ಕೇಜ್ರಿವಾಲ್‌ ಆ‍ಪ್ತರ ಮನೆ ಮೇಲೆ ಇ.ಡಿ ದಾಳಿ ನವದೆಹಲಿ (ಪಿಟಿಐ): ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಆಪ್ತ ಸಹಾಯಕ ಬಿಭವ್ ಕುಮಾರ್ ಮತ್ತು ಎಎಪಿಯ ಹಲವು ನಾಯಕರಿಗೆ ಸೇರಿದ ರಾಜಧಾನಿಯಲ್ಲಿನ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಮಂಗಳವಾರ ದಾಳಿ ನಡೆಸಿದೆ. ಬಿಭವ್ ಕುಮಾರ್ ಅವರ ನಿವಾಸ, ದೆಹಲಿ ಜಲ ಮಂಡಳಿ (ಡಿಜೆಬಿ) ಮಾಜಿ ಸದಸ್ಯ ಶಲಭ್ ಕುಮಾರ್, ರಾಜ್ಯಸಭೆ ಸದಸ್ಯ ಮತ್ತು ಪಕ್ಷದ ರಾಷ್ಟ್ರೀಯ ಖಜಾಂಚಿ ಎನ್‌.ಡಿ. ಗುಪ್ತಾ ಅವರ ಕಚೇರಿ, ಎಎಪಿ ಜತೆಗೆ ನಂಟಿರುವ ಚಾರ್ಟರ್ಡ್ ಅಕೌಂಟೆಂಟ್ ಪಂಕಜ್ ಮಂಗಲ್ ಅವರ ಸಂಸ್ಥೆಯ ಅಧಿಕಾರಿಗಳಿಗೆ ಸೇರಿದ 10ರಿಂದ 12 ಸ್ಥಳಗಳಲ್ಲಿ ಇ.ಡಿ ಶೋಧ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಡಿಜೆಬಿ ಕಾಮಗಾರಿ ಗುತ್ತಿಗೆ ನೀಡುವಾಗ ಲಂಚ ಪಡೆದು ಅದನ್ನು ಎಎಪಿಯ ಚುನಾವಣಾ ನಿಧಿಗೆ ವರ್ಗಾಯಿಸಿರುವ ಆರೋಪ ಪ್ರಕರಣದ ತನಿಖೆಯ ಭಾಗವಾಗಿ ಈ ದಾಳಿ ನಡೆದಿದೆ. ಜ.31ರಂದು ಡಿಜೆಬಿಯ ನಿವೃತ್ತ ಮುಖ್ಯ ಎಂಜಿನಿಯರ್ ಜಗದೀಶ್ ಕುಮಾರ್ ಅರೋರಾ ಮತ್ತು ಗುತ್ತಿಗೆದಾರ ಅನಿಲ್ ಕುಮಾರ್ ಅಗರ್‌ವಾಲ್‌ ಅವರನ್ನು ಇ.ಡಿ ಬಂಧಿಸಿತ್ತು. ಎನ್‌ಕೆಜಿ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ ಕಂಪನಿಗೆ ಅರ್ಹತೆ ಇಲ್ಲದಿದ್ದರೂ ₹38 ಕೋಟಿ ವೆಚ್ಚದ ಕಾಮಗಾರಿಯ ಗುತ್ತಿಗೆ ನೀಡಲಾಗಿದೆ ಎಂದು ಸಿಬಿಐ ಎಫ್‌ಐಆರ್‌ನಲ್ಲಿ ಆರೋಪಿಸಿದೆ. ಇ.ಡಿ ಮೂಲಗಳ ಪ್ರಕಾರ, ಎನ್‌ಕೆಜಿ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ನಕಲಿ ಮತ್ತು ಸುಳ್ಳು ದಾಖಲೆ ಸಲ್ಲಿಸಿ ಬಿಡ್ ಪಡೆದಿದೆ. ಟೆಂಡರ್‌ ಮೊತ್ತದಲ್ಲಿ ₹17 ಕೋಟಿ ಮಾತ್ರ ಖರ್ಚು ಮಾಡಿ, ಬಾಕಿ ಹಣ ಕಬಳಿಸಲಾಗಿದೆ. ಅರೋರಾ, ಲಂಚವನ್ನು ನಗದು ಮತ್ತು ಬ್ಯಾಂಕ್‌ ಖಾತೆಯ ಮೂಲಕ ಪಡೆದು, ಬಿಭವ್, ಶಲಭ್‌ ಕುಮಾರ್, ಪಂಕಜ್ ಮಂಗಲ್ ಅವರಿಗೆ ಮತ್ತು ಎಎಪಿಯ ಚುನಾವಣಾ ನಿಧಿಗೆ ವರ್ಗಾಯಿಸಿರುವುದು ತನಿಖೆಯಲ್ಲಿ ಕಂಡುಬಂದಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.