ಸಮಚಿತ್ತದ ಮೋದಿ ಮಾತು, ಕ್ರಿಯೆಗೆ ಇಳಿದರೆ ಬಲುಚೆನ್ನ ಲೋಕಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳನ್ನು ದೂಳೀಪಟ ಮಾಡಿ ಬಹುದೊಡ್ಡ ಗೆಲುವನ್ನು ಸಾಧಿಸಿರುವ ಎನ್‌ಡಿಎ ಮೈತ್ರಿಕೂಟ, ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮತ್ತೊಮ್ಮೆ ಕೇಂದ್ರ ಸರ್ಕಾರವನ್ನು ಮುನ್ನಡೆಸಲು ಸಜ್ಜಾಗಿದೆ. ಚುನಾವಣಾ ವಿಜಯದ ಬಳಿಕ ಎನ್‌ಡಿಎ ಸಂಸದರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ ಮತ್ತು ಸಬ್‌ ಕಾ ವಿಶ್ವಾಸ್‌ ನಮ್ಮ ಸರ್ಕಾರದ ಮಂತ್ರ’ ಎಂದು ಹೇಳಿದ್ದಾರೆ. ಚುನಾವಣೆಗೆ ಮುನ್ನ ಇದ್ದ ಮಂತ್ರದ ಜೊತೆಗೆ ಈಗ ‘ಸಬ್‌ ಕಾ ವಿಶ್ವಾಸ್‌’ ಎನ್ನುವ ಪದಗಳನ್ನೂ ಅವರು ಜೋಡಿಸಿದ್ದಾರೆ. ಎಲ್ಲರನ್ನೂ ಒಳಗೊಳ್ಳುವ ಮತ್ತು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವ ಸರ್ಕಾರ ತಮ್ಮದು ಎನ್ನುವ ಅರ್ಥವನ್ನು ಅವರ ಮಾತುಗಳು ಹೊಮ್ಮಿಸಿವೆ. ‘ದೇಶದ ಅಲ್ಪಸಂಖ್ಯಾತರಲ್ಲಿ ಭಯದ ವಾತಾವರಣ ಮೂಡಿಸಲಾಗಿದೆ. ಇದಕ್ಕೆ ಕಾರಣ ವೋಟ್‌ಬ್ಯಾಂಕ್‌ ರಾಜಕೀಯ. ಈ ಭಯದ ಮಿಥ್ಯೆಯನ್ನು ನಾವು ನಿವಾರಿಸಬೇಕಿದೆ. 1857ರಲ್ಲಿ ಎಲ್ಲ ಸಮುದಾಯದವರೂ ಭುಜಕ್ಕೆ ಭುಜ ಕೊಟ್ಟು ದೇಶದ ಸ್ವಾತಂತ್ರ್ಯಕ್ಕೆ ಹೇಗೆ ಹೋರಾಡಿದರೋ ಅದೇ ರೀತಿಯ ಸ್ಫೂರ್ತಿ ಮತ್ತೆ ದೇಶದಲ್ಲಿ ಬರಬೇಕಿದೆ’ ಎಂದೂ ಅವರು ಹೇಳಿದ್ದಾರೆ. ಚುನಾವಣೆಯಲ್ಲಿ ವಿರೋಧ ಪಕ್ಷಗಳ ನಾಯಕರ ವಿರುದ್ಧ ಕಟುಟೀಕೆ, ನಿಂದನೆ, ಆರೋಪಗಳನ್ನು ಹೊರಿಸಿದ ಪ್ರಧಾನಿ ಮೋದಿ, ಚುನಾವಣೆಯಲ್ಲಿ ಪ್ರಚಂಡ ವಿಜಯ ಗಳಿಸಿದ ಬಳಿಕ ಹೀಗೆ ಸಮಚಿತ್ತದಿಂದ ಮಾತನಾಡಿರುವುದು ಸ್ವಾಗತಾರ್ಹ. ದೇಶವೊಂದನ್ನು ಮುನ್ನಡೆಸಬೇಕಾದರೆ ಎಲ್ಲ ಜನವರ್ಗಗಳ ವಿಶ್ವಾಸವನ್ನು ಗಳಿಸುವ, ಅದರಲ್ಲೂ ಗಣನೀಯ ಸಂಖ್ಯೆಯಲ್ಲಿರುವ ಧಾರ್ಮಿಕ ಅಲ್ಪಸಂಖ್ಯಾತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಅಗತ್ಯವಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಧಾರ್ಮಿಕ ಅಲ್ಪಸಂಖ್ಯಾತರನ್ನು ವೋಟ್‌ಬ್ಯಾಂಕ್‌ ಆಗಿ ಕೆಲವು ರಾಜಕೀಯ ಪಕ್ಷಗಳು ಬಳಸಿವೆ ಎನ್ನುವ ಮೋದಿಯವರ ಮಾತಿನಲ್ಲಿ ಸತ್ಯಾಂಶವಿದೆ. ಅಲ್ಪಸಂಖ್ಯಾತರ ಶಿಕ್ಷಣ ಮತ್ತು ಸಾಮಾಜಿಕ ಅಭಿವೃದ್ಧಿಗೆ ಒತ್ತು ಕೊಡುವ ಮೂಲಕ ಅವರಲ್ಲಿರುವ ಭಯದ ವಾತಾವರಣವನ್ನು ಹೋಗಲಾಡಿಸಬೇಕು ಎನ್ನುವ ಮಾತುಗಳೂ ಅರ್ಥಪೂರ್ಣ. ಆದರೆ ‘ಸಬ್‌ ಕಾ ವಿಶ್ವಾಸ್‌’ ಮಂತ್ರವನ್ನು ಜಾರಿಗೆ ತರಲು ಅವರು ಏನು ಮಾಡಲಿದ್ದಾರೆ ಎನ್ನುವುದೂ ಮುಖ್ಯ. ಬಿಜೆಪಿ ಕೂಡಾ ಚುನಾವಣಾ ಪ್ರಚಾರದಲ್ಲಿ ಪದೇ ಪದೇ ಹಿಂದೂಗಳನ್ನು ಓಲೈಸುವ ರಾಜಕೀಯ ಮಾಡಿರುವುದು ಕಣ್ಣಮುಂದೆಯೇ ಇದೆ. ಹಿಂದುತ್ವದ ಅಲೆಯೊಂದನ್ನು ಹುಟ್ಟುಹಾಕುವ ಮೂಲಕ, ಧಾರ್ಮಿಕ ಉನ್ಮಾದ ಉಂಟುಮಾಡಿ ಅದನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿರುವ ಅನೇಕ ನಾಯಕರು ಬಿಜೆಪಿಯಲ್ಲೇ ಇದ್ದಾರೆ. ಮಹಾತ್ಮ ಗಾಂಧಿಯವರನ್ನು ಕೊಂದ ನಾಥೂರಾಂ ಗೋಡ್ಸೆ ದೇಶಭಕ್ತ ಎಂದು ಬಹಿರಂಗವಾಗಿ ಹಾಡಿಹೊಗಳಿದವರೂ ಬಿಜೆಪಿಯ ನಾಯಕರೇ. ಧಾರ್ಮಿಕ ಧ್ರುವೀಕರಣದ ಮೂಲಕ ಅಲ್ಪಸಂಖ್ಯಾತರು ಅನ್ಯರು ಎನ್ನುವ ಭಾವನೆಯನ್ನೂ ಈಗಾಗಲೇ ನಮ್ಮ ಸಮಾಜದಲ್ಲಿ ಮೂಡಿಸಲಾಗಿದೆ. ವಿವಿಧ ಧರ್ಮೀಯರ ಮಧ್ಯೆ ಉಂಟಾಗಿರುವ ಈ ಕಂದಕವನ್ನು ತುಂಬಲು ಮೋದಿ ಏನು ಮಾಡಲಿದ್ದಾರೆ ಎನ್ನುವುದು ಕುತೂಹಲಕರ. ಬರೀ ಭಾಷಣದಿಂದ ಇದು ಸಾಧ್ಯವಾಗುವುದಿಲ್ಲ ಎನ್ನುವುದೂ ಸ್ಪಷ್ಟ. ಎನ್‌ಡಿಎ ಸಂಸದರ ಸಭೆಯಲ್ಲಿ ಭಾಷಣ ಆರಂಭಿಸುವುದಕ್ಕೆ ಮುನ್ನ ಸಂವಿಧಾನದ ಪ್ರತಿಗೆ ತಲೆಬಾಗಿ ನಮಿಸಿದ ಮೋದಿ, ಆ ಮೂಲಕ ತಾವು ಸಂವಿಧಾನಕ್ಕೆ ನಿಷ್ಠರಾಗಿ ಕೆಲಸ ಮಾಡುತ್ತೇವೆ ಎನ್ನುವುದನ್ನೂ ಸೂಚಿಸಿದ್ದಾರೆ.ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನದ ಆಶಯಕ್ಕೆ ಚ್ಯುತಿ ತರುವ ರೀತಿಯಲ್ಲಿ ನಡೆದುಕೊಳ್ಳಲಿದೆ ಎಂದು ವಿರೋಧಪಕ್ಷಗಳು ಆರೋಪಿಸಿದ್ದವು. ಇಂತಹ ಆರೋಪಕ್ಕೆ ಕಾರಣ ಕೂಡ ಬಿಜೆಪಿಯ ಕೆಲವು ನಾಯಕರೇ ಎಂಬುದನ್ನು ಮರೆಯುವಂತಿಲ್ಲ. ಈ ಹಿನ್ನೆಲೆಯಲ್ಲಿ ಮೋದಿಯವರು ಈ ಸ್ಪಷ್ಟನೆ ನೀಡುವ ಅಗತ್ಯ ಉಂಟಾಗಿರಬಹುದು. ‘ಸಂವಿಧಾನವನ್ನು ಬದಲಾಯಿಸಬೇಕು’ ಮತ್ತು ‘ಮನುಸ್ಮೃತಿಯೇ ನಮ್ಮ ಸಂವಿಧಾನ’ ಎಂದು ಬಹಿರಂಗವಾಗಿ ಹೇಳಿದ ಸಂಸದರೂ ಆ ಸಭೆಯಲ್ಲಿ ಇದ್ದರು ಎನ್ನುವುದು ಗಮನಾರ್ಹ. ಪಕ್ಷದೊಳಗೇ ಇರುವ ಇಂತಹ ಕೂಗುಮಾರಿಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಸಾಧ್ಯವಾಗದಿದ್ದರೆ ಮೋದಿಯವರ ಮಾತುಗಳಿಗೆ ಯಾವುದೇ ಅರ್ಥ ಇರುವುದಿಲ್ಲ. ಅವರೇ ಹೇಳಿದಂತೆ, ‘ಹೊಸ ಭಾರತದ ಹೊಸ ಪ್ರಯಾಣ ಮುಂದುವರಿಸಲು’ ಸಂವಿಧಾನದ ಮೂಲ ಆಶಯಕ್ಕೆ ಚ್ಯುತಿ ತರದಂತೆ ಆಡಳಿತ ನಡೆಸುವುದು ಮುಖ್ಯ. ಆ ನಿಟ್ಟಿನಲ್ಲಿ ಅವರು ಮುಂದುವರಿಯಲಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.