ಆಯುಷ್ಮಾನ್ ಭಾರತ್ ಯೋಜನೆ ಸಾಮಾಜಿಕ ಸುರಕ್ಷೆಯ ಬಲ ಒದಗಲಿ ‘ಆಯುಷ್ಮಾನ್ ಭಾರತ್’ ಆರೋಗ್ಯ ಉಪಕ್ರಮದ ಭಾಗವಾಗಿ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ರಾಂಚಿಯಲ್ಲಿ ಚಾಲನೆ ನೀಡಿದ್ದಾರೆ. 10 ಕೋಟಿ ಕುಟುಂಬಗಳು ಅಥವಾ 50 ಕೋಟಿ ಭಾರತೀಯರಿಗೆ ಉಚಿತ ಆರೋಗ್ಯ ವಿಮೆ ಒದಗಿಸುವ ಯೋಜನೆ ಇದು. ಇದಕ್ಕಾಗಿ ಸರ್ಕಾರ ವಾರ್ಷಿಕ ₹ 12 ಸಾವಿರ ಕೋಟಿ ವ್ಯಯಿಸಲಿದೆ. ಫಲಾನುಭವಿ ಕುಟುಂಬಗಳಿಗೆ ತಲಾ ₹ 5 ಲಕ್ಷ ವಾರ್ಷಿಕ ಆರೋಗ್ಯವಿಮೆ ಸೌಕರ್ಯವನ್ನು ಈ ಯೋಜನೆ ಒದಗಿಸಲಿದೆ. ಸಮಾಜದ ಬಡಜನರಿಗೆ ಅನ್ವಯಿಸುವ ಯೋಜನೆ ಇದು. ಸಾಮಾಜಿಕ, ಆರ್ಥಿಕ ಸೂಚ್ಯಂಕಗಳ ಆಧಾರದಲ್ಲಿ ಆಯ್ಕೆಯಾದ ಜನಸಂಖ್ಯೆಯ ಸುಮಾರು ಶೇ 40ರಷ್ಟು ಮಂದಿಗೆ ಉಚಿತ ಚಿಕಿತ್ಸೆಯ ಗ್ಯಾರಂಟಿಯನ್ನು ಒದಗಿಸುವಂತಹ ಈ ಆರೋಗ್ಯ ರಕ್ಷಣಾ ಯೋಜನೆಯ ಉದ್ದೇಶ ಸರಿಯಾದದ್ದು. ಕ್ಯಾನ್ಸರ್, ಹೃದಯಬೇನೆ ಸೇರಿದಂತೆ 1,300 ಕಾಯಿಲೆಗಳು ಈ ಯೋಜನೆ ವ್ಯಾಪ್ತಿಗೆ ಸೇರುತ್ತವೆ. ಖಾಸಗಿ ಆಸ್ಪತ್ರೆಗಳೂ ಈ ಯೋಜನೆಯ ಭಾಗವಾಗಿರುತ್ತವೆ. ರಾಷ್ಟ್ರದಾದ್ಯಂತ 13,000ಕ್ಕೂ ಹೆಚ್ಚಿನ ಆಸ್ಪತ್ರೆಗಳು ಈ ಯೋಜನೆಗೆ ಈವರೆಗೆ ಸೇರ್ಪಡೆಯಾಗಿವೆ. ಗುಣಮಟ್ಟದ ಚಿಕಿತ್ಸೆ ಪಡೆಯಲು ಬಡವರಿಗೆ ಉಚಿತ ಆರೋಗ್ಯ ವಿಮಾ ಸೌಲಭ್ಯ ಒದಗಿಸುವಂತಹ ಮಹತ್ವಾಕಾಂಕ್ಷೆಯ ಯೋಜನೆಯ ಅನುಷ್ಠಾನದಲ್ಲಿ ಅನೇಕ ಸವಾಲುಗಳೂ ಇವೆ. ಅನೇಕ ರಾಜ್ಯಗಳು ಈಗಾಗಲೇ ತಮ್ಮದೇ ಆರೋಗ್ಯ ಯೋಜನೆಗಳನ್ನು ಹೊಂದಿವೆ. ಹೀಗಾಗಿ ಈ ಯೋಜನೆ ಪ್ರಕಟಣೆಯಲ್ಲಿನ ರಾಜಕೀಯ ಉದ್ದೇಶದ ಬಗೆಗೂ ಮಾತುಗಳೂ ಕೇಳಿಬಂದಿವೆ. ಬಿಜು ಸ್ವಾಸ್ಥ್ಯ ಕಲ್ಯಾಣ ಯೋಜನೆ ಹೊಂದಿರುವ ಒಡಿಶಾ, ಈ ಯೋಜನೆಗೆ ಸೇರ್ಪಡೆಯಾಗಿಲ್ಲ. ಹಾಗೆಯೇ ದೆಹಲಿ, ಕೇರಳ, ಪಂಜಾಬ್ ಹಾಗೂ ತೆಲಂಗಾಣ ರಾಜ್ಯಗಳೂ ಈ ಯೋಜನೆಗೆ ಸೇರ್ಪಡೆಯಾಗಿಲ್ಲ. ಅತ್ಯಂತ ಕಡಿಮೆ ಪರಿಹಾರ ನೀಡುವ ವಿಚಾರದ ಬಗ್ಗೆ ಖಾಸಗಿ ಆಸ್ಪತ್ರೆಗಳೂ ದನಿ ಎತ್ತಿವೆ. ಹೀಗಾಗಿ ಆರೋಗ್ಯ ಸೇವಾ ವೆಚ್ಚದ ವಿಚಾರ ಕೇಂದ್ರ ಸರ್ಕಾರ ಹಾಗೂ ಆರೋಗ್ಯ ಸೇವಾದಾತರ ನಡುವಣ ವಿವಾದದ ವಿಚಾರವಾಗಿದೆ. ಸರ್ಕಾರದ ಪ್ರಸ್ತಾವಗಳನ್ನು ಅನುಷ್ಠಾನ ಮಾಡುವುದು ಕಷ್ಟ ಎಂಬುದು ಹಲವು ಆಸ್ಪತ್ರೆಗಳ ಭಾವನೆ. ಕೆಲವು ಚಿಕಿತ್ಸೆಗಳನ್ನು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಂದಲೇ ಪಡೆದುಕೊಳ್ಳಬೇಕು ಎಂದೂ ಹೇಳಲಾಗಿದೆ. ಆದರೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಹಳ ಕಾಲದಿಂದ ಕಡೆಗಣಿಸಿಕೊಂಡು ಬಂದಿರುವ ಕಟು ವಾಸ್ತವವೂ ನಮ್ಮೆದುರು ಇದೆ. ದೊಡ್ಡ ವಿಚಾರ ಎಂದರೆ ಹಣಕಾಸಿನದು. ಆರೋಗ್ಯಕ್ಕೆ ವ್ಯಯಿಸುವ ಮೊತ್ತ ಸದ್ಯಕ್ಕೆ ಜಿಡಿಪಿಯ ಶೇ 1ರಷ್ಟು ಮಾತ್ರ. ಆದರೆ ಈ ಯೋಜನೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾದಾಗ ಜಿಡಿಪಿಯ ಶೇ 2.5 ರಷ್ಟು ಮೊತ್ತ ವ್ಯಯಿಸಲು ಸನ್ನದ್ಧವಾಗಬೇಕಾಗುತ್ತದೆ. ಈ ವಿಮಾ ಆರೋಗ್ಯ ಯೋಜನೆ ಕಸುವು ಪಡೆದುಕೊಳ್ಳಲು ಬಹು ರಂಗಗಳಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು. ಈ ಯೋಜನೆ ಯಶಸ್ಸಿಗೆ ಬಜೆಟ್‌ನಲ್ಲಿ ಹಂಚಿಕೆ ಮಾಡುವ ಮೊತ್ತವನ್ನೂ ಹೆಚ್ಚಿಸಬೇಕು. ಪ್ರಧಾನ್‍ಮಂತ್ರಿ ಜನ ಆರೋಗ್ಯ ಯೋಜನೆಗೆ ಈ ವರ್ಷ ಕೇವಲ ₹ 2000 ಕೋಟಿ ಹಂಚಿಕೆಯಾಗಿದೆ. ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಮಾಡಿದ ನಂತರ, ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ವಿಶ್ವದ ಅತಿ ದೊಡ್ಡ ಸರ್ಕಾರಿ ಪ್ರಾಯೋಜಿತ ಆರೋಗ್ಯ ರಕ್ಷಣಾ ಯೋಜನೆಯಾಗಲಿದೆ. ಇದರ ಮುಖ್ಯ ಗುರಿ, ಸಾರ್ವತ್ರಿಕ ಆರೋಗ್ಯ ಸಾಧಿಸುವುದಾಗಿದೆ. ಸಾರ್ವತ್ರಿಕ ಆರೋಗ್ಯ ಯೋಜನೆಯತ್ತ ಸಾಗಲು ಇದು ಅಗತ್ಯವಾದ ಮೊದಲ ಹೆಜ್ಜೆ. ಇದು ಆಗಬೇಕಾದ ಕೆಲಸವೂ ಹೌದು. ಏಕೆಂದರೆ ರಾಷ್ಟ್ರೀಯ ಸ್ಯಾಂಪಲ್ ಸರ್ವೆ ಸಂಸ್ಥೆ (ಎನ್‍ಎಸ್ಎಸ್ಒ) ಸಮೀಕ್ಷೆ ಪ್ರಕಾರ, ಶೇ 85.9ರಷ್ಟು ಗ್ರಾಮೀಣ ಕುಟುಂಬಗಳು ಹಾಗೂ ಶೇ 82ರಷ್ಟು ನಗರವಾಸಿ ಕುಟುಂಬಗಳು ಯಾವುದೇ ಆರೋಗ್ಯಪಾಲನೆ ವಿಮೆ ಹೊಂದಿಲ್ಲ. ಅನೇಕ ಕಾಯಿಲೆಗಳ ಚಿಕಿತ್ಸಾ ವೆಚ್ಚಗಳಿಂದಾಗಿ ಸಾಲದ ಸುಳಿಯಲ್ಲಿ ಕುಟುಂಬಗಳು ಸಿಲುಕಿರುವುದನ್ನೂ ಈ ಸಮೀಕ್ಷೆ ಎತ್ತಿಹೇಳಿದೆ. ಇಂತಹ ಸನ್ನಿವೇಶದಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವುದೂ ನಿರಂತರವಾಗಿರಬೇಕು. ಆ ಮೂಲಕ ಸಾರ್ವತ್ರಿಕ ಆರೋಗ್ಯ ಯೋಜನೆ ಹೆಚ್ಚು ಬಲ ಪಡೆದುಕೊಳ್ಳಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.