ಅಮೆರಿಕದಲ್ಲಿ ಭಾರತದ ವಿದ್ಯಾರ್ಥಿ ಮೇಲೆ ಹಲ್ಲೆ ಷಿಕಾಗೊ/ಹೈದರಾಬಾದ್‌: ಉನ್ನತ ವ್ಯಾಸಂಗಕ್ಕೆ ಅಮೆರಿಕಕ್ಕೆ ತೆರಳಿದ್ದ ಹೈದರಾಬಾದ್‌ನ ಐ.ಟಿ. ವಿದ್ಯಾರ್ಥಿ ಮೇಲೆ ಷಿಕಾಗೊದಲ್ಲಿ ಅಮಾನುಷವಾಗಿ ಹಲ್ಲೆ ನಡೆಸಲಾಗಿದೆ. ಹೈದರಾಬಾದ್‌ನ ಸೈಯದ್ ಮಜಾಹಿರ್‌ ಅಲಿ ಇಂಡಿಯಾನಾದ ವೆಸ್ಲಿಯಾನ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಕ್ಯಾಂಪ್‌ಬೆಲ್ ಅವೆನ್ಯೂನಲ್ಲಿರುವ ಮನೆಯ ಬಳಿ ಅಪರಿಚಿತರು ಅವರನ್ನು ಬೆನ್ನಟ್ಟಿ ಹಲ್ಲೆ ನಡೆಸಿದ್ದಾರೆ. ‘ಮನೆಗೆ ಹಿಂದಿರುಗುವಾಗ ನಾಲ್ವರು ನನ್ನ ಮೇಲೆ ದಾಳಿ ನಡೆಸಿದರು. ನಾನು ಜಾರಿ ಬಿದ್ದೆ. ಅವರು ನನಗೆ ಒದ್ದರು. ದಯವಿಟ್ಟು ಸಹಾಯ ಮಾಡಿ’ ಎಂದು ಅಂಗಲಾಚುತ್ತಿರುವುದು ಅಲಿ ಅವರ ಸ್ನೇಹಿತರು ಚಿತ್ರೀಕರಿಸಿರುವ ವಿಡಿಯೊದಲ್ಲಿ ಸೆರೆಯಾಗಿದೆ. ಅಲಿಯ ಪತ್ನಿ ರುದುಯ್ಯಾ ಫಾತಿಮಾ ರಜ್ವಿ ಈ ಬಗ್ಗೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೆ ಪತ್ರ ಬರೆದಿದ್ದು, ಪತಿಗೆ ತಕ್ಷಣವೇ ವೈದ್ಯಕೀಯ ನೆರವು ಒದಗಿಸು ವಂತೆ ಹಾಗೂ ತನ್ನ ಮಕ್ಕಳೊಂದಿಗೆ ಅಮೆರಿಕಕ್ಕೆ ಪ್ರಯಾಣಿಸಲು ಸಹಾಯ ಮಾಡುವಂತೆ ವಿನಂತಿಸಿದ್ದಾರೆ. ಭಾರತದ ವಿದ್ಯಾರ್ಥಿ ಸಾವು: ಅಮೆರಿಕದ ಪರ್ಡ್ಯೂ ವಿಶ್ವವಿದ್ಯಾಲಯ ದಲ್ಲಿ ಪಿಎಚ್‌.ಡಿ ವ್ಯಾಸಂಗ ಮಾಡುತ್ತಿದ್ದ ಭಾರತದ ವಿದ್ಯಾರ್ಥಿಯೊಬ್ಬರ ಮೃತದೇಹ ಇಂಡಿಯಾನದಲ್ಲಿ ಪತ್ತೆಯಾಗಿದೆ. ಸಮೀರ್‌ ಕಾಮತ್‌ (23) ಮೃತ ವಿದ್ಯಾರ್ಥಿ. ಇವರು ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನಲ್ಲಿ ಪಿಎಚ್‌.ಡಿ ಅಧ್ಯಯನ ಮಾಡುತ್ತಿದ್ದರು ಎಂದು ವಿಶ್ವವಿದ್ಯಾಲಯದ ಸ್ವತಂತ್ರ ಸುದ್ದಿ ಮಾಧ್ಯಮ ತಿಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.