ದತ್ತಾಂಶ ಸಂರಕ್ಷಣೆಯತ್ತಮೊದಲ ಹೆಜ್ಜೆ ಭಾರತದಲ್ಲಿ ದತ್ತಾಂಶ ಸಂರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತ ತನ್ನ ಅಂತಿಮ ವರದಿಯನ್ನು ಬಿ.ಎನ್. ಶ್ರೀಕೃಷ್ಣ ಸಮಿತಿ ಸರ್ಕಾರಕ್ಕೆ ಸಲ್ಲಿಸಿದೆ. ‘ಖಾಸಗಿತನವನ್ನು ರಕ್ಷಿಸುವ, ಭಾರತೀಯರನ್ನು ಸಬಲಗೊಳಿಸುವ ಸ್ವತಂತ್ರ ಮತ್ತು ಮುಚ್ಚುಮರೆಯಿಲ್ಲದ ಡಿಜಿಟಲ್ ಆರ್ಥಿಕತೆ’ ಎಂಬ ಶೀರ್ಷಿಕೆ ಹೊಂದಿರುವ ಈ ವರದಿಯ ಜೊತೆಗೆ ದತ್ತಾಂಶ ಸಂರಕ್ಷಣೆಗೆ ಸಂಬಂಧಿಸಿದ ಕರಡು ಮಸೂದೆಯೊಂದನ್ನೂ ಸಮಿತಿ ರೂಪಿಸಿದೆ. ‘ಆಧಾರ್’ ಯೋಜನೆಯ ಸಾಂವಿಧಾನಿಕ ಸಮರ್ಪಕತೆಯ ಪ್ರಶ್ನೆ ನ್ಯಾಯಾಲಯದಲ್ಲಿರುವಾಗ ಶ್ರೀಕೃಷ್ಣ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯಲ್ಲಿ ಕೆಲವು ಕ್ಷೇತ್ರಗಳನ್ನು ಪ್ರತಿನಿಧಿಸುವವರಿಲ್ಲ ಎಂಬ ಗುಲ್ಲೆದ್ದಿತ್ತು. ಸಮಿತಿ ಹೊರತಂದ ‘ಶ್ವೇತಪತ್ರ’ದ ಸುತ್ತ ನಡೆದ ಚರ್ಚೆಯೂ ವಿವಾದಗಳನ್ನು ಹುಟ್ಟುಹಾಕಿತ್ತು. ಸಮಿತಿ ತನ್ನ ಕಾರ್ಯನಿರ್ವಹಣೆಗೆ ಸಂಬಂಧಿಸಿದ ವಿವರಗಳನ್ನು ಮಾಹಿತಿ ಹಕ್ಕು ಕಾಯ್ದೆಯ ಅನ್ವಯ ಒದಗಿಸುವುದರಲ್ಲಿ ಸಚಿವಾಲಯದ ನಿಧಾನ ದೋರಣೆಯೂ ಬಹಳಷ್ಟು ಟೀಕೆಗೆ ಗುರಿಯಾಗಿತ್ತು. ಇವೆಲ್ಲವೂ ಮುಗಿದು ಈಗ ಸಮಿತಿಯ ವರದಿ ಸಾರ್ವಜನಿಕವಾಗಿದೆ. ಇದರ ಜೊತೆ ಜೊತೆಗೇ ದತ್ತಾಂಶ ಸಂರಕ್ಷಣೆಗೆ ಸಂಬಂಧಿಸಿದ ಮಸೂದೆಯ ಕರಡೂ ಜನರ ಮುಂದಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಯುರೋಪ್ ಒಕ್ಕೂಟವು ದತ್ತಾಂಶ ಮತ್ತು ಖಾಸಗಿ ಮಾಹಿತಿಯ ಸಂರಕ್ಷಣೆಗೆ ಸಂಬಂಧಿಸಿದಂತೆ ಬಹಳ ವ್ಯಾಪಕವಾದ ಪರಿಣಾಮವುಳ್ಳ ಕಾಯ್ದೆಯೊಂದನ್ನು ಜಾರಿಗೊಳಿಸಿದೆ. ಶ್ರೀಕೃಷ್ಣ ಸಮಿತಿಯು ಸಾರ್ವಜನಿಕ ಅಭಿಪ್ರಾಯಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಿಸಿಲ್ಲ ಎಂಬ ಆರೋಪವಿತ್ತು. ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ ಸಂದರ್ಭದಲ್ಲಿಯೂ ಸಮಿತಿಯ ಸದಸ್ಯರೊಬ್ಬರು ಕರಡು ಮಸೂದೆ ಮತ್ತು ವರದಿಯ ಬಗ್ಗೆ ಸಾಕಷ್ಟು ಸಾರ್ವಜನಿಕ ಚರ್ಚೆ ನಡೆಯಬೇಕು ಎಂದು ಅಭಿಪ್ರಾಯಪಟ್ಟಿರುವುದನ್ನೂ ಇಲ್ಲಿ ನೆನಪಿಸಿಕೊಳ್ಳಬೇಕಿದೆ. ದತ್ತಾಂಶ ಮತ್ತು ಖಾಸಗಿ ಮಾಹಿತಿಯ ಸಂರಕ್ಷಣೆಗೆ ಸಂಬಂಧಿಸಿದಂತೆ ಭಾರತದಲ್ಲಿ ಈ ತನಕ ಯಾವ ಸ್ಪಷ್ಟ ಕಾಯ್ದೆಗಳೂ ಇಲ್ಲ. ಈ ಹಿನ್ನೆಲೆಯಲ್ಲಿ ಶ್ರೀಕೃಷ್ಣ ಸಮಿತಿ ಮುಂದಿಟ್ಟಿರುವ ಕರಡು ಮಸೂದೆ ಒಂದು ಸ್ವಾಗತಾರ್ಹ ಹೆಜ್ಜೆ. ಆದರೆ ಈಗಾಗಲೇ ಯುರೋಪ್ ಒಕ್ಕೂಟ ಜಾರಿಗೊಳಿಸಿರುವ ಕಾನೂನಿನಜೊತೆಗೆ ಇದನ್ನು ಹೋಲಿಸಿದರೆ ಕರಡು ಮಸೂದೆಯು ಪ್ರಜೆಗಳ ಮೇಲೆ ಪ್ರಭುತ್ವ ನಡೆಸುವ ಹಿಂಬಾಗಿಲ ಬೇಹುಗಾರಿಕೆಯನ್ನು ತಡೆಯಲು ಏನನ್ನೂ ಮಾಡಿಲ್ಲ ಎಂದು ಹೇಳಲೇಬೇಕಾಗುತ್ತದೆ. ಆದರೆ ಖಾಸಗಿ ಮಾಹಿತಿಯನ್ನು ಪಡೆಯುವ ವಾಣಿಜ್ಯ ಸಂಸ್ಥೆಗಳನ್ನು ನಿಯಂತ್ರಿಸುವುದಕ್ಕೆ ಅಗತ್ಯವಿರುವ ಅನೇಕ ಕ್ರಮಗಳನ್ನು ಮಸೂದೆ ಸೂಚಿಸಿದೆ. ಅಂದರೆ ‘ಖಾಸಗಿ ಮಾಹಿತಿ’ ಎಂದರೆ ಏನು ಎಂಬುದನ್ನು ಅಸ್ಪಷ್ಟವಾಗಿಯಾದರೂ ನಿರ್ವಚಿಸುವಲ್ಲಿ ಮಸೂದೆ ಯಶಸ್ವಿಯಾಗಿದೆ. ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠದ ಮುಂದೆ ಇರುವ ಆಧಾರ್ ಯೋಜನೆಯ ಸಾಂವಿಧಾನಿಕ ಸಮರ್ಪಕತೆಯ ಕುರಿತ ಮೊಕದ್ದಮೆಯ ತೀರ್ಪು ಈ ಕರಡು ಮಸೂದೆಯ ಸ್ವರೂಪದ ಮೇಲೆ ಪರಿಣಾಮ ಬೀರುವುದನ್ನೂ ಈಗಲೇ ಅಲ್ಲಗಳೆಯಲು ಸಾಧ್ಯವಿಲ್ಲ. ವಾಣಿಜ್ಯ ಸಂಸ್ಥೆಗಳು ವ್ಯಕ್ತಿಯ ವೈಯಕ್ತಿಕ ಮಾಹಿತಿಯನ್ನು ಬಳಸುವುದಕ್ಕೆ ಸ್ಪಷ್ಟವಾದ ಅನುಮತಿ ಪಡೆದಿರಬೇಕು ಎಂದು ಮಸೂದೆ ಹೇಳುತ್ತದೆ. ಆದರೆ ಸರ್ಕಾರ ಇದೇ ಮಾಹಿತಿಗಳನ್ನು ಬಳಸಿಕೊಳ್ಳುವುದಕ್ಕೆ ಈ ಬಗೆಯ ಸ್ಪಷ್ಟ ಅನುಮತಿ ಬೇಕಾಗಿಲ್ಲ. ಮಸೂದೆಯು ದತ್ತಾಂಶ ಸಂರಕ್ಷಣಾ ಪ್ರಾಧಿಕಾರವೊಂದನ್ನು ರಚಿಸಬೇಕೆಂದು ಹೇಳುತ್ತದೆ. ಈ ಪ್ರಾಧಿಕಾರದ ಅಧಿಕಾರ, ವಿಶಿಷ್ಟ ಗುರುತನ್ನು ಜನರಿಗೆ ನೀಡುವ ಪ್ರಾಧಿಕಾರದ (ಯುಐಡಿಎಐ) ಮೇಲೆಯೂ ಇರುತ್ತದೆಯೇ ಇಲ್ಲವೇ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಇದೇ ಕಾರಣದಿಂದ ಯುಐಡಿಎಐನ ಸ್ವಾಯತ್ತತೆಯನ್ನು ಉಳಿಸಿಕೊಳ್ಳುವುದಕ್ಕೆ ಅಗತ್ಯವಿರುವ ಕಾನೂನು ತಿದ್ದುಪಡಿಗಳ ಬಗ್ಗೆ ವರದಿ ಪ್ರಸ್ತಾಪಿಸಿದೆ. ಒಟ್ಟಾರೆಯಾಗಿ ಶ್ರೀಕೃಷ್ಣ ಸಮಿತಿಯ ವರದಿಯು ದತ್ತಾಂಶ ಸಂರಕ್ಷಣೆಯ ಬೇಡಿಕೆಯನ್ನು ಈಡೇರಿಸುವ ಹಾದಿಯಲ್ಲಿ ಇಟ್ಟಿರುವ ಒಂದು ಹೆಜ್ಜೆ ಎಂದಷ್ಟೇ ಹೇಳಬಹುದು.ವರದಿಯ ಶಿಫಾರಸುಗಳು ಮತ್ತು ಕರಡು ಮಸೂದೆಯ ಕುರಿತ ವ್ಯಾಪಕವಾದ ಮತ್ತು ಆಳವಾದ ಚರ್ಚೆಗಳಷ್ಟೇ ಭಾರತದಲ್ಲಿ ದತ್ತಾಂಶ ಮತ್ತು ವೈಯಕ್ತಿಕ ಮಾಹಿತಿ ಸಂರಕ್ಷಣೆಗೆ ಅತ್ಯಂತ ಸಮರ್ಪಕವಾದ ಕಾನೂನನ್ನು ತರುವುದಕ್ಕೆ ಸಹಕರಿಸಬಲ್ಲವು. ಆತುರದ ನಿರ್ಧಾರಕ್ಕಿಂತ ಸ್ಪಷ್ಟವಾದ ಮತ್ತು ದೂರದೃಷ್ಟಿಯುಳ್ಳ ನಿರ್ಧಾರಗಳು ಅಗತ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.