ನ್ಯಾಯದಾನ ಪ್ರಕ್ರಿಯೆ ವಿಳಂಬ; ಪ್ರಾಸಿಕ್ಯೂಷನ್‌ ವೈಫಲ್ಯ ಅಕ್ಷಮ್ಯ ಕನ್ನಡದ ಖ್ಯಾತ ನಟ ರಾಜ್‌ಕುಮಾರ್‌ ಅವರನ್ನು 2000ನೇ ಇಸವಿಯ ಜುಲೈನಲ್ಲಿ ಕಾಡುಗಳ್ಳ ವೀರಪ್ಪನ್‌ ಅಪಹರಿಸಿದ ಪ್ರಕರಣದ ಕುರಿತು ಇದೀಗ 18 ವರ್ಷಗಳ ಬಳಿಕ ಜಿಲ್ಲಾ ಕೋರ್ಟಿನ ತೀರ್ಪು ಹೊರಬಿದ್ದಿದ್ದು ಎಲ್ಲ 9 ಆರೋಪಿಗಳನ್ನೂ ಖುಲಾಸೆ ಮಾಡಲಾಗಿದೆ. ತಮಿಳುನಾಡಿನ ಈರೋಡ್‌ ಜಿಲ್ಲೆಯ ಗೋಬಿಚೆಟ್ಟಿಪಾಳಯಂನ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಕೆ. ಮಣಿ ಅವರು ನೀಡಿರುವ ಈ ತೀರ್ಪು, ಪ್ರಾಸಿಕ್ಯೂಷನ್‌ ಪರ ವಾದಮಂಡನೆ ಎಷ್ಟೊಂದು ದುರ್ಬಲವಾಗಿತ್ತು ಎನ್ನುವುದನ್ನು ಎತ್ತಿ ತೋರಿಸಿದೆ. ರಾಜ್‌ಕುಮಾರ್‌, ಅವರ ಅಳಿಯ ಎಸ್‌.ಎ. ಗೋವಿಂದರಾಜ್‌, ಸಹಾಯಕ ನಿರ್ದೇಶಕ ನಾಗಪ್ಪ ಮಾರಡಗಿ ಮತ್ತು ಸಹಾಯಕ ನಾಗೇಶ್‌ ಅವರನ್ನು ವೀರಪ್ಪನ್‌ ಅಪಹರಿಸಿದ್ದು 2000ನೇ ಇಸವಿಯ ಜುಲೈ 30ರಂದು. 108 ದಿನಗಳ ಕಾಲ ವೀರಪ್ಪನ್‌ ಬಂಧನದಲ್ಲಿದ್ದು, ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳ ತೀವ್ರ ಯತ್ನದ ಬಳಿಕ ನವೆಂಬರ್‌ 15ರಂದು ರಾಜ್‌ ಮತ್ತಿತರರು ಬಿಡುಗಡೆಯಾಗಿದ್ದರು. ಅಲ್ಲಿಂದೀಚೆಗೆ ಈ ಪ್ರಕರಣದ ತನಿಖೆ ಆಮೆನಡಿಗೆಯಲ್ಲಿಯೇ ಮುಂದುವರಿದಿತ್ತು. ವಿಚಾರಣೆ ನಡೆಯುವ ಹಂತದಲ್ಲೇ 2004ರ ಅಕ್ಟೋಬರ್‌ನಲ್ಲಿ ಪೊಲೀಸರ ಜತೆಗಿನ ಎನ್‌ಕೌಂಟರ್‌ನಲ್ಲಿ ವೀರಪ್ಪನ್‌ ಹತನಾದ. ಎರಡು ವರ್ಷಗಳ ಬಳಿಕ ಅನಾರೋಗ್ಯದಿಂದಾಗಿ ರಾಜ್‌ಕುಮಾರ್‌ ಅವರು ವಿಧಿವಶರಾದರು. ವಿಚಾರಣೆಯ ಅವಧಿಯಲ್ಲೇ ಆರೋ‍ಪಿಗಳಲ್ಲಿ ಇಬ್ಬರಾದ ಸೇತುಕುಳಿ ಗೋವಿಂದನ್‌ ಮತ್ತು ರಂಗಸ್ವಾಮಿ ನಿಧನರಾದರು. ಉಳಿದ 9 ಮಂದಿಯಲ್ಲಿ ಐವರು ಮಾತ್ರ ಈಗ ಜೈಲಿನಲ್ಲಿದ್ದಾರೆ. ನ್ಯಾಯ ನೀಡುವ ಪ್ರಕ್ರಿಯೆ ಇಷ್ಟೊಂದು ವಿಳಂಬವಾದರೆ, ನ್ಯಾಯಾಧೀಶರು ನೀಡುವ ತೀರ್ಪಿಗೆ ಏನಾದರೂ ಪಾವಿತ್ರ್ಯ ಉಳಿಯುತ್ತದೆಯೇ? ಕೋಟ್ಯಂತರ ಕನ್ನಡಿಗರ ಕಣ್ಮಣಿಯಾಗಿರುವ ರಾಜ್‌ಕುಮಾರ್‌ ಅವರಂತಹ ಪ್ರಸಿದ್ಧರ ಅಪಹರಣದ ಪ್ರಕರಣದ ವಿಚಾರಣೆಯೇ ಇಷ್ಟೊಂದು ವಿಳಂಬವಾಗುವುದಾದರೆ, ಇನ್ನು ಜನಸಾಮಾನ್ಯರಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ಹೇಗೆ ನಡೆದೀತು? ಇಷ್ಟೊಂದು ವಿಳಂಬದ ಬಳಿಕವೂ ಪ್ರಾಸಿಕ್ಯೂಷನ್‌ಗೆ ತಮ್ಮ ಆರೋಪವನ್ನು ಸಾಬೀತುಪಡಿಸಲು ಸಾಧ್ಯವಾಗಿಲ್ಲ ಎನ್ನುವುದು ಇನ್ನೊಂದು ವಿಪರ್ಯಾಸದ ಸಂಗತಿ. ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ಪ್ರಾಸಿಕ್ಯೂಷನ್‌ನ ನಿರ್ಲಕ್ಷ್ಯವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವುದು ಸರಿಯಾಗಿಯೇ ಇದೆ. 47 ಸಾಕ್ಷಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದ ಪ್ರಾಸಿಕ್ಯೂಷನ್‌, 51 ದಾಖಲೆಗಳು ಮತ್ತು 32 ವಸ್ತುಗಳನ್ನು ಅಪಹರಣದ ಆರೋಪಕ್ಕೆ ಪುರಾವೆಯಾಗಿ ಒದಗಿಸಿತ್ತು. ‘ಆದರೆ ಈ ಆರೋಪಿಗಳು ವೀರಪ್ಪನ್‌ ಜತೆಗೆ ಕೈಜೋಡಿಸಿರುವ ಒಂದು ಸಣ್ಣ ಸಾಕ್ಷ್ಯವನ್ನೂ ಪ್ರಾಸಿಕ್ಯೂಷನ್‌ ಒದಗಿಸಿಲ್ಲ’ ಎಂದು ನ್ಯಾಯಾಧೀಶರು ಹೇಳಿರುವುದು ನ್ಯಾಯದಾನ ಪ್ರಕ್ರಿಯೆ ವ್ಯವಸ್ಥೆಯನ್ನೇ ಅಣಕಿಸುವಂತಿದೆ. ನ್ಯಾಯಾಧೀಶರ ತೀರ್ಪನ್ನೇ ಉಲ್ಲೇಖಿಸುವುದಾದರೆ, ರಾಜ್‌ಕುಮಾರ್‌ ಅವರ ಪತ್ನಿ ಪಾರ್ವತಮ್ಮ ರಾಜ್‌ಕುಮಾರ್‌ ಅವರ ಹೇಳಿಕೆಯನ್ನು ಪ್ರಾಸಿಕ್ಯೂಷನ್‌ ದಾಖಲಿಸಿಲ್ಲ. ರಾಜ್‌ ಅವರ ಕುಟುಂಬದ ಸದಸ್ಯರಿಂದಲೂ ದೂರು ಪಡೆದಿಲ್ಲ. ಸಂಧಾನಕಾರರಾಗಿ ಕಾಡಿಗೆ ತೆರಳಿದ್ದ ಗೋಪಾಲ್‌, ನೆಡುಮಾರನ್‌ ಮತ್ತಿತರರನ್ನೂ ವಿಚಾರಣೆಗೆ ಒಳಪಡಿಸಿಲ್ಲ. ಮಾತ್ರವಲ್ಲ, ಇತರ 9 ಮಂದಿ ಆರೋಪಿಗಳ ಮನೆ ಶೋಧವನ್ನೂ ಮಾಡಿಲ್ಲ. ಈ ಪ್ರಕರಣದಲ್ಲಿ ಪೊಲೀಸರು ಇಷ್ಟೊಂದು ನಿರ್ಲಕ್ಷ್ಯ ತೋರಲು ನಿಜವಾದ ಕಾರಣಗಳೇನು? ರಾಜ್‌ಕುಮಾರ್‌ ಅವರಿಗೆ ವೀರಪ್ಪನ್‌ ತಂಡ ಚಿತ್ರಹಿಂಸೆ ನೀಡಿದೆ ಎಂದು ಎಫ್‌ಐಆರ್‌ನಲ್ಲಿ ದಾಖಲಿಸಿದ್ದರೆ, ಕಾಡಿನಲ್ಲಿ ರಾಜ್‌ಕುಮಾರ್‌ ಇರುವ ಫೋಟೊಗಳಲ್ಲಿ ಅದರ ಯಾವ ಸೂಚನೆಯೂ ಇಲ್ಲ. ಆರೋಪಪಟ್ಟಿ ಮತ್ತು ಸಾಕ್ಷ್ಯಗಳು ಪರಸ್ಪರ ಪೂರಕವಾಗಿರಬೇಕು ಎನ್ನುವ ಪ್ರಾಥಮಿಕ ತಿಳಿವಳಿಕೆಯೂ ಇಲ್ಲದಂತೆ ಪೊಲೀಸರು ವರ್ತಿಸಿರುವುದು ಸ್ಪಷ್ಟವಾಗಿದೆ. ತನಿಖಾಧಿಕಾರಿಗಳು ಬದಲಾವಣೆ ಆದದ್ದರಿಂದ ಪ್ರಾಸಿಕ್ಯೂಷನ್‌ ವಾದ ಮಂಡನೆ ದುರ್ಬಲವಾಗಿದೆ ಎನ್ನುವ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರ ವಾದವನ್ನು ಒಪ್ಪಲು ಸಾಧ್ಯವಿಲ್ಲ. ದೇಶದಾದ್ಯಂತ ಸುದ್ದಿ ಮಾಡಿದ ಮಹತ್ವದ ಪ್ರಕರಣವೊಂದರಲ್ಲಿ ತನಿಖಾಧಿಕಾರಿಗಳು ಬದಲಾದರೂ ಸರ್ಕಾರ ವ್ಯವಸ್ಥಿತ ರೀತಿಯಲ್ಲಿ ಮೊಕದ್ದಮೆಯನ್ನು ನಡೆಸಲು ಪ್ರಯತ್ನಪಡಬಹುದಿತ್ತು. ಪ್ರಾಸಿಕ್ಯೂಷನ್‌ನ ದುರ್ಬಲ ನಡೆ ನೋಡಿದರೆ, ಪೊಲೀಸರು ಯಾವುದೋ ಅಂಶವನ್ನು ಮುಚ್ಚಿಡಲು ಅಥವಾ ಯಾರನ್ನಾದರೂ ರಕ್ಷಿಸಲು ಯತ್ನಿಸಿದ್ದಾರೆಯೇ ಎನ್ನುವ ಅನುಮಾನವೂ ಉಂಟಾಗುತ್ತಿದೆ. ಪೊಲೀಸರು ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿ, ಪ್ರಕರಣದಲ್ಲಿ ಸಂತ್ರಸ್ತರಾದವರಿಗೆ ನ್ಯಾಯ ಒದಗಿಸಲು ಈಗಲಾದರೂ ಪ್ರಯತ್ನಿಸಬೇಕು. ಇಲ್ಲವಾದಲ್ಲಿ ನಮ್ಮ ಪೊಲೀಸರ ತನಿಖಾ ವಿಧಾನ ಮತ್ತು ಕರ್ತವ್ಯ ಶ್ರದ್ಧೆ ಹಾಸ್ಯಾಸ್ಪದ ಎನ್ನಿಸುವ ಸಾಧ್ಯತೆಯಿದೆ. ಪೊಲೀಸರ ಇಂತಹ ಹೊಣೆಗೇಡಿ ನಡವಳಿಕೆಯಿಂದ ನ್ಯಾಯಾಂಗದ ಮೇಲಿರುವ ಜನರ ವಿಶ್ವಾಸಕ್ಕೂ ಕುಂದುಂಟಾಗುವ ಸಾಧ್ಯತೆ ಇದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.