ಉತ್ತರಾಖಂಡ ವಿಧಾನಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ ಮಸೂದೆ ಅಂಗೀಕಾರ ಡೆಹ್ರಾಡೂನ್: ಉತ್ತರಾಖಂಡ ವಿಧಾನಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಮಸೂದೆಯನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಗಿದೆ. ಬಿಜೆಪಿ ನೇತೃತ್ವದ ಸರ್ಕಾರವು ಮಂಗಳವಾರ ಮಸೂದೆ ಮಂಡಿಸಿತ್ತು. ಮಸೂದೆಯನ್ನು ಮೊದಲು ಉನ್ನತಮಟ್ಟದ ಸಮಿತಿಗೆ ಕಳುಹಿಸಬೇಕೆಂದು ವಿಪಕ್ಷಗಳು ಒತ್ತಾಯಿಸಿದ್ದವು. ಮಸೂದೆಗೆ ರಾಜ್ಯಪಾಲರ ಅಂಕಿತ ಬಿದ್ದ ಬಳಿಕ ಸ್ವಾತಂತ್ರ್ಯಾನಂತರ ಯುಸಿಸಿ ಕಾಯ್ದೆಯನ್ನು ಜಾರಿಗೆ ತಂದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಉತ್ತರಾಖಂಡ ಪಾತ್ರವಾಗಲಿದೆ. ಈ ಮೂಲಕ ಎಲ್ಲಾ ನಾಗರಿಕರಿಗೆ ಧರ್ಮಾತೀತವಾಗಿ ಮದುವೆ, ವಿಚ್ಛೇದನ, ಭೂಮಿ, ಆಸ್ತಿ ಮತ್ತು ಉತ್ತರಾಧಿಕಾರಕ್ಕೆ ಸಂಬಂಧಿಸಿದಂತೆ ಏಕರೂಪದ ಕಾನೂನು ಅನ್ವಯವಾಗಲಿದೆ. ಇದೊಂದು ಸಾಮಾನ್ಯ ಕಾಯ್ದೆ ಅಲ್ಲವೇ ಅಲ್ಲ ಎಂದು ಮಸೂದೆ ಅಂಗೀಕಾರಕ್ಕೂ ಮುನ್ನ ಸಿಎಂ ಪುಷ್ಕರ್ ಸಿಂಗ್ ಧಾಮಿ ಹೇಳಿದರು. ಈ ಮೂಲಕ ಎಲ್ಲ ಧರ್ಮಗಳ ಮಹಿಳೆಯರು, ಪುರುಷರಿಗೆ ಏಕರೂಪದ ಕಾನೂನು ಅನ್ವಯವಾಗಲಿದೆ. ತಾರತಮ್ಯರಹಿತ, ಏಕತೆಯ ಸಮಾಜ ನಿರ್ಮಾಣಕ್ಕೆ ಅನುಕೂಲವಾಗಲಿದೆ ಎಂದೂ ಅವರು ಹೇಳಿದರು. ವಿಶೇಷವಾಗಿ ಇದು ಮಹಿಳೆಯರ ಹಕ್ಕುಗಳನ್ನು ರಕ್ಷಿಸಲಿದ್ದು, ಅವರ ಶೋಷಣೆಗೆ ಅಂತ್ಯಹಾಡಲಿದೆ ಎಂದು ಧಾಮಿ ಹೇಳಿದರು. ‘2022ರ ವಿಧಾನಸಭೆ ಚುನಾವಣೆ ವೇಳೆ ಜನರಿಗೆ ನೀಡಿದ್ದ ಭರವಸೆವನ್ನು ಈ ಕಾಯ್ದೆ ಪೂರ್ಣಗೊಳಿಸಲಿದೆ. ನರೇಂದ್ರ ಮೋದಿ ನಾಯಕತ್ವದಲ್ಲಿ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದಲ್ಲಿ ಇದು ಉತ್ತರಾಖಂಡದ ಚಿಕ್ಕ ಕೊಡುಗೆ ’ ಎಂದು ಸಿಎಂ ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.