: ಕಾಂಗ್ರೆಸ್‌ಗೆ ಮತ್ತೊಂದು ಹಿನ್ನಡೆ, ಬಿಜೆಪಿ ಸೇರಿದ ಮಾಳವೀಯ ಜೈಪುರ: ರಾಜಸ್ಥಾನದ ಮಾಜಿ ಸಚಿವ, ಕಾಂಗ್ರೆಸ್‌ ನಾಯಕ ಮಹೇಂದ್ರಜೀತ್ ಸಿಂಗ್ ಮಾಳವೀಯ ಅವರು ಇಂದು (ಸೋಮವಾರ) ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇದರಿಂದಾಗಿ ಲೋಕಸಭೆ ಚುನಾವಣೆಗೆ ಕೆಲವೇ ದಿನಗಳ ಬಾಕಿ ಇರುವಾಗಲೇ ನಾಯಕರ ಪಕ್ಷಾಂತರ ಪರ್ವ ಶುರುವಾಗಿದ್ದು, ಕಾಂಗ್ರೆಸ್‌ಗೆ ತುಸು ಹಿನ್ನಡೆಯಾಗಿದೆ. ಮಹೇಂದ್ರಜೀತ್ ಸಿಂಗ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಸ್ಥಾನ ಬಿಜೆಪಿ ಘಟಕದ ಅಧ್ಯಕ್ಷ ಸಿ.ಪಿ. ಜೋಶಿ, ‘ಪ್ರಧಾನಿ ಮೋದಿಯವರ ನಾಯಕತ್ವದಿಂದ ಪ್ರಭಾವಿತರಾಗಿರುವ ಬುಡಕಟ್ಟು ಜನಾಂಗದ ಪ್ರಮುಖ ನಾಯಕ ಮಹೇಂದ್ರಜೀತ್ ಸಿಂಗ್ ಮಾಳವೀಯ ಅವರು ಇಂದು ಬಿಜೆಪಿಗೆ ಸೇರ್ಪಡೆಯಾಗಿರುವುದು ಸಂತಸ ತಂದಿದೆ’ ಎಂದು ಹೇಳಿದ್ದಾರೆ. ‘ಮೋದಿಯವರ ಅಧಿಕಾರವಧಿಯಲ್ಲಿ ಬುಡಕಟ್ಟು ಪ್ರದೇಶಗಳಲ್ಲಿ ಮಹತ್ವದ ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂದು ಮಾಳವೀಯ ಅವರೇ ಹೇಳಿದ್ದಾರೆ. ಆದಿವಾಸಿ ಮಹಿಳೆಯೊಬ್ಬರು (ದ್ರೌಪದಿ ಮುರ್ಮು) ದೇಶದ ರಾಷ್ಟ್ರಪತಿಯಾಗುವ ಐತಿಹಾಸಿಕ ಸಾಧನೆಯನ್ನೂ ಅವರು ಗಮನಿಸಿದ್ದಾರೆ’ ಎಂದು ಜೋಶಿ ತಿಳಿಸಿದ್ದಾರೆ. ಇದೇ ವೇಳೆ ಮಾತನಾಡಿದ ಮಹೇಂದ್ರಜೀತ್ ಸಿಂಗ್ ಮಾಳವೀಯ, ‘ದೇಶದಾದ್ಯಂತ ಕಾಂಗ್ರೆಸ್‌ನ ದುಸ್ಥಿತಿಯನ್ನು ನೀವು ನೋಡಬಹುದು. ಆಯ್ದ ಕೆಲವು ನಾಯಕರಿಂದ ಪಕ್ಷಕ್ಕೆ ಹೆಚ್ಚು ನಷ್ಟವಾಗುತ್ತಿದೆ. ಈ ಹಿಂದೆ ಕಾಂಗ್ರೆಸ್‌ ಎಂದರೆ ದೇಶಕ್ಕಾಗಿ ಮತ್ತು ಜನರಿಗಾಗಿ ಇರುವ ಪಕ್ಷ ಎಂಬ ಮಾತಿತ್ತು. ಈಗ ಅದು ಬದಲಾಗಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಗೆ ಸೇರ್ಪಡೆಯಾಗುವ ಮೂಲಕ ಮಾಳವೀಯ ಅವರು ಕಾಂಗ್ರೆಸ್ ಪಕ್ಷದ ಜೊತೆಗಿನ ಮೂರು ದಶಕದ ಸಂಬಂಧವನ್ನು ಕಡಿದುಕೊಂಡಿದ್ದಾರೆ. ಲೋಕಸಭೆ ಚುನಾವಣೆಗೂ ಮೊದಲು ಪಕ್ಷದ ಪ್ರಮುಖ ನಾಯಕರನ್ನು ಸೆಳೆಯಬಹುದು ಎಂಬ ಆತಂಕ ಕಾಂಗ್ರೆಸ್‌ ಅನ್ನು ಕಾಡುತ್ತಿರುವ ಹೊತ್ತಿನಲ್ಲಿಯೇ ಈ ಬೆಳವಣಿಗೆ ನಡೆದಿದೆ. ಮಾಳವೀಯ ಅವರು ಬನ್ಸ್ವಾರಾದ ಬಾಗಿದೌರಾ ಕ್ಷೇತ್ರದ ಶಾಸಕ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ. ಇದರೊಂದಿಗೆ 200 ಸದಸ್ಯ ಬಲದ ರಾಜ್ಯದ ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಬಲ 69 ಸ್ಥಾನಗಳಿಗೆ ಕುಸಿಯಿತು. ಬಿಜೆಪಿ ಒಟ್ಟು 115 ಸದಸ್ಯರನ್ನು ಹೊಂದಿದೆ. ಮಾಳವೀಯ ಅವರು ಕಾಂಗ್ರೆಸ್‌ ಕಾರ್ಯಕಾರಣಿ ಸಮಿತಿ ಸದಸ್ಯರೂ ಆಗಿದ್ದರು. ನಾಲ್ಕು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.