ಗ್ಯಾನವಾಪಿ: ನೆಲಮಾಳಿಗೆಗಳ ಸಮೀಕ್ಷೆ– ಅರ್ಜಿ ವಿಚಾರಣೆ ಫೆ.15ಕ್ಕೆ ವಾರಾಣಸಿ: ಗ್ಯಾನವಾಪಿ ಮಸೀದಿಯಲ್ಲಿ, ಬಂದ್‌ ಮಾಡಲಾಗಿರುವ ಎಲ್ಲ ನೆಲಮಾಳಿಗೆಗಳ ಕುರಿತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ಎಎಸ್‌ಐ)ಯಿಂದ ಸಮೀಕ್ಷೆ ನಡೆಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಫೆ. 15ರಂದು ನಡೆಸುವುದಾಗಿ ಇಲ್ಲಿನ ನ್ಯಾಯಾಲಯ ಮಂಗಳವಾರ ಹೇಳಿದೆ. ‘ಅರ್ಜಿಯ ಮುಂದಿನ ವಿಚಾರಣೆಯನ್ನು ಫೆ.15ರಂದು ನಿಗದಿ ಮಾಡಿ ಹಂಗಾಮಿ ಜಿಲ್ಲಾ ನ್ಯಾಯಾಧೀಶ ಅನಿಲ್ ಕುಮಾರ್ ಆದೇಶಿಸಿದ್ದಾರೆ’ ಎಂದು ಅರ್ಜಿದಾರರ ಪರ ವಕೀಲ ಮದನಮೋಹನ್ ಯಾದವ್ ತಿಳಿಸಿದ್ದಾರೆ. ‘ನೆಲಮಾಳಿಗೆಗಳಲ್ಲಿ ರಹಸ್ಯ ಕೋಣೆಗಳಿವೆ. ಹೀಗಾಗಿ, ಗ್ಯಾನವಾಪಿ ಮಸೀದಿ ಕುರಿತಂತೆ ಸಂಪೂರ್ಣ ಸತ್ಯವು ಹೊರಬರಬೇಕಾದರೆ ಎಲ್ಲ ನೆಲಮಾಳಿಗೆಗಳ ಕುರಿತು ವೈಜ್ಞಾನಿಕ ಸಮೀಕ್ಷೆ ನಡೆಸುವುದು ಅಗತ್ಯ’ ಎಂದು ಅರ್ಜಿದಾರರಾದ ರಾಖಿ ಸಿಂಗ್‌ ಕೋರಿದ್ದಾರೆ. ರಾಖಿ ಸಿಂಗ್‌ ಅವರು ವಿಶ್ವ ವೇದಿಕ್ ಸನಾತನ ಸಂಘದ ಸಂಸ್ಥಾಪಕ ಸದಸ್ಯೆ. ಗ್ಯಾನವಾಪಿ ಮಸೀದಿ ಸಂಕೀರ್ಣ ಕುರಿತು ಎಎಸ್‌ಐ ಸಮೀಕ್ಷೆ ನಡೆಸಲು ಕಾರಣವಾದ ಶೃಂಗಾರ ಗೌರಿ ಪ್ರಕರಣದಲ್ಲಿ ರಾಖಿ ಸಿಂಗ್‌ ಕೂಡ ಕಕ್ಷಿದಾರರಲ್ಲೊಬ್ಬರಾಗಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.