ಉ.ಪ್ರದೇಶ | ನ್ಯಾಯ ಯಾತ್ರೆಗೆ ‘ಇಂಡಿಯಾ’ ಬಣದ ನಾಯಕರಿಗೆ ಆಹ್ವಾನ; ಕಾಂಗ್ರೆಸ್ ನವದೆಹಲಿ: ಉತ್ತರ ಪ್ರದೇಶದಲ್ಲಿ ಕೈಗೊಳ್ಳುವ ಭಾರತ ಜೋಡೊ ನ್ಯಾಯ ಯಾತ್ರೆಗೆ ಕಾಂಗ್ರೆಸ್‌ ಆಹ್ವಾನ ನೀಡಿಲ್ಲ ಎಂಬ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಅವರ ಹೇಳಿಕೆಗೆ ಉತ್ತರಿಸಿರುವ ಕಾಂಗ್ರೆಸ್‌, ದಿನಾಂಕ ಖಚಿತಪಡಿಸಿಕೊಂಡು ‘ಇಂಡಿಯಾ’ ಮೈತ್ರಿಕೂಟದ ಭಾಗವಾಗಿರುವ ಪಕ್ಷಗಳಿಗೆ ಆಹ್ವಾನ ನೀಡಲಾಗುವುದು ಎಂದಿದೆ. ಭಾರತ ಜೋಡೊ ನ್ಯಾಯ ಯಾತ್ರೆಯಲ್ಲಿ ಭಾಗವಹಿಸುತ್ತೀರಾ? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅಖಿಲೇಶ್‌, ಸಮಸ್ಯೆಯೆಂದರೆ ಈವರೆಗೂ ನಮಗೆ ಆಹ್ವಾನ ಬಂದಿಲ್ಲ ಎಂದಿದ್ದರು. ಕಾಂಗ್ರೆಸ್‌ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಅಖಿಲೇಶ್‌ ಯಾದವ್‌ ಹೇಳಿಕೆಯ ವಿಡಿಯೊವನ್ನು ಪೋಸ್ಟ್‌ ಮಾಡಿ, ‘ಇಂಡಿಯಾ’ ಮೈತ್ರಿಕೂಟದ ಭಾಗವಾಗಿರುವ ಪಕ್ಷಗಳಿಗೆ ಆಹ್ವಾನ ನೀಡಲಾಗುವುದು ಹಾಗೂ ಅವರ ಉಪಸ್ಥಿತಿಯು ಮೈತ್ರಿಯನ್ನು ಮತ್ತಷ್ಟು ಬಲಪಡಿಸಲು ಅನುಕೂಲವಾಗುತ್ತದೆ ಎಂದರು. ಫೆಬ್ರುವರಿ 16ರಂದು ಭಾರತ ಜೋಡೊ ನ್ಯಾಯ ಯಾತ್ರೆಯು ಉತ್ತರ ಪ್ರದೇಶವನ್ನು ಪ್ರವೇಶಿಸುವ ನಿರೀಕ್ಷೆ ಇದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಲೋಕಸಭಾ ಚುನಾವಣೆ ಸಂಬಂಧ ಪಶ್ಚಿಮ ಬಂಗಾಳದಲ್ಲಿ ಸೀಟು ಹಂಚಿಕೆ ವಿಚಾರದಲ್ಲಿ ವೈಮನಸ್ಸು ಮೂಡಿದ್ದರಿಂದ ಟಿಎಂಸಿ ವರಿಷ್ಠೆ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭಾರತ ಜೋಡೊ ನ್ಯಾಯ ಯಾತ್ರೆಯಲ್ಲಿ ಪಾಲ್ಗೊಂಡಿರಲಿಲ್ಲ. ಪ್ರಸ್ತುತ ಯಾತ್ರೆಯು ಜಾರ್ಖಂಡ್‌ನಲ್ಲಿದೆ. ಜಾರ್ಖಂಡ್ ಮುಕ್ತಿ ಮೋರ್ಚಾ ನಾಯಕ ಹಾಗೂ ರಾಜ್ಯದ ನೂತನ ಮುಖ್ಯಮಂತ್ರಿ ಚಂಪೈ ಸೊರೇನ್ ಅವರು ಯಾತ್ರೆಯಲ್ಲಿ ಭಾಗವಹಿಸಿದರು. ಭಾರತ ಜೋಡೊ ನ್ಯಾಯ ಯಾತ್ರೆಯು 67 ದಿನಗಳಲ್ಲಿ 6,713 ಕಿ.ಮೀ ಕ್ರಮಿಸಲಿದ್ದು, 15 ರಾಜ್ಯಗಳ 110 ಜಿಲ್ಲೆಗಳ ಮೂಲಕ ಸಾಗಿ, ಮಾರ್ಚ್ 20 ಅಥವಾ 21ರಂದು ಮುಂಬೈನಲ್ಲಿ ಮುಕ್ತಾಯಗೊಳ್ಳಲಿದೆ. उत्तर प्रदेश में भारत जोड़ो न्याय यात्रा के विस्तृत रूट और कार्यक्रम की रूपरेखा तैयार की जा रही है। एक-दो दिन में इसे अंतिम रूप दे दिया जाएगा। इसके बाद इसे राज्य में गठबंधन के घटक दलों के साथ साझा किया जाएगा। उनका भारत जोड़ो न्याय यात्रा में भाग लेना गठबंधन को और… ://./n6iJrn6uLq ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.