ಸರ್ಕಾರಿ ಉದ್ಯಮಗಳು ಅಪಾಯದಲ್ಲಿವೆ: ಜೈರಾಮ್‌ ರಮೇಶ್‌ ರೋರ್ಕೆಲಾ: ಹಿಂದಿನ ಕಾಂಗ್ರೆಸ್‌ ಸರ್ಕಾರಗಳು ಸ್ಥಾಪಿಸಿದ್ದ ರೊರ್ಕೆಲಾ ಉಕ್ಕಿನ ಕಾರ್ಖಾನೆ (ಆರ್‌ಎಸ್‌ಪಿ) ಸೇರಿದಂತೆ ಸರ್ಕಾರಿ ಸ್ವಾಮ್ಯದ ಉದ್ಯಮಗಳು ಪ್ರಧಾನಿ ನರೇಂದ್ರ ಮೋದಿ ಅವರ ಅವಧಿಯಲ್ಲಿ ಅಪಾಯಕ್ಕೆ ಸಿಲುಕಿವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್‌ ರಮೇಶ್‌ ಬುಧವಾರ ಹೇಳಿದರು. ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳನ್ನು ಮೋದಿ ಅವರು ಮಾರಾಟ ಮಾಡುವುದರಲ್ಲಿ ತೊಡಗಿರುವ ಕಾರಣ ಸಂಕಷ್ಟ ಎದುರಾಗಿದೆ ಎಂದು ಅವರು ಆರೋಪಿಸಿದರು. ಒಡಿಶಾದ ಸುಂದರ್‌ಗಢ ಜಿಲ್ಲೆಯ ರಾಜ್‌ಗಂಗ್‌ಪುರದಲ್ಲಿ ‘ಭಾರತ್‌ ಜೋಡೊ ನ್ಯಾಯ ಯಾತ್ರೆ’ಯಲ್ಲಿ ಪಾಲ್ಗೊಂಡ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ‘ಪಂಡಿತ್‌ ನೆಹರೂ ಅವರು ದೇಶದಲ್ಲಿ ಹಲವು ಸಾರ್ವಜನಿಕ ಉದ್ಯಮಗಳನ್ನು ಸ್ಥಾಪಿಸಿದರು. ಆದರೆ ಇಂದು ಅವೆಲ್ಲವೂ ಅಪಾಯದಲ್ಲಿವೆ. ಪ್ರಧಾನಿ ಮೋದಿ ಅವರು ಈ ಉದ್ಯಮಗಳನ್ನು ತಮ್ಮ ಸ್ನೇಹಿತರಿಗೆ ಮಾರುವುದರಲ್ಲಿ ನಿರತರಾಗಿದ್ದಾರೆ. ಆದರೆ ಕಾಂಗ್ರೆಸ್‌ ಪಕ್ಷವು ಇದನ್ನು ಬಲವಾಗಿ ವಿರೋಧಿಸುತ್ತದೆ’ ಎಂದು ಅವರು ಹೇಳಿದರು. ‘ಕಾಂಗ್ರೆಸ್‌ ಸರ್ಕಾರಗಳು ದೇಶದಲ್ಲಿ ಸ್ಥಾಪಿಸಿರುವ ರೈಲು, ಎಸ್‌ಎಐಎಲ್‌, ಬಂದರು, ವಿಮಾನ ನಿಲ್ದಾಣಗಳು ಸೇರಿದಂತೆ ದೇಶದ ದೊಡ್ಡ ಕಾರ್ಖಾನೆಗಳು ಇಂದು ಮೋದಿ ಅವರ ಮಿತ್ರ ನೀತಿಯಿಂದಾಗಿ ಮಾರಾಟವಾಗುತ್ತಿವೆ’ ಎಂದು ದೂರಿದ ಅವರು, ‘ಜಿಎಸ್‌ಟಿಯನ್ನು ಸುಧಾರಿಸಿ ಸಣ್ಣ ಕೈಗಾರಿಕೆಗಳಿಗೆ ಹೊಸ ಆರ್ಥಿಕ ಮಾದರಿ ರಚಿಸುವುದು ನಮ್ಮ ಆದ್ಯತೆ. ಕುರುಡು ಖಾಸಗೀಕರಣವನ್ನು ನಿಲ್ಲಿಸಿ, ಸರ್ಕಾರಿ ಕಾರ್ಖಾನೆಗಳನ್ನು ಪುನರುಜ್ಜೀವನಗೊಳಿಸುವುದು ಹಾಗೂ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ನಾವು ಪ್ರಾಶಸ್ತ್ಯ ನೀಡುತ್ತೇವೆ’ ಎಂದು ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.