ಧರಣಿಯ ಗಮನ ಬೇರೆಡೆ ಸೆಳೆಯಲು ಇ.ಡಿ ದಾಳಿ ಎಂದ ; ಆರೋಪ ತಳ್ಳಿ ಹಾಕಿದ ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಜಾರಿ ನಿರ್ದೇಶನಾಲಯದ (ಇ.ಡಿ) ಸಂಯೋಜಿತ ದಾಳಿಯು ಬಿಜೆಪಿಯ ಸೇಡಿನ ರಾಜಕಾರಣ ಮತ್ತು ರಾಜ್ಯಕ್ಕೆ ಮಂಜೂರು ಮಾಡಬೇಕಾದ ಬಾಕಿ ಹಣವನ್ನು ನೀಡುವಂತೆ ಒತ್ತಾಯಿಸಿ ತೃಣ ಮೂಲ ಕಾಂಗ್ರೆಸ್‌ (ಟಿಎಂಸಿ) ನಡೆಸುತ್ತಿರುವ ಧರಣಿಯ ಗಮನವನ್ನು ಬೇರಡೆ ಸೆಳೆಯಲು ಹತಾಶೆಯ ತಂತ್ರಗಾರಿಕೆಯಾಗಿದೆ ಎಂದು ಟಿಎಂಸಿ ಮಂಗಳವಾರ ಆರೋಪಿಸಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ() ಹಣ ದುರುಪಯೋಗವಾಗಿದೆ ಎಂಬ ಆರೋಪದಡಿ ಬಂಗಾಳದ ಕೆಲವು ಅಧಿಕಾರಿಗಳ ನಿವಾಸಗಳು ಸೇರಿದಂತೆ ಹಲವು ಸ್ಥಳಗಳಲ್ಲಿ ಏಕಕಾಲದಲ್ಲಿ ಇ.ಡಿ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ರಾಜ್ಯದಲ್ಲಿ ನಡೆಯುತ್ತಿರುವ ಧರಣೆ ಹಾಗೂ ಮಾಧ್ಯಮಗಳ ಗಮನವನ್ನು ಬೇರೆಡೆ ಸೆಳೆಯಲು ಪೂರ್ವ ನಿಯೋಜಿತ ಇ.ಡಿ ದಾಳಿಗಳನ್ನು ನಡೆಸಲಾಗುತ್ತಿದೆ. ಇದು ಸೇಡಿನ ರಾಜಕೀಯಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಟಿಎಂಸಿಯ ಹಿರಿಯ ನಾಯಕ ಶಶಿ ಪಂಜ ಹೇಳಿದ್ದಾರೆ. ಈ ನಡುವೆ ಪಶ್ಚಿಮ ಬಂಗಾಳದ ಬಿಜೆಪಿ ಈ ಆರೋಪಗಳನ್ನು ‘ಆಧಾರ ರಹಿತ‘ ಎಂದು ತಳ್ಳಿಹಾಕಿದೆ. ‘ವಾಸ್ತವವೇನೆಂದರೆ ಟಿಎಂಸಿ ಪಕ್ಷವು ಭ್ರಷ್ಟಾಚಾರದಲ್ಲಿ ಆಳವಾಗಿ ಮುಳುಗಿದೆ ಹಾಗೂ ಬಹುತೇಕ ನಾಯಕರು ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿದ್ದಾರೆ‘ ಎಂದು ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಸಾಮಿಕ್ ಭಟ್ಟಾಚಾರ್ಯ ತಿರುಗೇಟು ನೀಡಿದ್ದಾರೆ. ಕೋಲ್ಕತ್ತದ ರೆಡ್ ರೋಡ್ ಬಳಿ ಡಾ. ಬಿ.ಆರ್ ಅಂಬೇಡ್ಕರ್ ಪ್ರತಿಮೆ ಎದುರು ಟಿಎಂಸಿ ಧರಣಿ ನಡೆಸುತ್ತಿದ್ದು, ಈ ಧರಣಿಯು ಫೆಬ್ರುವರಿ 13ರವರೆಗೆ ಮುಂದುವರಿಯಲಿದೆ ಎಂದು ಟಿಎಂಸಿ ತಿಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.