ಬಿಹಾರದಲ್ಲಿ ಉಚಿತ ವಿದ್ಯುತ್ ಇಲ್ಲ: ಸಿಎಂ ನಿತೀಶ್ ಕುಮಾರ್ ಪಟ್ನಾ: ರಾಜ್ಯದಲ್ಲಿ ಈಗಾಗಲೇ ಕಡಿಮೆ ದರದಲ್ಲಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದ್ದು, ಉಚಿತ ವಿದ್ಯುತ್ ನೀಡುವುದಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಶುಕ್ರವಾರ ವಿಧಾನಸಭೆಯಲ್ಲಿ ಹೇಳಿದರು. ಬಜೆಟ್ ಅಧಿವೇಶನದಲ್ಲಿ ಮಾತನಾಡಿದ ಅವರು, ಬಿಹಾರದಲ್ಲಿ ಉಚಿತ ವಿದ್ಯುತ್ ನೀಡುವುದಾಗಿ ಹೇಳಿಯೇ ಇಲ್ಲ ಎಂದರು. ‘ಉಚಿತ ವಿದ್ಯುತ್ ನೀಡುವುದಿಲ್ಲ ಎಂದು ನಾನು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೇನೆ. ನಾವು ಅತ್ಯಂತ ಕಡಿಮೆ ದರದಲ್ಲಿ ವಿದ್ಯುತ್‌ ಒದಗಿಸುತ್ತೇವೆ. ಇದರಿಂದ ಅದು ಸುರಕ್ಷಿತವಾಗಿ ಉಳಿಯುತ್ತದೆ. ಉಚಿತ ವಿದ್ಯುತ್‌ ನೀಡುವುದಾಗಿ ಕೆಲವು ರಾಜ್ಯಗಳು ಘೋಷಿಸಿವೆ. ಆದರೆ ನಾವು ಆ ಬಗ್ಗೆ ಹೇಳಿಯೇ ಇಲ್ಲ. ಎಲ್ಲರ ಸುರಕ್ಷತೆಗಾಗಿ ಉಚಿತ ವಿದ್ಯುತ್ ಇಲ್ಲ ಎಂದು ನಾವು ಚುನಾವಣೆ ವೇಳೆಯೂ ಹೇಳಿದ್ದೆವು’ ಎಂದು ಹೇಳಿದರು. ಇದಕ್ಕೂ ಮುನ್ನ ಮಾತನಾಡಿದ್ದ ಇಂಧನ ಸಚಿವ ಬಿಜೇಂದ್ರ ಪ್ರಸಾದ್ ಯಾದವ್‌, ‘ಬೇರೆ ರಾಜ್ಯಗಳಿಗಿಂತ ಬಿಹಾರದಲ್ಲಿ ವಿದ್ಯುತ್ ದರ ಜಾಸ್ತಿ ಇದ್ದರೆ, ಖಂಡಿತವಾಗಿಯೂ ಅದನ್ನು ಇಳಿಕೆ ಮಾಡುತ್ತೇವೆ. ಉಚಿತ ವಿದ್ಯುತ್ ಎಷ್ಟು ದಿನ ಇರಲಿದೆ? ಹಣ ಎಲ್ಲಿಂದ ಬರುತ್ತದೆ? ನಾವು ಈಗಾಗಲೇ ₹14 ಸಾವಿರ ಕೋಟಿ ಸಬ್ಸಿಡಿ ನೀಡುತ್ತಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ ಇದು ಹೆಚ್ಚಿದೆ. ಇದಕ್ಕಿಂತ ಬೇರೆ ಇನ್ನೇನು ಬೇಕು?’ ಎಂದು ಪ್ರಶ್ನಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.