ಸ್ವಯಂಪ್ರೇರಿತ ಪ್ರಕರಣಕ್ಕೂ ಮೊದಲು ಮುಖ್ಯ ನ್ಯಾಯಮೂರ್ತಿ ಅನುಮತಿ ಬೇಕು: ಸುಪ್ರೀಂ ನವದೆಹಲಿ: ತಮಿಳುನಾಡಿನ ಕಂದಾಯ ಸಚಿವ ಕೆ.ಕೆ.ಎಸ್.ಎಸ್.ಆರ್. ರಾಮಚಂದ್ರನ್ ಮತ್ತು ಅವರ ಪತ್ನಿ ಆದಿಲಕ್ಷ್ಮಿ ಪಿ. ವಿಶಾಲಾಕ್ಷಿ ಅವರ ವಿರುದ್ಧದ ಅಕ್ರಮ ಆಸ್ತಿ ಸಂಪಾದನೆ ಆರೋಪದ ವಿಚಾರವಾಗಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳುವ ಮೊದಲು ಮದ್ರಾಸ್ ಹೈಕೋರ್ಟ್‌ನ ಏಕಸದಸ್ಯ ಪೀಠವು ಅಲ್ಲಿನ ಮುಖ್ಯ ನ್ಯಾಯಮೂರ್ತಿ ಅವರಿಂದ ಅನುಮತಿ ಪಡೆಯಬೇಕಿತ್ತು ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ. ಪ್ರಕರಣದ ವಿಚಾರಣೆಯ ದಿನಾಂಕ ಕುರಿತಾಗಿ ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರು ಹೊಸದಾಗಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರು ಇದ್ದ ವಿಭಾಗೀಯ ಪೀಠ ಸೂಚಿಸಿದೆ. ‘ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳುವ ವಿಚಾರವಾಗಿ ಮುಖ್ಯ ನ್ಯಾಯಮೂರ್ತಿ ಪರಿಶೀಲನೆ ನಡೆಸಬೇಕು. ಮುಖ್ಯ ನ್ಯಾಯಮೂರ್ತಿ ಅವರು ತಾವೇ ಪ್ರಕರಣ ಕೈಗೆತ್ತಿಕೊಳ್ಳಬಹುದು ಅಥವಾ ಬೇರೊಬ್ಬರು ನ್ಯಾಯಮೂರ್ತಿಗೆ ಅದನ್ನು ವಹಿಸಬಹುದು. ಇದಾದ ನಂತರದಲ್ಲಿ ಸತ್ಯಾಸತ್ಯೆಯನ್ನು ಆಧರಿಸಿ ಪ್ರಕರಣವು ಮುಂದುವರಿಯುತ್ತದೆ’ ಎಂದು ವಿಭಾಗೀಯ ಪೀಠ ಹೇಳಿದೆ. ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಆನಂದ್ ವೆಂಕಟೇಶ್ ಅವರು ಈ ಪ್ರಕರಣದ ವಿಚಾರಣೆಗೆ ದಿನಾಂಕ ನಿಗದಿ ಮಾಡುವ ಕೆಲಸವನ್ನು ಮುಖ್ಯ ನ್ಯಾಯಮೂರ್ತಿಯವರ ಅನುಮತಿ ಇಲ್ಲದೆ ಮಾಡಬಾರದಿತ್ತು ಎಂದು ಸುಪ್ರೀಂ ಕೋರ್ಟ್ ಹೇಳಿತು. ಮುಖ್ಯ ನ್ಯಾಯಮೂರ್ತಿ ಅವರು ನಂತರದಲ್ಲಿ ಅನುಮತಿ ನೀಡಿದ್ದಾರೆ ಎಂಬ ಮಾಹಿತಿಯನ್ನು ವಿಭಾಗೀಯ ಪೀಠಕ್ಕೆ ನೀಡಲಾಯಿತು. ಘೋಷಿತ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸಿದ ಪ್ರಕರಣದಲ್ಲಿ ರಾಮಚಂದ್ರನ್ ಅವರನ್ನು ದೋಷಮುಕ್ತಗೊಳಿಸಿ ಪ್ರಧಾನ ಸೆಷನ್ಸ್ ನ್ಯಾಯಾಲಯ ಹೊರಡಿಸಿದ್ದ ಆದೇಶವು ಕಾನೂನುಬಾಹಿರ ಎಂದು ನ್ಯಾಯಮೂರ್ತಿ ವೆಂಕಟೇಶ್ ಅವರು ಇದ್ದ ಏಕಸದಸ್ಯ ಪೀಠವು ಆಗಸ್ಟ್ 21ರಂದು ಆದೇಶಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.