಮಕ್ಕಳು 7ರಿಂದ 17 ವರ್ಷದವರು. ಅಷ್ಟೇ ಅಲ್ಲ, ಯುವತಿಯೊಬ್ಬಳನ್ನು ಅತ್ಯಾಚಾರ ಎಸಗಿ ಕೊಂದು ವಸತಿ ಗೃಹದ ಆವರಣದಲ್ಲಿ ಹೂತು ಹಾಕಲಾಗಿದೆ ಎಂಬಂಥ ತೀವ್ರ ಆರೋಪವೂ ಇದೆ. ಸರ್ಕಾರಿ ಬಾಲಿಕಾ ಗೃಹದಲ್ಲಿನ ಈ ಅನಾಚಾರಗಳ ಬಗ್ಗೆ ಸಿಬಿಐ ತನಿಖೆಯಾಗಬೇಕೆಂದು ಲೋಕಸಭೆಯಲ್ಲಿ ಪ್ರತಿಪಕ್ಷಗಳು ಒತ್ತಾಯಿಸಿದ್ದವು. ಈಗ ಈ ಪ್ರಕರಣದ ತನಿಖೆಯನ್ನು ಬಿಹಾರ ಸರ್ಕಾರ ಸಿಬಿಐಗೆ ವಹಿಸಿದೆ. ‘ಈ ಹೆಣ್ಣುಮಕ್ಕಳ ಘನತೆಯನ್ನು ರಕ್ಷಿಸುವಲ್ಲಿ ಆಡಳಿತಯಂತ್ರ ತೀವ್ರ ರೀತಿಯಲ್ಲಿ ವಿಫಲವಾಗಿದೆ’ ಎಂದು ಹೇಳಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಬಿಹಾರ ಸರ್ಕಾರಕ್ಕೆ ನೋಟಿಸ್ ಕಳಿಸಿದೆ. ಈ ಘಟನೆ ‘ಸುಶಾಸನ ಬಾಬು’ ಎಂದು ಹೆಸರಾದ ನಿತೀಶ್ ಕುಮಾರ್ ನೇತೃತ್ವದ ಸರ್ಕಾರದ ಮೇಲಿನ ಕರಿಛಾಯೆಯಾಗಿದೆ. ರಾಜಕಾರಣಿಗಳು ಹಾಗೂ ಅಧಿಕಾರಿಗಳ ಪಾತ್ರಗಳ ಬಗ್ಗೆ ಶಂಕೆ ವ್ಯಕ್ತವಾಗಿದೆ. ಸಮಾಜ ಕಲ್ಯಾಣ ಇಲಾಖೆ ಉಸ್ತುವಾರಿಯಲ್ಲಿ ಸೇವಾ ಸಂಕಲ್ಪ ವಿಕಾಸ ಸಂಸ್ಥಾನ್ ಎಂಬ ಎನ್‍ಜಿಒ ಈ ಬಾಲಿಕಾ ಗೃಹವನ್ನು ನಡೆಸುತ್ತಿದೆ. ಈಗ, ಈ ಘಟನೆ ಸಂಬಂಧದಲ್ಲಿ ಮುಜಫ್ಫರ್‌ಪುರ ಜಿಲ್ಲೆಯ ಮಕ್ಕಳ ರಕ್ಷಣಾ ಅಧಿಕಾರಿಯನ್ನೂ ಬಂಧಿಸಲಾಗಿದೆ. ಸರ್ಕಾರಿ ಅಧಿಕಾರಿಗಳು ಹಾಗೂ ವಸತಿಗೃಹದ ಸಿಬ್ಬಂದಿ ಈ ಕುಕೃತ್ಯದಲ್ಲಿ ಭಾಗಿಯಾಗಿರುವ ಆರೋಪಗಳಿರುವುದು ಮಕ್ಕಳ ಪಾಲನೆಯ ಹೊಣೆ ಹೊರಬೇಕಾದ ಸಾಂಸ್ಥಿಕ ವ್ಯವಸ್ಥೆಗಳ ವೈಫಲ್ಯವನ್ನು ಎತ್ತಿ ತೋರುತ್ತಿದೆ. ಮಕ್ಕಳ ರಕ್ಷಕರಾಗಬೇಕಾದವರು ಹದ್ದುಗಳಾಗಿರುವುದು ವಿಪರ್ಯಾಸ. ಮಕ್ಕಳ ಪಾಲನಾ ವಸತಿ ಗೃಹಗಳನ್ನು ಕೇಂದ್ರ ಸರ್ಕಾರದ ಸಮಗ್ರ ಮಕ್ಕಳ ರಕ್ಷಣಾ ಯೋಜನೆ– 2009ರ ಅಡಿ ನಡೆಸಲಾಗುತ್ತದೆ. ಆದರೆ ಇಂತಹ ಸಾಂಸ್ಥಿಕ ಪಾಲನಾ ವ್ಯವಸ್ಥೆಯಲ್ಲಿ ನಡೆಯುವ ಕರಾಳ ಕೃತ್ಯಗಳು ಯೋಜನೆಯ ಮೂಲ ಉದ್ದೇಶ ವನ್ನೇ ಬುಡಮೇಲು ಮಾಡುವುದು ವಿಷಾದನೀಯ. ಬಹುಶಃ ಮುಜಫ್ಫರ್‌ಪುರದ ಹಗರಣ ರಾಷ್ಟ್ರವನ್ನು ಕಾಡುತ್ತಿರುವ ಆಳವಾದ ಸಮಸ್ಯೆಗಳ ಸಂಕೇತ. ಅನಾಥ ಮಕ್ಕಳು ಹಾಗೂ ಕಾನೂನಿನ ಜೊತೆಗೆ ಸಂಘರ್ಷದಲ್ಲಿ ಸಿಲುಕಿರುವ ಮಕ್ಕಳಿಗೆಂದೇ ಪಾಲನಾ ಗೃಹಗಳಿವೆ. ಸರ್ಕಾರದ ಪಾಲನಾ ಗೃಹಗಳಲ್ಲಿ ಇರುವ ಮಕ್ಕಳೆಲ್ಲಾ ಅನಾಥರೇ ಆಗಿರುವುದಿಲ್ಲ. ಮಕ್ಕಳನ್ನು ಸಾಕುವಷ್ಟು ಚೈತನ್ಯ ಇಲ್ಲದ ತೀರಾ ಬಡಕುಟುಂಬದ ಮಕ್ಕಳನ್ನೂ ಪಾಲನಾ ಗೃಹಗಳಲ್ಲಿ ಇರಿಸಿಕೊಳ್ಳಲಾಗುತ್ತದೆ. ಆಶ್ರಯದ ತಾಣವಾಗಬೇಕಾದ ಇಂತಹ ಗೃಹಗಳು ಅಪರಾಧಗಳ ತಾಣವಾಗುವುದು ಖಂಡನೀಯ. ಭಾರತದಲ್ಲಿ ಸುಮಾರು 7300 ಮಕ್ಕಳ ಪಾಲನಾ ಗೃಹಗಳಿವೆ. ಇವುಗಳಲ್ಲಿ ಸುಮಾರು 2.30 ಲಕ್ಷ ಮಕ್ಕಳು ಆಶ್ರಯ ಪಡೆದಿದ್ದಾರೆ ಎಂದು ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗ (ಎನ್‍ಸಿಪಿಸಿಆರ್) ಅಂದಾಜು ಮಾಡಿದೆ. ಇವುಗಳಲ್ಲಿ ಸಮಾರು 1300 ಆಶ್ರಯ ಗೃಹಗಳು ನೋಂದಾವಣೆಗೊಂಡಿಲ್ಲ ಎಂದೂ ಅದು ಹೇಳಿದೆ. ಎಂದಾಗ ಹೆಚ್ಚಿನ ಉಸ್ತುವಾರಿ ಇರುವುದಿಲ್ಲ. ಆಗ ಇಂತಹ ಸಂಸ್ಥೆಗಳಲ್ಲಿ ಇರುವ ಮಕ್ಕಳು ಹೆಚ್ಚಿನ ಅಪಾಯಗಳಿಗೆ ಸಿಲುಕುತ್ತಾರೆ. ಹೀಗಾಗಿ ಎಲ್ಲಾ ಆಶ್ರಯ ಗೃಹಗಳು ನೋಂದಾವಣೆಗೊಳ್ಳಬೇಕು. ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ನಿಯಮಿತವಾಗಿ ಇವುಗಳ ಪರಿವೀಕ್ಷಣೆ ಮಾಡುವುದೂ ಅವಶ್ಯ. ನಮ್ಮಲ್ಲಿ ಮಕ್ಕಳ ರಕ್ಷಣೆಗೆ ಕಾನೂನುಗಳಿಗೇನೂ ಬರವಿಲ್ಲ. ಮುಖ್ಯವಾದವೆಂದರೆ ಬಾಲ ನ್ಯಾಯ (ಮಕ್ಕಳ ಪಾಲನೆ ಹಾಗೂ ರಕ್ಷಣೆ) ಕಾಯ್ದೆ ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೊಕ್ಸೊ). ಆದರೆ ಅವುಗಳನ್ನು ಜಾರಿ ಮಾಡುವ ಇಚ್ಛಾಶಕ್ತಿಯನ್ನು ಆಡಳಿತಯಂತ್ರ ಪ್ರದರ್ಶಿಸಬೇಕು. ಜೊತೆಗೆ, 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳ ಅತ್ಯಾಚಾರ ಮಾಡುವವರಿಗೆ ಮರಣ ದಂಡನೆ ನೀಡುವ ಸುಗ್ರೀವಾಜ್ಞೆಯನ್ನು ಇದೇ ವರ್ಷ ಏಪ್ರಿಲ್‌ನಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಹೀಗಿದ್ದೂ ಶಿಕ್ಷಾಭಯವಿಲ್ಲದೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆಯುತ್ತಿರುವುದು ನಾಚಿಕೆಗೇಡು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.