ರಾಜಕೀಯ ಅಪರಾಧೀಕರಣಕ್ಕೆ ತಡೆ: ಚೆಂಡು ಸಂಸತ್ತಿನ ಅಂಗಳಕ್ಕೆ ‘ಗಂಭೀರ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿರುವ ವ್ಯಕ್ತಿಗಳು ಚುನಾವಣೆಗೆಸ್ಪರ್ಧಿಸುವುದನ್ನು ನಿಷೇಧಿಸುವ ಕಾಯ್ದೆಯನ್ನು ಸಂಸತ್ತೇ ರೂಪಿಸಬೇಕು’ ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ತೀರ್ಪು ನೀಡಿದೆ. ಗುರುತರ ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರು ಚುನಾವಣೆಯಲ್ಲಿ ಸ್ಪರ್ಧಿಸಿ, ಶಾಸನಸಭೆಗಳಿಗೆ ಆಯ್ಕೆಯಾಗುವ ಪರಿಪಾಟ ಹೆಚ್ಚುತ್ತಿರುವ ಈಗಿನ ಸಂದರ್ಭದಲ್ಲಿ ಈ ತೀರ್ಪು ಹೆಚ್ಚು ಮಹತ್ವ ಪಡೆದಿದೆ. ಇಂತಹವರಿಂದಪ್ರಜಾಪ್ರಭುತ್ವದ ಬುನಾದಿಯೇ ಅಲುಗಾಡುತ್ತಿದೆ. ‘ಸಮಾಜಕ್ಕೆ ಹೊರೆಯಾಗಿರುವ ಇಂತಹವರ ಕೈಯಲ್ಲಿ ಸಿಲುಕಿ ನಾಗರಿಕರು ನರಳುತ್ತಿದ್ದಾರೆ’ ಎಂಬ ಕೋರ್ಟ್‌ ಅಭಿಪ್ರಾಯ ದೇಶದ ಸದ್ಯದ ಸ್ಥಿತಿಗೆ ಹಿಡಿದ ಕನ್ನಡಿ. ರಾಜಕೀಯ ಅಪರಾಧೀಕರಣ ತಡೆಯುವ ಕುರಿತು ಅನೇಕ ವರ್ಷಗಳಿಂದ ಚರ್ಚೆಗಳು ನಡೆಯುತ್ತಿವೆ. ನ್ಯಾಯಾಲಯದ ತೀರ್ಪು ಈಗ ಈ ಪ್ರಶ್ನೆಯನ್ನು ಸಂಸತ್ತಿನ ಅಂಗಳಕ್ಕೆ ತಲುಪಿಸಿದೆ. ಕಲುಷಿತಗೊಂಡಿರುವ ರಾಜಕಾರಣವನ್ನು ಸ್ವಚ್ಛಗೊಳಿಸುವ ಕೆಲಸವನ್ನು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುವುದಾಗಿ ಪ್ರತಿಜ್ಞೆ ಸ್ವೀಕರಿಸಿದ ಚುನಾಯಿತ ಪ್ರತಿನಿಧಿಗಳೇ ಮಾಡಬೇಕು ಎಂದು ಕೋರ್ಟ್‌ ಹೇಳಿರುವ ಮಾತು ನಮ್ಮ ಜನಪ್ರತಿನಿಧಿಗಳಿಗೆ ನಾಟಬೇಕು. ಸಂಸತ್ತು ತಡಮಾಡದೆ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು. ರಾಜಕಾರಣದಲ್ಲಿ ಹಣ ಮತ್ತು ತೋಳ್ಬಲದ ಪಾತ್ರವು ಎರಡು–ಮೂರು ದಶಕಗಳಿಂದ ಹೆಚ್ಚುತ್ತಲೇ ಇದೆ. ಲೋಕಸಭೆ ಹಾಗೂ ವಿಧಾನಸಭೆಗಳ ಮೂರನೇ ಒಂದು ಭಾಗದಷ್ಟು ಚುನಾಯಿತ ಪ್ರತಿನಿಧಿಗಳು ಗಂಭೀರ ಕ್ರಿಮಿನಲ್‌ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್ ರಿಫಾರ್ಮ್ಸ್‌ (ಎಡಿಆರ್‌) ಸಂಸ್ಥೆ ಈ ವರ್ಷ ಫೆಬ್ರುವರಿಯಲ್ಲಿ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಶೇಕಡ 35ರಷ್ಟು ಮುಖ್ಯಮಂತ್ರಿಗಳು ಕ್ರಿಮಿನಲ್‌ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ. ಚುನಾವಣೆಗೆ ಸಲ್ಲಿಸಿದ್ದ ನಾಮಪತ್ರಗಳಲ್ಲಿ ಬಹಿರಂಗಪಡಿಸಿರುವ ಅಂಶಗಳನ್ನು ಆಧರಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಶುದ್ಧ ಚಾರಿತ್ರ್ಯ ಹೊಂದಿದವರಿಗಿಂತಲೂ ಕ್ರಿಮಿನಲ್‌ ಹಿನ್ನೆಲೆಯುಳ್ಳವರೇ ಚುನಾವಣೆಗಳಲ್ಲಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದೂ ಎಡಿಆರ್ ಹೇಳಿರುವುದು ಗಮನಾರ್ಹ ಸಂಗತಿ. ಗ್ರಾಮ ಪಂಚಾಯ್ತಿ ಚುನಾವಣೆಯಿಂದ ಲೋಕಸಭೆ ಚುನಾವಣೆವರೆಗೂ ಇದು ವ್ಯಾಪಿಸಿದೆ. ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವಂತೆ ಕೋರ್ಟ್‌ ಈ ಹಿಂದೆಯೇ ಸೂಚಿಸಿದೆ. ಆದರೆ ನಮ್ಮ ಆಡಳಿತ ವ್ಯವಸ್ಥೆ ಇದನ್ನು ಗಂಭೀರವಾಗಿ ಪರಿಗಣಿಸಿದಂತೆ ಇಲ್ಲ. ಕ್ರಿಮಿನಲ್‌ ಹಿನ್ನೆಲೆ ಉಳ್ಳವರಿಗೆ ಟಿಕೆಟ್‌ ಕೊಡುವ ವಿಷಯದಲ್ಲಿ ಯಾವ ಪಕ್ಷವೂ ಹಿಂದೆ ಬಿದ್ದಿಲ್ಲ. ರಾಜಕಾರಣದ ಅಪರಾಧೀಕರಣ ತಡೆಯುವ ನಿಟ್ಟಿನಲ್ಲಿ ಎಲ್ಲ ಪಕ್ಷಗಳೂ ಆತ್ಮಾವಲೋಕನ ಮಾಡಿಕೊಂಡರೆ ಕ್ರಿಮಿನಲ್‌ಗಳನ್ನು ದೂರವಿಡುವುದು ಕಷ್ಟವೇನಲ್ಲ. ಆದರೆ, ಯಾರಿಗೂ ಇದು ಬೇಕಾಗಿಲ್ಲ. ಚುನಾವಣಾ ವ್ಯವಸ್ಥೆ ಸುಧಾರಣೆ ಆದರೆ ದೇಶದ ಆಡಳಿತ ವ್ಯವಸ್ಥೆಯಲ್ಲೂ ಬದಲಾವಣೆ ಕಾಣಬಹುದು. ಕಳಂಕಿತರು ಆಯ್ಕೆಯಾಗದಂತೆ ಮತದಾರರೂ ಎಚ್ಚರ ವಹಿಸಬೇಕು. ಮತದಾರರು ಈ ವಿಚಾರದಲ್ಲಿ ಉದಾಸೀನ ಪ್ರವೃತ್ತಿ ತೋರಿದರೆ ಅದರ ಪರಿಣಾಮವನ್ನು ಅವರೇ ಅನುಭವಿಸಬೇಕಾಗುತ್ತದೆ. ಈ ವಿಷಯದಲ್ಲಿ ಮತದಾರರನ್ನು ಜಾಗೃತಿಗೊಳಿಸುವ ಕೆಲಸವೂ ನಿರಂತರವಾಗಿ ನಡೆಯಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.