ಸಂಪಾದಕೀಯ | ಲಾಕ್‌ಡೌನ್‌ ತೆರವಿನ ನಿರಾಳ, ಜನರ ಜವಾಬ್ದಾರಿ ಹೆಚ್ಚಳ ಕೊರೊನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂದರ್ಭದಲ್ಲೇ ದೇಶದೆಲ್ಲೆಡೆ ‘ಅನ್‌ಲಾಕ್‌– 4’ ಪ್ರಕ್ರಿಯೆ ಜಾರಿಗೆ ಬಂದಿದೆ. ಐದು ತಿಂಗಳುಗಳಿಂದ ವ್ಯವಹಾರ ಸ್ಥಗಿತಗೊಳಿಸಿದ್ದ ಕ್ಲಬ್‌, ಬಾರ್‌ ಮತ್ತು ಪಬ್‌ಗಳು ಇಂದಿನಿಂದ ಕಾರ್ಯನಿರ್ವಹಿಸಲು ಸರ್ಕಾರ ಹಸಿರು ನಿಶಾನೆ ತೋರಿದೆ. ಸೆಪ್ಟೆಂಬರ್‌ ಎರಡನೇ ವಾರದಿಂದ ಮೆಟ್ರೊ ರೈಲು ಓಡಾಟ ಆರಂಭಗೊಳ್ಳಲಿದೆ. ನೂರು ಜನ ಮೀರದಂತೆ ಭಾಗವಹಿಸಬಹುದಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವುದಕ್ಕೂ ಅನುಮತಿ ದೊರೆತಿದೆ. ಸೆ. 21ರಿಂದ ಮದುವೆ, ಅಂತ್ಯಕ್ರಿಯೆಗೆ ಸಂಬಂಧಿಸಿದ ನಿರ್ಬಂಧಗಳನ್ನು ಸಡಿಲಿಸಿರುವ ಸರ್ಕಾರ, ಬಯಲು ರಂಗಮಂದಿರ ಬಾಗಿಲು ತೆರೆಯಲು ಅವಕಾಶ ಕಲ್ಪಿಸಿದೆ. ನಾಲ್ಕನೇ ಹಂತದ ಲಾಕ್‌ಡೌನ್‌ ತೆರವು ಪ್ರಕ್ರಿಯೆಯಿಂದಾಗಿ ಸಾರ್ವಜನಿಕ ಚಟುವಟಿಕೆಗಳು ಎಂದಿನ ಲಯಕ್ಕೆ ಮರಳಲು ಸರ್ಕಾರ ಅವಕಾಶ ನೀಡಿದೆ. ಕೊರೊನಾ ಪ್ರಕರಣಗಳು ತಹಬಂದಿಗೆ ಬಾರದಿದ್ದರೂ ಲಾಕ್‌ಡೌನ್‌ ನಿರ್ಬಂಧಗಳನ್ನು ಸಡಿಲಿಸುವುದು ಸರ್ಕಾರಕ್ಕೆ ಅನಿವಾರ್ಯವಾಗಿತ್ತು. ಅಬಕಾರಿ ಚಟುವಟಿಕೆಗಳನ್ನು ನಿರ್ಬಂಧಿಸುವುದೆಂದರೆ, ಸರ್ಕಾರ ತನ್ನ ವರಮಾನ ಮೂಲಗಳಿಗೆ ತಾನೇ ಬೀಗ ಹಾಕಿಕೊಳ್ಳುವುದೆಂದರ್ಥ. ಐದು ತಿಂಗಳ ಕಾಲ ಬಾರ್‌, ಕ್ಲಬ್‌ ಹಾಗೂ ಪಬ್‌ಗಳನ್ನು ಮುಚ್ಚುವ ಮೂಲಕ ಸರ್ಕಾರದ ವರಮಾನಕ್ಕೆ ಭಾರಿ ಪೆಟ್ಟುಬಿದ್ದಿತ್ತು. ಆ ಉದ್ಯಮಗಳಲ್ಲಿ ತೊಡಗಿಕೊಂಡಿದ್ದವರು ಕೂಡ ಆರ್ಥಿಕ ಹಿಂಜರಿತ ಅನುಭವಿಸಿದ್ದರು. ನಿರ್ಬಂಧಗಳು ಸಡಿಲಗೊಳ್ಳುವ ಮೂಲಕ ಅಬಕಾರಿ ಇಲಾಖೆಯ ನಿಯಂತ್ರಣಕ್ಕೆ ಒಳಪಟ್ಟಿರುವ ಉದ್ಯಮಗಳು ಮತ್ತೆ ತಮ್ಮ ಚಟುವಟಿಕೆ ಆರಂಭಿಸಲಿವೆ. ಆದರೆ, ಸರ್ಕಾರದ ಮಾರ್ಗಸೂಚಿಯ ಮೇರೆಗೇ ಈ ಉದ್ಯಮಗಳು ಕಾರ್ಯನಿರ್ವಹಿಸಬೇಕಾಗಿದೆ.ಮದ್ಯಸೇವನೆಗೆ ಅವಕಾಶ ಕಲ್ಪಿಸುವುದರ ಜೊತೆಗೆ ಗ್ರಾಹಕರ ಹಿತಾಸಕ್ತಿಯ ಬಗೆಗೂ ಸರ್ಕಾರ ಎಚ್ಚರಿಕೆ ವಹಿಸಿದೆ. ಮದ್ಯ ಸರಬರಾಜು ನಡೆಯುವ ಸ್ಥಳಗಳಲ್ಲಿ ಸುರಕ್ಷತಾ ಮುನ್ನೆಚ್ಚರಿಕೆಗಳ ಜೊತೆಗೆ ಗ್ರಾಹಕರ ನಡುವೆ ಅಂತರವನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ. ‘ಅನ್‌ಲಾಕ್‌– 4’ ಪ್ರಕ್ರಿಯೆಯೊಂದಿಗೆ ಸಾರ್ವಜನಿಕ ಕ್ಷೇತ್ರದ ಬಹುತೇಕ ವಿಭಾಗಗಳು ಕಾರ್ಯಾರಂಭ ಮಾಡಿದಂತಾಗಿದೆ. ಶಾಲಾ ಕಾಲೇಜುಗಳು, ಮನರಂಜನಾ ಪಾರ್ಕ್‌ಗಳು, ಸಾರ್ವಜನಿಕ ಈಜುಕೊಳಗಳು ಹಾಗೂ ಚಿತ್ರಮಂದಿರಗಳು ಕಾರ್ಯಾರಂಭ ಮಾಡುವ ದಿನಾಂಕ ಅಸ್ಪಷ್ಟವಾಗಿದ್ದರೂ ಜನಸಾಮಾನ್ಯರ ಬದುಕಿನ ಮೇಲೆ ಪ್ರಭಾವ ಬೀರುವ ಉದ್ಯಮಗಳು ಚಟುವಟಿಕೆ ಆರಂಭಿಸಿರುವುದು ಆರ್ಥಿಕ ಕ್ಷೇತ್ರದ ಚೇತರಿಕೆಯ ದೃಷ್ಟಿಯಿಂದ ಸ್ವಾಗತಾರ್ಹ. ಸೋಂಕಿನ ಭೀತಿಯ ಜೊತೆಗೇ ಬದುಕುವುದನ್ನು ಅಭ್ಯಾಸ ಮಾಡಿಕೊಳ್ಳುವುದು ಈಗ ಅನಿವಾರ್ಯ. ನಿರ್ಬಂಧಗಳನ್ನು ಸಡಿಲಿಸುವ ಮೂಲಕ ಕೊರೊನಾ ಸೋಂಕನ್ನು ನಿಯಂತ್ರಿಸುವ ಹೆಚ್ಚಿನ ಹೊಣೆಗಾರಿಕೆಯನ್ನು ಸರ್ಕಾರ ಸಾರ್ವಜನಿಕರ ಹೆಗಲಿಗೆ ವರ್ಗಾಯಿಸಿದೆ. ಈಗ ಹಿಂದೆಂದಿಗಿಂತಲೂ ಹೆಚ್ಚು ಎಚ್ಚರಿಕೆ ಹಾಗೂ ಕಾಳಜಿಯಿಂದ ಜನಸಾಮಾನ್ಯರು ತಮ್ಮ ಆರೋಗ್ಯದ ರಕ್ಷಣೆಯನ್ನು ತಾವು ಮಾಡಿಕೊಳ್ಳಬೇಕಾಗಿದೆ. ಸರ್ಕಾರದ ನಿರ್ಬಂಧಗಳು ಸಡಿಲಗೊಂಡಿರುವ ಸಂದರ್ಭದಲ್ಲಿ ಸ್ವಯಂ ನಿರ್ಬಂಧಗಳನ್ನು ವಿಧಿಸಿಕೊಳ್ಳಬೇಕಾಗಿದೆ. ಅಗತ್ಯವಿಲ್ಲದಿದ್ದ ಸಂದರ್ಭಗಳಲ್ಲಿ ಮನೆಯೊಳಗೇ ಉಳಿಯಬೇಕಿದೆ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಂದ ಆದಷ್ಟೂ ದೂರ ಇರಬೇಕಾಗಿದೆ. ಮನೆಯಲ್ಲಿನ ಮಕ್ಕಳು ಹಾಗೂ ಹಿರಿಯ ನಾಗರಿಕರ ಆರೋಗ್ಯ ಕಾಳಜಿಯ ಬಗ್ಗೆಯೂ ಹೆಚ್ಚಿನ ಜಾಗರೂಕತೆ ಅಗತ್ಯ. ಮನೆಯಿಂದ ಹೊರಗೆ ಹೋಗುವುದು ಅನಿವಾರ್ಯವಾದಾಗ, ಭೌತಿಕ ಅಂತರವನ್ನು ಕಾಪಾಡಿಕೊಳ್ಳುವುದರ ಬಗ್ಗೆ ಎಚ್ಚರ ವಹಿಸಬೇಕು. ನಿರ್ಬಂಧಗಳನ್ನು ಸಡಿಲಿಸಿರುವ ಸರ್ಕಾರ, ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸವಲತ್ತುಗಳನ್ನು ದೊರಕಿಸಿಕೊಡುವ ಬಗ್ಗೆ ಗಮನಹರಿಸಬೇಕು. ಕೋವಿಡ್‌ ಸೇವೆಗಳಲ್ಲಿ ತೊಡಗಿಕೊಂಡ ವೈದ್ಯಕೀಯ ಕ್ಷೇತ್ರದವರಿಗೆ ಹಾಗೂ ಇತರೆ ವಿಭಾಗಗಳ ಸಿಬ್ಬಂದಿಗೆ ಎಲ್ಲ ಅಗತ್ಯ ಸವಲತ್ತು–ಗೌರವ ದೊರೆಯುವಂತೆ ನೋಡಿಕೊಳ್ಳಬೇಕು. ಕೋವಿಡ್‌–19 ಸಮಸ್ಯೆಯನ್ನು ನಿಯಂತ್ರಿಸಲಿಕ್ಕೆ ಔಷಧಿಗಿಂತಲೂ ಸಂಕಲ್ಪಶಕ್ತಿಯೇ ಹೆಚ್ಚು ಪರಿಣಾಮಕಾರಿ ಎನ್ನುವುದನ್ನು ಸರ್ಕಾರ ಹಾಗೂ ಸಮುದಾಯ ಒಟ್ಟಾಗಿ ಸಾಬೀತುಪಡಿಸಬೇಕಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.