ನ್ಯಾಯಾಂಗ ಕುರಿತ ನಿರ್ಲಕ್ಷ್ಯ ಅಕ್ಷಮ್ಯ ಕೊರತೆ ನೀಗಲು ತುರ್ತು ಕ್ರಮ ಅಗತ್ಯ ದೇಶದ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಹುದ್ದೆಗಳಿಗೆ ನೇಮಕ ಮತ್ತು ಮೂಲಸೌಕರ್ಯ ನಿರ್ಮಾಣ ಕಾರ್ಯ ಆಮೆಗತಿ ಹಿಡಿದಿರುವ ಕುರಿತು ಸುಪ್ರೀಂ ಕೋರ್ಟ್ ಗುರುವಾರ ತೀವ್ರ ಕಳವಳ ವ್ಯಕ್ತಪಡಿಸಿದೆ. ನ್ಯಾಯಾಧೀಶ ಹುದ್ದೆಗಳ ಭರ್ತಿ ಮತ್ತು ಅಗತ್ಯ ಸಿಬ್ಬಂದಿ ನೇಮಕ ತುರ್ತಾಗಿ ಆಗಬೇಕು. ಕೋರ್ಟ್ ಕೊಠಡಿಗಳು ಮತ್ತು ನ್ಯಾಯಾಧೀಶರ ವಸತಿಗೃಹಗಳ ನಿರ್ಮಾಣವೂ ಸಮರೋಪಾದಿ ಜರುಗಬೇಕು ಎಂದಿದೆ. ಈ ಸಂಬಂಧ ಹೈಕೋರ್ಟ್‌ಗಳು ಮತ್ತು ರಾಜ್ಯ ಸರ್ಕಾರಗಳಿಗೆ ಗಡುವು ಗೊತ್ತು ಮಾಡಿದೆ. ದೆಹಲಿ, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಅಸ್ಸಾಂ, ಮಣಿಪುರ, ಮೇಘಾಲಯ ಸರ್ಕಾರಗಳು ಸುಪ್ರೀಂ ಕೋರ್ಟ್‌ನ ಅಸಮಾಧಾನ ಎದುರಿಸಿದವು. ಕರ್ನಾಟಕದ ಸರದಿ ಮುಂಬರುವ ಡಿಸೆಂಬರ್ ಐದರಂದು ಬರಲಿದೆ. ಗುಜರಾತ್, ಹಿಮಾಚಲಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಕೇರಳ ರಾಜ್ಯಗಳು ಅಂದು ಕಟಕಟೆಯಲ್ಲಿ ನಿಲ್ಲಲಿವೆ. ಅಧೀನ ನ್ಯಾಯಾಲಯಗಳ ಒಟ್ಟು 22,036 ಹುದ್ದೆಗಳ ಪೈಕಿ 5,133 ಹುದ್ದೆಗಳು ಖಾಲಿ ಉಳಿದಿರುವ ಅಂಶವನ್ನು ಸುಪ್ರೀಂ ಕೋರ್ಟ್ ಈ ಹಿಂದೆಯೇ ಗಮನಕ್ಕೆ ತೆಗೆದುಕೊಂಡಿತ್ತು. ಈ ಸಂಬಂಧ ಕೈಗೊಂಡಿರುವ ಕ್ರಮಗಳ ಕುರಿತು ವಿವರ ಸಲ್ಲಿಸುವಂತೆ ರಾಜ್ಯ ಸರ್ಕಾರಗಳು ಮತ್ತು ಹೈಕೋರ್ಟ್‌ಗಳಿಗೆ ನಿರ್ದೇಶನ ನೀಡಿತ್ತು. ಸಂವಿಧಾನವೇ ಗುರುತಿಸಿರುವಂತೆ ನ್ಯಾಯಾಂಗವು ಜನತಂತ್ರದ ಮೂರು ಅಂಗಗಳಲ್ಲಿ ಒಂದು. ಉಳಿದ ಎರಡು ಅಂಗಗಳಿಗೆ ದೊರೆಯುವಷ್ಟು ಧಾರಾಳ ಸಂಪನ್ಮೂಲ ಮತ್ತು ಆದ್ಯತೆ ನ್ಯಾಯಾಂಗಕ್ಕೆ ದೊರೆಯುತ್ತಿಲ್ಲ. ಖಾಲಿ ಉಳಿದಿರುವ ನ್ಯಾಯಾಧೀಶ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಸುಪ್ರೀಂ ಕೋರ್ಟ್ ಕೂಡ ಕಾಲ ಕಾಲಕ್ಕೆ ಕೇಂದ್ರ ಸರ್ಕಾರವನ್ನು ಅಂಗಲಾಚಿರುವ ನಿದರ್ಶನಗಳಿವೆ. ಕೆಲ ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಕಣ್ಣೀರು ಹಾಕಿದ್ದರು. ಮುಖ್ಯಮಂತ್ರಿಗಳು ಮತ್ತು ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ಇದ್ದರು. ಬೆಟ್ಟದಂತೆ ಬೆಳೆಯುತ್ತಿರುವ ವ್ಯಾಜ್ಯಗಳ ವಿಚಾರಣೆಗೆ ಸಾಕಷ್ಟು ಸಂಖ್ಯೆಯ ನ್ಯಾಯಾಧೀಶರಿಲ್ಲ. ನ್ಯಾಯಾಧೀಶರ ಸಂಖ್ಯೆಯನ್ನು 21 ಸಾವಿರದಿಂದ 40 ಸಾವಿರಕ್ಕೆ ಏರಿಸಬೇಕಿದೆ. ಆದರೆ ಕಾರ್ಯಾಂಗ ನಿಷ್ಕ್ರಿಯವಾಗಿದೆ ಎಂದು ಅವರು ದೂರಿದ್ದರು. ವಿಚಾರಣೆಯಿಲ್ಲದೆ ಜೈಲುಗಳಲ್ಲಿ ಕೊಳೆಯುತ್ತಿರುವ ಕೈದಿಗಳಿಗಾಗಿ ಅಥವಾ ಖಟ್ಲೆದಾರರಿಗಾಗಿ ಮಾತ್ರವಲ್ಲದೆ, ದೇಶದ ಅಭಿವೃದ್ಧಿಗಾಗಿ, ಮುನ್ನಡೆಗಾಗಿ ಈ ಕ್ರಮ ಅತ್ಯಗತ್ಯ. ಬರೀ ನ್ಯಾಯಾಂಗವನ್ನು ಟೀಕಿಸುವುದರಿಂದ ಏನೂ ಸಾಧನೆ ಆಗುವುದಿಲ್ಲ. ಎಲ್ಲ ಹೊರೆಯನ್ನೂ ನ್ಯಾಯಾಂಗದ ಹೆಗಲಿಗೆ ಜಾರಿಸುವುದು ತರವಲ್ಲ ಎಂದು ಗದ್ಗದಿತ ಆಗಿದ್ದರು. ಸಮಸ್ಯೆಯನ್ನು ನ್ಯಾಯಾಂಗ ಮತ್ತು ಕಾರ್ಯಾಂಗ ಜೊತೆಗೂಡಿ ಬಗೆಹರಿಸೋಣ ಎಂದು ಠಾಕೂರ್ ಅವರನ್ನು ಪ್ರಧಾನಮಂತ್ರಿ ಅದೇ ಸಮಾರಂಭದಲ್ಲಿ ಸಂತೈಸಿದ್ದರು. ಹತ್ತು ಲಕ್ಷ ಜನಸಂಖ್ಯೆಗೆ ಈಗ ಹತ್ತು ಮಂದಿ ನ್ಯಾಯಾಧೀಶರಿದ್ದಾರೆ. ಈ ಅನುಪಾತವನ್ನು 50ಕ್ಕೆ ಹೆಚ್ಚಿಸುವಂತೆ ಭಾರತ ಕಾನೂನು ಆಯೋಗ 1987ರಷ್ಟು ಹಿಂದೆಯೇ ಶಿಫಾರಸು ಮಾಡಿತ್ತು. 2002ರಲ್ಲಿ ಸುಪ್ರೀಂ ಕೋರ್ಟ್ ಈ ಶಿಫಾರಸನ್ನು ಬೆಂಬಲಿಸಿತ್ತು. ಸಂಸದೀಯ ಸಮಿತಿ ಕೂಡ ಅನುಮೋದಿಸಿತ್ತು. ಆದರೆ ಇಲ್ಲಿಯತನಕ ಈ ದಿಸೆಯಲ್ಲಿ ಹೆಚ್ಚಿನ ಪ್ರಗತಿ ಆಗಿಲ್ಲ. 10 ಲಕ್ಷ ಜನಸಂಖ್ಯೆಗೆ ಲಭ್ಯವಿರುವ ನ್ಯಾಯಾಧೀಶರ ಸಂಖ್ಯೆ 10ರಿಂದ 15ಕ್ಕೆ ಏರಿದೆ ಅಷ್ಟೇ. 1987ರ ಜನಸಂಖ್ಯೆಯ ಪ್ರಕಾರ 40 ಸಾವಿರ ನ್ಯಾಯಾಧೀಶರ ಅಗತ್ಯವಿತ್ತು. ಅಂದಿನಿಂದ ಇಂದಿನವರೆಗೆ ದೇಶದ ಜನಸಂಖ್ಯೆಗೆ ಹೊಸದಾಗಿ 25 ಕೋಟಿಗೂ ಹೆಚ್ಚು ಮಂದಿ ಸೇರ್ಪಡೆ ಆಗಿದ್ದಾರೆ. ಅಧೀನ ನ್ಯಾಯಾಲಯಗಳಲ್ಲಿ 2.84 ಕೋಟಿ ಕೇಸುಗಳು ವಿಚಾರಣೆಗೆ ಬಾಕಿ ಉಳಿದಿವೆ. ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್ ಸೇರಿದರೆ ಈ ಸಂಖ್ಯೆ 3.3 ಕೋಟಿಯಷ್ಟು. ಶೇ 60ರಷ್ಟು ಕೇಸುಗಳು ಎರಡು ವರ್ಷ ಹಳೆಯವಾದರೆ, ಶೇ 40ರಷ್ಟು ಕೇಸುಗಳು ಐದು ವರ್ಷಗಳಿಗೂ ಹೆಚ್ಚು ಕಾಲದಿಂದ ವಿಚಾರಣೆಗಾಗಿ ಕಾದಿವೆ. ಈ ಕೇಸುಗಳಿಗೆ ಸಂಬಂಧಪಟ್ಟ ಲಕ್ಷಾಂತರ ವಿಚಾರಣಾಧೀನ ಕೈದಿಗಳು ತಮ್ಮ ಸರದಿಗಾಗಿ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ. ಪರಿಸ್ಥಿತಿ ಕೈ ಮೀರುತ್ತಿದೆ. ಕಾರ್ಯಾಂಗದ ನಿರ್ಲಕ್ಷ್ಯ ಮುಂದುವರೆದಿರುವುದು ಅಕ್ಷಮ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.