3ನೇ ಬಾರಿಗೆ ಅಧಿಕಾರದ ವಿಶ್ವಾಸ: ‘ಮೋದಿ 3.0’ ದೃಷ್ಟಿಕೋನ ಬಿಚ್ಚಿಟ್ಟ ಪ್ರಧಾನಿ ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಭಾರಿ ಬಹುಮತವನ್ನು ಪಡೆಯುವ ವಿಶ್ವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಮುಂದಿನ ಐದು ವರ್ಷಗಳ ಅವಧಿಗೆ ತಮ್ಮ ದೃಷ್ಟಿಕೋನವನ್ನು ವಿವರಿಸಿದ್ದಾರೆ. ಮೋದಿ 3.0 ಸರ್ಕಾರವು 'ವಿಕಸಿತ ಭಾರತ' ಅಥವಾ ಅಭಿವೃದ್ಧಿ ಹೊಂದಿದ ರಾಷ್ಟ್ರ ನಿರ್ಮಾಣಕ್ಕೆ ಅಡಿಪಾಯದ ಗುರಿ ಹೊಂದಿದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ನೇತೃತ್ವದ ಹಿಂದಿನ ಸರ್ಕಾರವು ಆರ್ಥಿಕತೆಯನ್ನು ಅಸಮರ್ಪಕವಾಗಿ ನಿರ್ವಹಣೆ ಮಾಡಿತ್ತು. 10 ವರ್ಷಗಳಲ್ಲಿ ನಮ್ಮ ಸರ್ಕಾರ ಎಲ್ಲ ವಲಯಗಳ ಅಭಿವೃದ್ಧಿಗೆ ಶ್ರಮಿಸಿದೆ ಎಂದು ಹೇಳಿದ್ದಾರೆ. ಯುಪಿಎ ಅವಧಿಯಲ್ಲಿ ‘ಫ್ರಜೈಲ್ ಫೈವ್’(ದುರ್ಬಲ ಆರ್ಥಿಕತೆಯ 5 ರಾಷ್ಟ್ರಗಳಲ್ಲಿ ಸ್ಥಾನ) ಹಂತದಲ್ಲಿದ್ದ ಭಾರತದ ಆರ್ಥಿಕತೆ ಈಗ ವಿಶ್ವದ ಟಾಪ್ 5 ಆರ್ಥಿಕತೆಗಳಲ್ಲಿ ಒಂದಾಗಿದೆ.‘ಸಬ್ ಕಾ ಸಾಥ್’ ಕೇವಲ ಘೋಷಣೆಯಲ್ಲ, ಅದು ಮೋದಿಯ ಗ್ಯಾರಂಟಿ’ ಎಂದು ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ವೇಳೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 2047ರಲ್ಲಿ ಸ್ವಾತಂತ್ರ್ಯೋತ್ಸವದ ಶತಮಾನೋತ್ಸವ ಆಚರಿಸುವ ಹೊತ್ತಿಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ(ವಿಕಸಿತ ಭಾರತ) ಮಾಡುವುದು ಸರ್ಕಾರದ ಗುರಿಯಾಗಿದೆ ಎಂದು ಹೇಳಿದ್ದಾರೆ. ‘ವಿಕಸಿತ ಭಾರತ ಎಂಬುದು ಆಟಕ್ಕಾಗಿ ಇಟ್ಟಿರುವ ಪದವಲ್ಲ, ಅದು ನಮ್ಮ ಬದ್ಧತೆ’ ಎಂದು ಮುಂದಿನ ಐದು ವರ್ಷಗಳ ದೃಷ್ಟಿಕೋನವನ್ನು ವಿವರಿಸುವಾಗ ಮೋದಿ ಹೇಳಿದರು. ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2ನೇ ಅಧಿಕಾರಾವಧಿಯ ಅಂತಿಮ ಘಟ್ಟದಲ್ಲಿದ್ದು, ಏಪ್ರಿಲ್ ಅಥವಾ ಮೇ ನಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ‘ನಮ್ಮ ಸರ್ಕಾರದ 3ನೇ ಅವಧಿಯು ಬಹಳ ದೂರವಿಲ್ಲ. ಕೆಲವರು ಇದನ್ನು ಮೋದಿ 3.0 ಎಂದು ಕರೆಯುತ್ತಾರೆ. ವಿಕಸಿತ ಭಾರತದ ಅಡಿಪಾಯ ಗಟ್ಟಿಗೊಳಿಸಲು ಮೋದಿ 3.0 ಎಲ್ಲ ಪ್ರಯತ್ನಪಡಲಿದೆ’ಎಂದು ಮೋದಿ ಹೇಳಿದ್ದಾರೆ. 5 ವರ್ಷಗಳ ದೃಷ್ಟಿಕೋನವನ್ನು ವಿವರಿಸಿದ ಮೋದಿ, ಪಿಎಂ ಕಿಸಾನ್, ಪಿಎಂ ಆವಾಸ್ ಯೋಜನೆ, ಉಚಿತ ಪಡಿತರ, ಆಯುಷ್ಮಾನ್ ಭಾರತ್ ಮತ್ತು ಅಗ್ಗದ ಬೆಲೆಯ ಔಷಧಿ ಸೌಲಭ್ಯಗಳು ಮುಂದುವರಿಯಲಿವೆ ಎಂದು ಹೇಳಿದರು. ಭಾರತವು ಹಲವು ಪಟ್ಟು ವೈದ್ಯಕೀಯ ಕಾಲೇಜುಗಳು ಮತ್ತು ವೈದ್ಯರ ಹೆಚ್ಚಳಕ್ಕೆ ಸಾಕ್ಷಿಯಾಗಲಿದೆ. ವೈದ್ಯಕೀಯ ಚಿಕಿತ್ಸೆ ಸುಲಭವಾಗಿ ಮತ್ತು ಅಗ್ಗದ ದರದಲ್ಲಿ ಸಿಗಲಿದೆ. ಇನ್ನಷ್ಟು ಸ್ಟಾರ್ಟಪ್‌ಗಳು, ಒಂದು ಲಕ್ಷ ಯೂನಿಕಾರ್ನ್‌ಗಳು,ಅತ್ಯುತ್ತಮ ವಿಶ್ವವಿದ್ಯಾಲಯಗಳು, ಅಂತರರಾಷ್ಟ್ರೀಯ ಕ್ರೀಡೆಗಳಲ್ಲಿ ಹೆಚ್ಚು ಪಾಲ್ಗೊಳ್ಳುವಿಕೆ, ಸಾರ್ವಜನಿಕ ಸಾರಿಗೆಯಲ್ಲಿ ಪರಿವರ್ತನೆ, ಬುಲೆಟ್ ಟ್ರೇನ್‌ಗಳನ್ನು ದೇಶ ಕಾಣಲಿದೆ ಎಂದರು. ಮೋದಿ 3.0 ಅವಧಿಯಲ್ಲಿ ಭಾರತವು ವ್ಯಾಪಕವಾಗಿ ಎಐ(ಕೃತಕ ಬುದ್ಧಿಮತ್ತೆ) ಬಳಕೆ, ನ್ಯಾನೊ ಗೊಬ್ಬರ, ಹಸಿರು ತಂತ್ರಜ್ಞಾನ, ನೈಸರ್ಗಿಕ ಕೃಷಿಯಲ್ಲಿ ಅಭಿವೃದ್ಧಿ ಸಾಧಿಸಲಿದೆ ಎಂದು ಮೋದಿ ಹೇಳಿದ್ದಾರೆ. ಸೆಮಿಕಂಡಕ್ಟರ್ ವಲಯ, ಎಲೆಕ್ಟ್ರಾನಿಕ್ ವಸ್ತುಗಳು, ಗ್ರೀನ್ ಹೈಡ್ರೋಜನ್ ವಲಯಗಳಲ್ಲಿ ಭಾರತ ಗಮನಾರ್ಹ ಅಭಿವೃದ್ಧಿ ಕಾಣಲಿದೆ ಎಂದೂ ಪ್ರಧಾನಿ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.