ನಾಯಿಗೆ ತಿನಿಸಲು ಮಾಲೀಕನಿಗೆ ಬಿಸ್ಕೆಟ್‌ ನೀಡಿದ್ದೆ: ರಾಹುಲ್‌ ಗಾಂಧಿ ಸ್ಪಷ್ಟನೆ ಗುಮ್ಲಾ(ಜಾರ್ಖಂಡ್): ಭಾರತ ಜೋಡೊ ನ್ಯಾಯ ಯಾತ್ರೆ ವೇಳೆ, ನಾಯಿಗೆ ತಿನಿಸಲು ಅದರ ಮಾಲೀಕನಿಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಬಿಸ್ಕೆಟ್‌ ನೀಡಿದ ದೃಶ್ಯವಿರುವ ವಿಡಿಯೊ ವ್ಯಾಪಕವಾಗಿ ಹರಿದಾಡಿದೆ. ಇದರ ಬೆನ್ನಲ್ಲೇ, ರಾಹುಲ್ ಗಾಂಧಿ ಅವರು ಮಂಗಳವಾರ ಸ್ಪಷ್ಟೀಕರಣ ನೀಡಿದ್ದು, ‘ನಾನು ಬಿಸ್ಕೆಟ್‌ ತಿನಿಸಲು ಮುಂದಾದೆ. ಆದರೆ, ನಾಯಿ ತಿನ್ನಲಿಲ್ಲ. ಆಗ, ನೀವೇ ತಿನಿಸಿ ಎಂದು ಹೇಳಿ ಅದರ ಮಾಲೀಕನಿಗೆ ಬಿಸ್ಕೆಟ್‌ ನೀಡಿದೆಯಷ್ಟೆ’ ಎಂದು ಹೇಳಿದ್ದಾರೆ. ಈ ವಿಡಿಯೊ ಹಂಚಿಕೊಂಡಿದ್ದ ಬಿಜೆಪಿ ನಾಯಕರು, ‘ರಾಹುಲ್‌ ಗಾಂಧಿ ಅವರು ತಮ್ಮ ಪಕ್ಷದ ಕಾರ್ಯಕರ್ತರನ್ನು ಕೂಡ ಇದೇ ರೀತಿ ನಡೆಸಿಕೊಂಡಿದ್ದರು’ ಎಂದು ಛೇಡಿಸಿದ್ದರು. ಈ ಹಿನ್ನೆಲೆಯಲ್ಲಿ ರಾಹುಲ್‌ ಗಾಂಧಿ ಈ ಸ್ಪಷ್ಟನೆ ನೀಡಿದ್ದಾರೆ. ಇಲ್ಲಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾಯಿ ಭಯದಿಂದ ಕಂಪಿಸುತ್ತಿತ್ತು. ನಾನು ಬಿಸ್ಕೆಟ್‌ ನೀಡಲು ಹೋದಾಗ ಅದು ಮತ್ತಷ್ಟೂ ಬೆದರಿತು. ನೀವು ತಿನಿಸಿದರೆ ಅದು ತಿನ್ನಬಹುದು ಎಂದು ಹೇಳಿ ನಾನು ಅದರ ಮಾಲೀಕನಿಗೆ ಬಿಸ್ಕೆಟ್‌ ನೀಡಿದೆ. ನಂತರ, ಮಾಲೀಕ ನೀಡಿದ ಬಿಸ್ಕೆಟನ್ನು ಅದು ತಿಂದಿತು. ಇದರಲ್ಲಿ ಸಮಸ್ಯೆ ಏನಿದೆ’ ಎಂದು ಪ್ರಶ್ನಿಸಿದರು. ‘ನಾಯಿ ಬಗ್ಗೆ ಬಿಜೆಪಿ ನಾಯಕರಿಗೆ ಇರುವ ಗೀಳು ನನಗೆ ಅರ್ಥವಾಗುತ್ತಿಲ್ಲ’ ಎಂದೂ ಕುಟುಕಿದರು. ‘ಫೆಬ್ರುವರಿ 4ರಂದು ಧನಬಾದ್‌ ಜಿಲ್ಲೆಯಲ್ಲಿ ಯಾತ್ರೆ ಸಾಗುತ್ತಿದ್ದ ವೇಳೆ ಈ ವಿಡಿಯೊ ಚಿತ್ರೀಕರಣ ಮಾಡಲಾಗಿದೆ’ ಎಂದು ಕಾಂಗ್ರೆಸ್‌ ವಕ್ತಾರ ರಾಕೇಶ್ ಸಿನ್ಹ ಹೇಳಿದ್ದಾರೆ. ಈ ಘಟನೆ ಬಗ್ಗೆ ನಾಯಿ ಮಾಲೀಕ ಸಹ ಸಂತಸ ವ್ಯಕ್ತಪಡಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.