‘ಚುನಾವಣೆ ಗೆಲ್ಲುವ ಸುಸ್ಥಿತಿಯಲ್ಲಿ ಎನ್‌ಡಿಎ’ ನವದೆಹಲಿ: ಲೋಕಸಭೆಗೆ ತಕ್ಷಣವೇ ಚುನಾವಣೆ ನಡೆದರೂ ಎನ್‌ಡಿಎ ಮೈತ್ರಿಕೂಟವು 335 ಸೀಟುಗಳನ್ನು ಗೆಲ್ಲಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ 2015ರ ಸಾಲಿಗೆ ಹೋಲಿಸಿದರೆ ನಾಲ್ಕನೇ ಬಾರಿಗೆ ಶೇ 70ರ ಗಡಿಯನ್ನು ದಾಟಿದೆ. ‘ಇಂಡಿಯಾ ಟುಡೆ ಮತ್ತು ಸಿ–ವೋಟರ್ ಮೂಡ್ ಆಫ್‌ ದ ನೇಷನ್‌’ ಸಮೀಕ್ಷೆಯಲ್ಲಿ ಈ ಅಂಶವು ವ್ಯಕ್ತವಾಗಿದೆ. ಜನವರಿ 2023ರ ಜನವರಿ ತಿಂಗಳಲ್ಲಿ ಈ ಸಮೀಕ್ಷೆಯು ನಡೆದಿದೆ. ಸಮೀಕ್ಷೆಯ ಅಂದಾಜಿನಂತೆ ‘ಇಂಡಿಯಾ’ ಮೈತ್ರಿಕೂಟ 166 ಸೀಟು ಗೆಲ್ಲಲಿದೆ. 2024ರ ಲೋಕಸಭೆ ಚುನಾವಣೆಯು ಹತ್ತಿರವಾಗುತ್ತಿರುವಂತೆಯೇ ದೇಶದ ಪ್ರಸ್ತುತ ರಾಜಕೀಯ ಚಿತ್ರಣ ಕುರಿತ ವಸ್ತುಸ್ಥಿತಿ ಅರಿಯುವ ಯತ್ನವನ್ನು ಸಮೀಕ್ಷೆ ಮಾಡಿದೆ. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್‌ಡಿಎ) ಮೂರನೇ ಬಾರಿಗೆ ಅಧಿಕಾರದ ಗದ್ದುಗೆಗೆ ಏರುವ ಸುಸ್ಥಿತಿಯಲ್ಲಿದೆ. ಆದರೆ, ಎನ್‌ಡಿಎಯ ಈಗಿನ ಘೋಷವಾಕ್ಯದಂತೆ 400 ಸೀಟು ಗೆಲ್ಲುವ ಗುರಿ ದಾಟುವ ಸಾಧ್ಯತೆಗಳು ಕಡಿಮೆ. ಸಮೀಕ್ಷೆಯ ಪ್ರಕಾರ, ಸದ್ಯದಲ್ಲೇ ಲೋಕಸಭೆಗೆ ಚುನಾವಣೆ ನಡೆದರೂ ಎನ್‌ಡಿಎ ಮೈತ್ರಿಕೂಟವು 335 ಸೀಟು ಗೆಲ್ಲಲಿದೆ. ಈ ಮೂಲಕ ಸರ್ಕಾರ ರಚಿಸಲು ಸರಳ ಬಹುಮತವಾಗಿ ಬೇಕಾಗಿರುವ 272 ಸೀಟುಗಳ ಗಡಿಯನ್ನು ನಿರಾಯಾಸವಾಗಿ ದಾಟಲಿದೆ. ಆದರೆ, ಈ ಮೈತ್ರಿಕೂಟವು ಕನಿಷ್ಠ 18 ಸ್ಥಾನಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳಿದ್ದು, ಇದರ ಅನುಕೂಲ ಇಂಡಿಯಾ ಮೈತ್ರಿಕೂಟದ ಪಕ್ಷಗಳಿಗೆ ಆಗಲಿದೆ. ‘ಮೂಡ್‌ ಆಫ್‌ ದ ನೇಷನ್‌‘ ಅನ್ನು ಫೆಬ್ರುವರಿ 2024ರ ಸಮೀಕ್ಷೆಗೆ, ಲೋಕಸಭೆಯ ಎಲ್ಲ ಕ್ಷೇತ್ರಗಳಿಂದ ಒಟ್ಟು 35,801 ಜನರು ಪ್ರತಿಕ್ರಿಯಿಸಿದ್ದಾರೆ. ಈ ಸಮೀಕ್ಷೆಯನ್ನು 2023ರ ಡಿಸೆಂಬರ್ 15 ಮತ್ತು 2024ರ ಜನವರಿ 28ರ ನಡುವೆ ನಡೆಸಲಾಗಿದೆ. ಕಾಂಗ್ರೆಸ್ ಪಕ್ಷ ಒಳಗೊಂಡ ಪ್ರತಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟವು 166 ಸೀಟು ಗೆಲ್ಲುವ ಸಾಧ್ಯತೆಗಳಿವೆ. ಪಕ್ಷವಾರು ಸಾಧನೆಗಳನ್ನು ಗಮನಿಸುವುದಾದರೆ ಬಿಜೆಪಿಯು ಒಟ್ಟು 543 ಸೀಟುಗಳ ಪೈಕಿ 304 ಸೀಟು ಗೆಲ್ಲುವ ಸಾಧಯತೆಗಳಿವೆ. ಈ ಮೂಲಕ ಬಿಜೆಪಿಯೇ ಸ್ವತಂತ್ರವಾಗಿ ಸರಳ ಬಹುಮತಕ್ಕೆ ಬೇಕಾದ ಸ್ಥಾನಗಳನ್ನು ಗೆಲ್ಲುವ ಸ್ಥಿತಿಯಲ್ಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.