ಜಮ್ಮು–ಕಾಶ್ಮೀರದ ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿ ಮೀಸಲಾತಿ: ಮಸೂದೆಗೆ ಲೋಕಸಭೆ ಅಸ್ತು ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಸ್ಥಳೀಯ ಸಂಸ್ಥೆಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ(ಒಬಿಸಿ) ಮೀಸಲಾತಿ ಒದಗಿಸುವ ಮಸೂದೆಯನ್ನು ಲೋಕಸಭೆ ಮಂಗಳವಾರ ಅಂಗೀಕರಿಸಿದೆ. 2019ರಲ್ಲಿ 370ನೇ ವಿಧಿಯಡಿ ನೀಡಲಾಗಿದ್ದ ಸ್ಥಾನಮಾನ ಹಿಂಪಡೆದ ನಂತರ ಕೇಂದ್ರಾಡಳಿತ ಪ್ರದೇಶದಲ್ಲಿ ಪ್ರಮುಖ ಬದಲಾವಣೆಗಳು ನಡೆದಿವೆ ಎಂದು ಸರ್ಕಾರ ಪ್ರತಿಪಾದಿಸಿದೆ. ಜಮ್ಮು ಮತ್ತು ಕಾಶ್ಮೀರದ ಸ್ಥಳೀಯ ಸಂಸ್ಥೆಗಳ ತಿದ್ದುಪಡಿ ಕಾಯ್ದೆ–2024ರ ಮೇಲೆ ಚುಟುಕು ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್, ‘ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳ ಫಲವನ್ನು ಜಮ್ಮು ಮತ್ತು ಕಾಶ್ಮೀರದ ಜನ ಅನುಭವಿಸುತ್ತಿದ್ದಾರೆ ’ ಎಂದು ಹೇಳಿದರು. ಜಮ್ಮು ಮತ್ತು ಕಾಶ್ಮೀರದ ಪಂಚಾಯಿತಿಗಳು ಮತ್ತು ಪುರಸಭೆಗಳಲ್ಲಿ ಒಬಿಸಿಗೆ ಮೀಸಲಾತಿ ಇಲ್ಲ. ಈ ಹೊಸ ತಿದ್ದುಪಡಿ ಮಸೂದೆಯು ಅಲ್ಲಿ ಮೀಸಲಾತಿ ಕಲ್ಪಿಸಲಿದೆ. ‘ಈ ಮೂಲಕ ಸ್ವಾತಂತ್ರ್ಯ ಬಂದು 75 ವರ್ಷಗಳ ಬಳಿಕ ಜಮ್ಮು ಮತ್ತು ಕಾಶ್ಮೀರದ ಇತರೆ ಹಿಂದುಳಿದ ವರ್ಗಗಳ ಜನರಿಗೆ ನ್ಯಾ ಸಿಕ್ಕಂತಾಗಿದೆ’ ಎಂದೂ ಅವರು ಹೇಳಿದ್ದಾರೆ. ಇದೇವೇಳೆ, ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ನೀಡುವ ಕುರಿತಂತೆ ವಿಪಕ್ಷಗಳ ಬೇಡಿಕೆಗೆ ಪ್ರತಿಕ್ರಿಯಿಸಿದ ಅವರು, ‘ಜಮ್ಮು ಮತ್ತು ಕಾಶ್ಮೀರದ ಪಂಚಾಯಿತಿಗಳು ಮತ್ತು ಪುರಸಭೆಗಳಲ್ಲಿ ಒಬಿಸಿಗೆ ಮೀಸಲಾತಿ ನೀಡುವ ಮಸೂದೆ ಮೇಲಿನ ಚರ್ಚೆ ವೇಳೆ ನಾಟಕ ಮಾಡಲು ವಿಪಕ್ಷಗಳ ಸದಸ್ಯರು ಸೇರಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು. ‘ನೀವು ಎಷ್ಟೇ ಸುತ್ತು ಹಾಕಿದರೂ ಜಮ್ಮು ಮತ್ತು ಕಾಶ್ಮೀರದಲ್ಲಿ ನಿಮಗೆ ಕೇಳಿಸುವುದು ಮೋದಿ, ಮೋದಿ ಎಂಬ ಶಬ್ಧ, ಕಾಣುವುದು ಮೋದಿ ಮಾಡಿರುವ ಅಭಿವೃದ್ಧಿ’ ಎಂದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.