ಸರ್ಕಾರ ಇರುವುದು ಶಾಸಕರಿಗಾಗಿ ಅಲ್ಲ ಜನರಿಗಾಗಿ ಎನ್ನುವುದನ್ನು ಅರಿಯಿರಿ ರಾಜ್ಯದಲ್ಲಿ ಒಂದು ವರ್ಷದಿಂದ ಮೈತ್ರಿ ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಲೋಕಸಭಾ ಚುನಾವಣೆಯಲ್ಲಿ ದಯನೀಯ ಸೋಲು ಅನುಭವಿಸಿವೆ. ಒಟ್ಟು 28 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ 25 ಸ್ಥಾನಗಳನ್ನು ಗೆದ್ದುಕೊಂಡಿರುವುದು ರಾಜ್ಯದ ಆಳುವ ಮೈತ್ರಿಕೂಟದ ಜಂಘಾಬಲವನ್ನೇ ಉಡುಗಿಸಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ತಲಾ ಒಂದು ಸ್ಥಾನ ಮಾತ್ರ ಗೆದ್ದಿರುವುದು, ಎಚ್.ಡಿ.ದೇವೇಗೌಡ ಮತ್ತು ಮಲ್ಲಿಕಾರ್ಜುನ ಖರ್ಗೆ ಸಹಿತ ಮೈತ್ರಿಕೂಟದ ಘಟಾನುಘಟಿಗಳೆಲ್ಲ ಸೋಲಪ್ಪಿರುವುದು ಎರಡೂ ಪಕ್ಷಗಳಲ್ಲಿ ಮುಂದೇನು ಎನ್ನುವ ಆತಂಕವನ್ನು ಮೂಡಿಸಿರುವುದು ಸುಳ್ಳಲ್ಲ. ಎರಡೂ ಪಕ್ಷಗಳು ಈ ದಯನೀಯ ಪರಾಭವದ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಲೋಕಸಭಾ ಚುನಾವಣೆಗೆ ಮುನ್ನ ಮತ್ತು ಪ್ರಚಾರದ ಹಂತದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಸ್ಥಳೀಯ ನಾಯಕರು ಪರಸ್ಪರ ಕೆಸರೆರಚಾಟ ನಡೆಸಿದ್ದು ಮೈತ್ರಿಕೂಟದ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಮೈತ್ರಿಕೂಟವು ಜಂಟಿಯಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೂ, ಕಾರ್ಯಕರ್ತರ ಮಟ್ಟದಲ್ಲಿ ಒಮ್ಮನಸ್ಸಿನ ಪ್ರಚಾರ ಕಾರ್ಯ ನಡೆಯಲಿಲ್ಲ. ಅದರ ಜೊತೆಗೆ ದೇಶದಾದ್ಯಂತ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯ ಅಲೆಯ ಹೊಡೆತವೂ ಮೈತ್ರಿಕೂಟದ ಅಭ್ಯರ್ಥಿಗಳ ಸೋಲಿಗೆ ಕಾರಣವಾಯಿತು. ಬಿಜೆಪಿಯ ಲೋಕಸಭಾ ಸದಸ್ಯರ ಐದು ವರ್ಷಗಳ ಅವಧಿಯ ಸಾಧನೆ ಕಳಪೆಯಾಗಿತ್ತು ಎನ್ನಲಾದ ಹಲವು ಕ್ಷೇತ್ರಗಳಲ್ಲೂ ಮತದಾರರು ಮೋದಿಯವರ ಮುಖ ನೋಡಿ ಬಿಜೆಪಿಗೆ ಮತ ಚಲಾಯಿಸಿದ್ದಾರೆ ಎನ್ನುವುದು ಸ್ಪಷ್ಟ. ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಅವಲೋಕಿಸಿದಾಗ, ರಾಜ್ಯದ 170ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಮುನ್ನಡೆ ಸಿಕ್ಕಿದೆ. ಹಾಗೆಂದು, ರಾಜ್ಯದ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆದರೆ ಅಷ್ಟೂ ಕ್ಷೇತ್ರಗಳಲ್ಲಿ ಬಿಜೆಪಿ ಜಯ ಗಳಿಸುತ್ತದೆ ಎಂದು ಖಚಿತವಾಗಿ ಹೇಳಲಾಗದು. ಈ ಹಿಂದೆಯೂ ಲೋಕಸಭೆ ಮತ್ತು ವಿಧಾನಸಭೆಯ ಚುನಾವಣೆಗಳಲ್ಲಿ ರಾಜ್ಯದ ಮತದಾರರು ವಿಭಿನ್ನ ಪಕ್ಷಗಳ ಪರವಾಗಿ ತೀರ್ಪು ನೀಡಿದ ಉದಾಹರಣೆಗಳಿವೆ. ಘೋರ ಸೋಲಿನ ನಡುವೆಯೂ ಸಮ್ಮಿಶ್ರ ಸರ್ಕಾರ ಈ ಅಂಶವನ್ನು ನೆನಪಿಸಿಕೊಂಡು ಸಮಾಧಾನ ಪಟ್ಟುಕೊಳ್ಳಬಹುದು. ಆದರೆ ಈ ಒಂದು ವರ್ಷದಲ್ಲಿ ರಾಜ್ಯದ ಸಮ್ಮಿಶ್ರ ಸರ್ಕಾರ ನಿಜಕ್ಕೂ ಜನಪರ ಆಡಳಿತ ನೀಡಿದೆಯೇ? ಜನರ ಸಮಸ್ಯೆಗಳನ್ನು ಪರಿಹರಿಸಲು ಗಮನ ಕೊಡಬೇಕಾದ ಒಂದು ಸರ್ಕಾರ, ಅಧಿಕಾರದಲ್ಲಿ ಉಳಿಯುವುದೇ ಮಹಾಸಾಧನೆ ಎಂಬಂತೆ ವರ್ತಿಸುತ್ತಿರುವುದು ಎಷ್ಟು ಸರಿ? ತನಗಿಂತ ಅರ್ಧದಷ್ಟು ಕಡಿಮೆ ಸಂಖ್ಯೆಯ ಶಾಸಕರನ್ನು ಹೊಂದಿದ ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಟ್ಟ ಕಾಂಗ್ರೆಸ್‌, ಐದು ವರ್ಷಗಳ ಕಾಲ ಎಚ್‌.ಡಿ.ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲು ಬೇಷರತ್‌ ಬೆಂಬಲ ನೀಡಿದೆ. ಹಾಗಿದ್ದೂ, ಅಧಿಕಾರ ವಹಿಸಿಕೊಂಡ ಮೊದಲ ದಿನದಿಂದಲೇ ಕಾಂಗ್ರೆಸ್‌ನ ಸ್ಥಳೀಯ ನಾಯಕರು ಬಹಿರಂಗವಾಗಿ ಭಿನ್ನಮತ ವ್ಯಕ್ತಪಡಿಸಲು ಕಾರಣಗಳೇನು? ಪಕ್ಷದ ಹೈಕಮಾಂಡ್‌ ಕೈಗೊಂಡ ಮೈತ್ರಿಯ ನಿರ್ಧಾರವನ್ನು ಶಾಸಕರು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾಡುವಲ್ಲಿ ರಾಜ್ಯದ ಕಾಂಗ್ರೆಸ್‌ ನಾಯಕರು ವಿಫಲರಾಗಿದ್ದು ಏಕೆ? ನಾಯಕರೇ ಹೀಗೆ ಬಹಿರಂಗ ಕೆಸರೆರಚಾಟಕ್ಕೆ ಇಳಿದರೆ ಕಾರ್ಯಕರ್ತರ ಮಟ್ಟದಲ್ಲಿ ಹೊಂದಾಣಿಕೆ ಹೇಗೆ ಸಾಧ್ಯ? ಕಾಂಗ್ರೆಸ್‌ ಶಾಸಕರ ಭಿನ್ನಮತದ ಲಾಭ ಪಡೆದು, ಪಕ್ಷಾಂತರದ ಮೂಲಕ ಮೈತ್ರಿ ಸರ್ಕಾರವನ್ನು ಉರುಳಿಸುವ ಬಿಜೆಪಿಯ ಯತ್ನವನ್ನು ವಿಫಲಗೊಳಿಸುವುದೇ ಈ ಸರ್ಕಾರದ ಆದ್ಯತೆಯ ಕೆಲಸ ಎನ್ನುವಂತಾಗಿದೆ ಈಗಿನ ಪರಿಸ್ಥಿತಿ. ರಾಜ್ಯದ ಬಹುತೇಕ ಜಿಲ್ಲೆಗಳು ಬರಗಾಲದ ದವಡೆಗೆ ಸಿಕ್ಕಿರುವಾಗ ಆಡಳಿತ ಯಂತ್ರ ಚುರುಕುಗೊಳಿಸಿ, ಜನರ ಕಣ್ಣೀರು ಒರೆಸುವ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಲು ಮೈತ್ರಿ ಸರ್ಕಾರಕ್ಕೆ ಸಾಧ್ಯವಿಲ್ಲ ಎಂದಾದರೆ ಅಧಿಕಾರದಲ್ಲಿ ಉಳಿಯುವ ಯಾವ ನೈತಿಕ ಹಕ್ಕೂ ಇರುವುದಿಲ್ಲ. ಚುನಾವಣೆಯ ಸೋಲಿನ ಆಘಾತದಿಂದ ಹೊರಬಂದು, ಉಭಯಪಕ್ಷಗಳೂ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ರಾಜ್ಯದ ಜನರು ಈ ಪಕ್ಷಗಳ ಇದುವರೆಗಿನ ಅಂತಃಕಲಹವನ್ನು ಮರೆಯಬಹುದು. ಬಜೆಟ್‌ನಲ್ಲಿ ಘೋಷಿಸಲಾದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವತ್ತ ಗಮನ ಹರಿಸುವುದು ಸರ್ಕಾರ ತಕ್ಷಣ ಮಾಡಬೇಕಾದ ಕೆಲಸ. ರೈತರ ಸಾಲಮನ್ನಾಕ್ಕೆ ಮುಂಗಡ ಪತ್ರದಲ್ಲಿ ಬಹುದೊಡ್ಡ ಪಾಲನ್ನು ಇಟ್ಟಿರುವ ಮೈತ್ರಿ ಸರ್ಕಾರ, ಅದಕ್ಕಾಗಿ ಹೊಸ ಸಂಪನ್ಮೂಲಗಳನ್ನು ರೂಢಿಸುವ ಕೆಲಸಕ್ಕೂ ಆದ್ಯತೆ ನೀಡಬೇಕಿದೆ. ಸರ್ಕಾರಕ್ಕೆ ಹೊಸ ಹುಮ್ಮಸ್ಸು ಮತ್ತು ಚೈತನ್ಯ ತುಂಬಲು ಮಂತ್ರಿಮಂಡಲ ವಿಸ್ತರಣೆ ಮತ್ತು ಪುನರ್‌ರಚನೆ ಅಗತ್ಯ ಎನ್ನಿಸಿದರೆ ಅದನ್ನು ಶೀಘ್ರ ಮಾಡಿ ಮುಗಿಸಬೇಕು. ಅದೇ ದೊಡ್ಡ ಸರ್ಕಸ್‌ ಎನ್ನುವಂತೆ ವಾರಗಟ್ಟಲೆ ಲಂಬಿಸಿ ಜನರ ತಾಳ್ಮೆಯನ್ನು ಪರೀಕ್ಷಿಸುವುದು ಸರಿಯಲ್ಲ. ಲೋಕಸಭಾ ಚುನಾವಣೆಯ ಫಲಿತಾಂಶ ನೀಡಿರುವ ಸ್ಪಷ್ಟ ಎಚ್ಚರಿಕೆಯನ್ನು ಜೆಡಿಎಸ್‌– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಈಗಲಾದರೂ ಅರ್ಥ ಮಾಡಿಕೊಳ್ಳಲಿ. ‘ಸರ್ಕಾರ ಇರುವುದು ಶಾಸಕರ ಸಲುವಾಗಿ ಅಲ್ಲ, ಜನರ ಸಲುವಾಗಿ’ ಎನ್ನುವ ಸತ್ಯವನ್ನು ಅರಿತುಕೊಳ್ಳದಿದ್ದರೆ ಉಭಯಪಕ್ಷಗಳೂ ಪಶ್ಚಾತ್ತಾಪ ಪಡಬೇಕಾದ ಪರಿಸ್ಥಿತಿ ಬರಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.