ದೇಶ ಒಡೆಯಲು ಕಥೆ ಹೆಣೆಯುವುದನ್ನು ನಿಲ್ಲಿಸಿ: ಕಾಂಗ್ರೆಸ್‌ಗೆ ಪ್ರಧಾನಿ ಮೋದಿ ಚಾಟಿ ನವದೆಹಲಿ: ದೇಶವನ್ನು ಉತ್ತರ ಮತ್ತು ದಕ್ಷಿಣ ಎಂದು ವಿಭಜಿಸಲು ಕಥೆ ಹೆಣೆಯುವುದನ್ನು ನಿಲ್ಲಿಸಿ. ಇದು ರಾಷ್ಟ್ರದ ಭವಿಷ್ಯವನ್ನು ಗಂಡಾಂತರಕ್ಕೆ ನೂಕುತ್ತದೆ ಎಂದು ಕರ್ನಾಟಕ ಸರ್ಕಾರ ಮತ್ತು ಕಾಂಗ್ರೆಸ್‌ ಪಕ್ಷವನ್ನು ಪ್ರಧಾನಿ ನರೇಂದ್ರ ಮೋದಿ ಆಗ್ರಹಿಸಿದ್ದಾರೆ. ರಾಜ್ಯಸಭೆಯಲ್ಲಿ ವಂದನಾ ನಿರ್ಣಯದ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಕರ್ನಾಟಕ ಸರ್ಕಾರವು ಜಾಹೀರಾತುಗಳ ಮೂಲಕ ಇಂತಹ ನಿರೂಪಣೆಗಳನ್ನು ಮಾಡುತ್ತಿದೆ ಎಂದು ಬುಧವಾರ ಬೇಸರ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರವು ತೆರಿಗೆ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷ ದೆಹಲಿಯಲ್ಲಿ ಇಂದು (ಫೆ.7ರಂದು) ನಡೆಸಿದ ಧರಣಿ ಕುರಿತು ಮೋದಿ ಹೇಳಿಕೆ ನೀಡಿದ್ದಾರೆ. 'ದೇಶವನ್ನು ವಿಭಜಿಸಲು ಇತ್ತೀಚಿನ ದಿನಗಳಲ್ಲಿ ಬಳಸುತ್ತಿರುವ ಭಾಷೆ, ರಾಜಕೀಯ ಲಾಭಕ್ಕಾಗಿ ಹೊಸ ನಿರೂಪಣೆಗಳನ್ನು ಮಾಡುತ್ತಿರುವ ನಿರ್ದಿಷ್ಟ ವಿಚಾರದ ಬಗ್ಗೆ ನನ್ನ ನೋವು ಹಂಚಿಕೊಳ್ಳಲು ಬಯಸುತ್ತೇನೆ. ಇಡೀ ರಾಜ್ಯವೇ ಈ ಭಾಷೆಯಲ್ಲಿ ಮಾತನಾಡುತ್ತಿದೆ ಎಂದರೆ, ದೇಶದ ಪಾಲಿಗೆ ಇದಕ್ಕಿಂತ ಕೆಟ್ಟದ್ದು ಇನ್ನೇನೂ ಇರಲಾರದು' ಎಂದಿದ್ದಾರೆ. ದೇಶದ ಒಂದು ಭಾಗದಲ್ಲಿ ತಯಾರಾಗುವ ಲಸಿಕೆಯನ್ನು ಬೇರೆ ಭಾಗದವರಿಗೆ ಹಾಕಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ ಎನ್ನುವ ಮೂಲಕ ತೆರಿಗೆ ಹಂಚಿಕೆ ತಾರತಮ್ಯ ಆರೋಪಗಳಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ಮುಂದುವರಿದು, 'ಇಂತಹ ಚಿಂತನೆಗಳು ಏಕೆ? ರಾಷ್ಟ್ರೀಯ ಪಕ್ಷದಿಂದಲೇ ಇಂತಹ ಹೇಳಿಕೆಗಳು ಬರುವುದು ತುಂಬಾ ನೋವಿನ ವಿಚಾರ' ಎಂದಿದ್ದಾರೆ. 'ದೇಶವೆಂದರೆ ನಮ್ಮ ಪಾಲಿಗೆ ಕೇವಲ ಭೂಮಿಯ ತುಂಡಲ್ಲ' ಎಂದ ಪ್ರಧಾನಿ, ದೇಶವು ಮನುಷ್ಯನ ದೇಹವಿದ್ದಂತೆ. ಒಂದು ವೇಳೆ ಕಾಲಿಗೆ ಪೆಟ್ಟಾದರೆ, ಕೈಗಳು ನನಗೇನೂ ಆಗಬೇಕಿಲ್ಲ ಎಂದು ಹೇಳುವುದಿಲ್ಲ. ದೇಶದ ಎಲ್ಲಿಯಾದರೂ ನೋವು ಕಂಡುಬಂದರೆ ಅದನ್ನು ಎಲ್ಲರೂ ಅನುಭವಿಸಬೇಕು ಎಂದು ಕರೆ ಕೊಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ಪ್ರತಿಭಟನೆ ಪಿಟಿಐ ಚಿತ್ರ 'ದೇಹದ ಒಂದು ಭಾಗ ನಿಷ್ಕ್ರಿಯವಾದರೆ, ಇಡೀ ದೇಹಕ್ಕೆ ಅಂಗವಿಕಲತೆ ಎನ್ನಲಾಗುತ್ತದೆ. ಅದೇರೀತಿ ಯಾವುದೇ ಒಂದು ಪ್ರದೇಶ ಅಭಿವೃದ್ಧಿಯಿಂದ ವಂಚಿತವಾದರೆ, ದೇಶವೂ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಹಾಗಾಗಿಯೇ ನಾವು ದೇಶವನ್ನು ಪ್ರತ್ಯೇಕ ಪ್ರತ್ಯೇಕವಾಗಿ ನೋಡುವ ಬದಲು, ಸಮಗ್ರವಾಗಿ ಕಾಣಬೇಕಿದೆ' ಎಂದು ಸಲಹೆ ನೀಡಿದ್ದಾರೆ. ಹಿಮಾಲಯವನ್ನು ಉದಾಹರಿಸಿ ಮಾತನಾಡಿದ ಪ್ರಧಾನಿ, ನದಿಗಳು ಅಲ್ಲಿ ಹುಟ್ಟಿ ಹರಿಯುತ್ತವೆ. ಹಾಗಾಗಿ ನೀರನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವುದಿಲ್ಲ ಎಂದು ಅಲ್ಲಿನ ಜನರು ಹೇಳಿದರೆ ಹೇಗೆ? ದೇಶದಲ್ಲಿ ಏನಾಗುತ್ತದೆ? ಈ ವಿಚಾರಗಳು ಎಲ್ಲಿಗೆ ಹೋಗಿ ನಿಲ್ಲುತ್ತವೆ? ಕಲ್ಲಿದ್ದಲನ್ನು ಹೊಂದಿರುವ ರಾಜ್ಯ, ತಮ್ಮ ಸಂಪತ್ತನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ ಎಂದರೆ ದೇಶ ನಡೆಯುವುದು ಹೇಗೆ? ಕೋವಿಡ್‌ ಸಂದರ್ಭದಲ್ಲಿ ಉತ್ಪಾದಿಸಿದ ಆಮ್ಲಜನಕವನ್ನು ಇತರ ಭಾಗದವರೊಂದಿಗೆ ಹಂಚಿಕೊಳ್ಳುವುದಿಲ್ಲ ಎಂದು ಈಶಾನ್ಯ ರಾಜ್ಯಗಳು ಹೇಳಿದರೆ ಏನಾಗಬಹುದು? ಎಂದು ಪ್ರಶ್ನಿಸಿದ್ದಾರೆ. 'ನಮ್ಮ ತೆರಿಗೆ ನಮ್ಮ ಹಣ' ಎಂಬುದು ಎಂತಹ ಭಾಷೆ? ದೇಶವನ್ನು ಒಡೆಯುವುದಕ್ಕಾಗಿ ಇಂತಹ ನಿರೂಪಣೆ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ. ದೇಶವನ್ನು ವಿಭಜಿಸಲು ಇಂತಹ ಹೊಸ ನಿರೂಪಣೆಗಳನ್ನು ಮಾಡುವುದನ್ನು ನಿಲ್ಲಿಸಿ. ಇದು ದೇಶದ ಭವಿಷ್ಯಕ್ಕೆ ಅಪಾಯವನ್ನು ತಂದೊಡ್ಡುತ್ತದೆ. ದೇಶವನ್ನು ಜೊತೆಯಾಗಿ ಕೊಂಡೊಯ್ಯುವುದಕ್ಕೆ ಪ್ರಯತ್ನ ಮಾಡಿ ಎಂದು ಒತ್ತಿ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.