80 ವರ್ಷದ ತಂದೆ ಎದುರೇ ಮಗನ ಭೀಕರ ಕೊಲೆ: ಒಂದೇ ಕುಟುಂಬದ 7 ಮಂದಿಗೆ ಜೀವಾವಧಿ ಕಾನ್ಪುರ: 2017ರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಕಾನ್ಪುರ ನ್ಯಾಯಾಲಯವು ಒಂದೇ ಕುಟುಂಬದ 7 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜೈ ಪ್ರಕಾಶ ತಿವಾರಿ ತೀರ್ಪು ಪ್ರಕಟಿಸಿದ್ದು, ತಲಾ ₹11,000 ದಂಡ ವಿಧಿಸಿದ್ದಾರೆ ಎಂದು ಜಿಲ್ಲಾ ಸರ್ಕಾರಿ ವಕೀಲ ರಾಜು ಪೊರ್ವಲ್ ಹೇಳಿದ್ದಾರೆ. ಪ್ರಕರಣ 2017ರ ಆಗಸ್ಟ್‌ನಲ್ಲಿ ನಡೆದಿದ್ದು, ಹಳೇ ದ್ವೇಷದ ಹಿನ್ನೆಲೆಯಲ್ಲಿ 30 ವರ್ಷದ ಶೈಲೇಂದ್ರ ಎಂಬವನ ಮೇಲೆ ಸುರೇಶ್, ಪ್ರಕಾಶ್, ರಮೇಶ್, ರಾಮ್ ನಾರಾಯಣ್, ಅಜ್ಮೀರ್ ಸಿಂಗ್, ಪಂಕಜ್ ಮತ್ತು ನೀರಜ್ ಎಂಬವರು ದೊಣ್ಣೆ ಮತ್ತು ಕಬ್ಬಿಣದ ರಾಡ್‌ಗಳಿಂದ ದಾಳಿ ಮಾಡಿದ್ದರು. 80 ವರ್ಷದ ತಂದೆ ಎದುರೇ ಶೈಲೇಂದ್ರ ಮೇಲೆ ಜೀವ ಹೋಗುವವರೆಗೂ ಕ್ರೂರವಾಗಿ ಹಲ್ಲೆ ಮಾಡಿದ್ದರು. ಎಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರಾಗಿರುವುದರಿಂದ ಕಡಿಮೆ ಶಿಕ್ಷೆ ವಿಧಿಸಬೇಕೆಂದು ಆರೋಪಿಗಳ ಪರ ವಕೀಲರು ವಾದಿಸಿದ್ದರು. ಪ್ರಾಸಿಕ್ಯೂಷನ್ ಗರಿಷ್ಠ ಶಿಕ್ಷೆಗೆ ಒತ್ತಾಯಿಸಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.