ಸಂಪಾದಕೀಯ | ನಗರ ಸ್ಥಳೀಯ ಸಂಸ್ಥೆ: ಮೀಸಲಾತಿ ದುರ್ಬಳಕೆಯು ಅಭಿವೃದ್ಧಿಗೆ ಮಾರಕ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೂ ಮೀಸಲಾತಿ ನಿಗದಿಯಲ್ಲಿ ಆಡಳಿತಾರೂಢರ ‘ಕೈಚಳಕ’ಕ್ಕೂ ನಿಕಟ ನಂಟು. ಯಾವುದೇ ಸ್ಥಳೀಯ ಸಂಸ್ಥೆಗೆ ಚುನಾವಣೆ ನಡೆದರೂ ವಾರ್ಡ್‌, ಕ್ಷೇತ್ರವಾರು ಮೀಸಲಾತಿ ನಿಗದಿಯ ಹಂತದಿಂದಲೇ ವಿವಾದಗಳು ಉದ್ಭವಿಸಿ, ವ್ಯಾಜ್ಯಗಳು ಕೋರ್ಟ್‌ ಮೆಟ್ಟಿಲೇರುವುದು ಮಾಮೂಲು ಎಂಬ ಸ್ಥಿತಿ ಬಹಳ ಹಿಂದಿನಿಂದಲೂ ಇದೆ. ಈ ಕಾರಣಕ್ಕಾಗಿಯೇ ಬಹುತೇಕ ಸಂದರ್ಭಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ವಿಳಂಬವಾಗಿ ನಡೆದಿವೆ. ರಾಜ್ಯದ 59 ನಗರಸಭೆಗಳು, 117 ಪುರಸಭೆಗಳು ಮತ್ತು 100 ಪಟ್ಟಣ ಪಂಚಾಯಿತಿಗಳ ಸದಸ್ಯರ ಆಯ್ಕೆಗೆ ಚುನಾವಣೆ ನಡೆದು ಎರಡು ವರ್ಷ ಸಮೀಪಿಸಿದರೂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಮಾತ್ರ ಆಗಿಲ್ಲ. ಮೀಸಲಾತಿ ನಿಗದಿ ವಿಚಾರದಲ್ಲಿ ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಈ ಮೂರೂ ಪಕ್ಷಗಳು ನಡೆಸಿದ ರಾಜಕೀಯ ಕಸರತ್ತುಗಳು ಈ ವಿಳಂಬಕ್ಕೆ ಕಾರಣ ಎಂಬುದು ಜಗಜ್ಜಾಹೀರಾಗಿರುವ ಸತ್ಯ. ಹೈಕೋರ್ಟ್‌ ಮಧ್ಯಪ್ರವೇಶದ ಬಳಿಕ ಈ 276 ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆರಾಜ್ಯ ಸರ್ಕಾರವು ಮೀಸಲಾತಿ ನಿಗದಿಗೊಳಿಸಿದೆ. ಬಿಜೆಪಿ ನೇತೃತ್ವದ ಸರ್ಕಾರ ಹೊಸದಾಗಿ ಮಾರ್ಗಸೂಚಿ ರಚಿಸಿ, ಅದರನ್ವಯ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪಟ್ಟಿಯನ್ನು ಅಂತಿಮಗೊಳಿಸಿದೆ. ರಾಜ್ಯದ ಹಲವು ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಿಚ್ಚಳ ಬಹುಮತ ಹೊಂದಿರುವ ರಾಜಕೀಯ ಪಕ್ಷಗಳು ಈ ಪಟ್ಟಿಯಿಂದಾಗಿ ಅಧಿಕಾರದ ಗದ್ದುಗೆಯಿಂದ ದೂರ ಉಳಿಯಬೇಕಾದ ಸ್ಥಿತಿ ಒದಗಿದೆ. ಆಡಳಿತಾರೂಢ ಬಿಜೆಪಿ ಹಲವು ಕಡೆ ಬಹುಮತ ಇಲ್ಲದೆಯೂ ‘ಮೀಸಲಾತಿ ಏಣಿ’ಯ ನೆರವಿನಿಂದ ಅಧಿಕಾರ ಪಡೆಯಲಿದೆ. ‘ಮೀಸಲಾತಿ ನಿಗದಿಯಲ್ಲಿ ರಾಜಕೀಯ ಹಸ್ತಕ್ಷೇಪ ನಡೆದಿಲ್ಲ, ಹೈಕೋರ್ಟ್‌ ನಿರ್ದೇಶನದಂತೆ ರೋಸ್ಟರ್‌ ಪಾಲಿಸಲಾಗಿದೆ’ ಎಂದು ರಾಜ್ಯ ಸರ್ಕಾರ ಸಮರ್ಥಿಸಿಕೊಳ್ಳಲು ಯತ್ನಿಸುತ್ತಿದೆ. ಆದರೆ, ಆಡಳಿತ ಪಕ್ಷದ ಸಚಿವರು, ಶಾಸಕರು ಮತ್ತು ‘ಪ್ರಭಾವಿ’ಗಳ ಅನುಕೂಲಕ್ಕೆ ತಕ್ಕಂತೆ ಮೀಸಲಾತಿ ನಿಗದಿ ಮಾಡಲಾಗಿದೆ ಎಂಬ ಆರೋಪದಲ್ಲಿ ಹುರುಳಿಲ್ಲದೇ ಇಲ್ಲ. ಈ ಪ್ರಕ್ರಿಯೆಯಲ್ಲಿ ಅಧಿಕಾರದಾಹ, ಪಕ್ಷ ರಾಜಕಾರಣದ ಮೇಲಾಟ, ರಾಜಕೀಯ ಹಗೆತನ, ಸ್ವಹಿತಾಸಕ್ತಿಗಳು ಕೆಲಸ ಮಾಡಿವೆ ಎಂಬ ಆರೋಪವು ವಿರೋಧ ಪಕ್ಷದವರಿಂದ ಮಾತ್ರವಲ್ಲದೆ, ಆಡಳಿತ ಪಕ್ಷದ ಕೆಲವು ಶಾಸಕರಿಂದಲೂ ಕೇಳಿಬಂದಿದೆ. ಅಧಿಕಾರದ ಗದ್ದುಗೆ ಏರಲು ಆಡಳಿತ ಪಕ್ಷವು ವಾಮಮಾರ್ಗ ಹಿಡಿದಿದೆ ಎಂಬ ಆರೋಪಕ್ಕೆ ಇದು ಬಲ ತುಂಬಿದೆ. ಸ್ಥಳೀಯ ಸಂಸ್ಥೆಗಳು ಸಾಂವಿಧಾನಿಕ ಮಾನ್ಯತೆಯನ್ನು ಹೊಂದಿರುವ ಸ್ಥಳೀಯ ಸರ್ಕಾರಗಳು. ಜನರ ಸಮಸ್ಯೆಗಳು, ಮೂಲಸೌಕರ್ಯ ಅಭಿವೃದ್ಧಿಯ ವಿಚಾರಗಳಿಗೆ ತುರ್ತು ಸ್ಪಂದನೆಗಾಗಿಯೇ ಸ್ಥಳೀಯ ಸಂಸ್ಥೆಗಳನ್ನು ಅಸ್ತಿತ್ವಕ್ಕೆ ತರಲಾಗಿದೆ. ಅಲ್ಲಿ ಬಹುಮತದ ಕೊರತೆಯಿದ್ದರೂ ರಾಜಕೀಯ ಹಸ್ತಕ್ಷೇಪ ನಡೆಸಿ, ಮೀಸಲಾತಿ ದುರ್ಬಳಕೆ ಮಾಡಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯುವುದು ಅಪಾಯಕಾರಿ ನಡೆ. ಮೀಸಲಾತಿಯು ಸಮಾಜದಲ್ಲಿ ಹಿಂದುಳಿದವರು ಮತ್ತು ಅವಕಾಶವಂಚಿತ ಜನರಿಗೆ ಪ್ರಾತಿನಿಧ್ಯ ಕಲ್ಪಿಸುವುದಕ್ಕಾಗಿ ಇರುವ ವ್ಯವಸ್ಥೆ. ಅದನ್ನು ಅಧಿಕಾರದಾಹ ಮತ್ತು ಪಕ್ಷ ರಾಜಕಾರಣದ ಅನುಕೂಲಕ್ಕೆ ದುರ್ಬಳಕೆ ಮಾಡಿಕೊಳ್ಳುವುದು ಸಲ್ಲದು. ಬಹುಮತ ಇದ್ದ ಪಕ್ಷವನ್ನು ಅಧಿಕಾರದ ಗದ್ದುಗೆಯಿಂದ ದೂರವಿಡುವ ಪ್ರಯತ್ನ ಸ್ಥಳೀಯ ಸಂಸ್ಥೆಗಳ ಆಡಳಿತ ವ್ಯವಸ್ಥೆಯೇ ಬುಡಮೇಲಾಗಲು ನಾಂದಿಯಾಗುತ್ತದೆ. ಬಹುಮತದ ಗುಂಪಿನ ಅಸಹಕಾರ ಮತ್ತು ವಿರೋಧದ ಕಾರಣದಿಂದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗದ ಸ್ಥಿತಿ ಉದ್ಭವಿಸುವ ಸಾಧ್ಯತೆಯೇ ಹೆಚ್ಚು. ಇನ್ನೊಂದೆಡೆ, ಬಹುಮತವಿರುವ ಪಕ್ಷವನ್ನು ಅಧಿಕಾರದಿಂದ ದೂರವಿಡುವ ಪ್ರಯತ್ನವು ಮೀಸಲಾತಿ ವಿವಾದ ಪುನಃ ನ್ಯಾಯಾಲಯದ ಮೆಟ್ಟಿಲೇರಲು ಕಾರಣವಾಗಬಹುದು. ಇದರಿಂದ ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಆಡಳಿತ ಇಲ್ಲದಿರುವ ಸ್ಥಿತಿ ಮುಂದುವರಿದು, ಚುನಾವಣೆ ನಡೆಸಿದ ಉದ್ದೇಶವೇ ವಿಫಲವಾಗುತ್ತದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯ ವಿಚಾರದಲ್ಲಿ ಯಾವ ವಿವಾದವೂ ಇಲ್ಲದೆ, ರೋಸ್ಟರ್‌ ಪುನರಾವರ್ತನೆಯಾಗದಂತೆ ಮೀಸಲಾತಿ ನಿಗದಿಪಡಿಸಲು ಶಾಶ್ವತವಾದ ವ್ಯವಸ್ಥೆಯೊಂದನ್ನು ರೂಪಿಸಿದರೆ ಮಾತ್ರವೇ ಈ ಸಮಸ್ಯೆಗೆ ಪರಿಹಾರ ಸಾಧ್ಯ. ಆ ದಿಕ್ಕಿನಲ್ಲಿ ರಾಜ್ಯ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಈಗ ಆಗಿರುವ ಲೋಪಗಳನ್ನೂ ಸರಿಪಡಿಸಿಕೊಂಡು ಶಾಶ್ವತವಾದ ಪರಿಹಾರ ಹುಡುಕಬೇಕಾದ ಗುರುತರ ಹೊಣೆಗಾರಿಕೆ ಸರ್ಕಾರದ ಮೇಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.