: ಇಂದೇ ಶ್ವೇತ ಪತ್ರ ಬಿಡುಗಡೆ ಮಾಡಲಿರುವ ನಿರ್ಮಲಾ ಸೀತಾರಾಮನ್ ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನ ಅಂತಿಮ ಘಟ್ಟಕ್ಕೆ ಬಂದಿದ್ದು, ಲೋಕಸಭೆಯಲ್ಲಿ ಸ್ಪೀಕರ್ ಮತ್ತು ರಾಜ್ಯಸಭೆಯಲ್ಲಿ ನಿವೃತ್ತರಾಗುತ್ತಿರುವ ಸದಸ್ಯರಿಗೆ ಪ್ರಧಾನಿ ಮೋದಿ ಬೀಳ್ಕೊಡುಗೆ ಭಾಷಣ ಮಾಡಿದ್ದಾರೆ. ಈ ನಡುವೆ, ಶೀಘ್ರದಲ್ಲೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಯುಪಿಎ ಮತ್ತು ಎನ್‌ಡಿಎ ಸರ್ಕಾರಗಳ ಆರ್ಥಿಕ ಸ್ಥಿತಿಗತಿ ಕುರಿತ ಶ್ವೇತ ಪತ್ರ ಬಿಡುಗಡೆ ಮಾಡಲಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು, ಸದನದ ಕಾರ್ಯಕಲಾಪದ ಪ್ರಕಟಣೆಯೊಂದು ಹರಿದಾಡುತ್ತಿದೆ. ಶ್ವೇತ ಪತ್ರ ಕುರಿತಂತೆ ಬಜೆಟ್ ಭಾಷಣದಲ್ಲೇ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದ್ದರು. 2014ಕ್ಕೂ ಮುನ್ನ, ದೇಶದ ಆರ್ಥಿಕತೆಯನ್ನು ಅಸಮರ್ಪಕವಾಗಿ ನಿರ್ವಹಿಸಲಾಗಿತ್ತು. ನಮ್ಮ ಸರ್ಕಾರ ಬಂದ ಬಳಿಕ ಆರ್ಥಿಕತೆ ಚೇತರಿಕೆ ಕಂಡಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ದುರ್ಬಲ ಐದು ಆರ್ಥಿಕತೆಗಳಲ್ಲಿ ಒಂದಾಗಿದ್ದ ಭಾರತ, ಈಗ ವಿಶ್ವದ ಟಾಪ್ 5 ಆರ್ಥಿಕತೆಗಳಲ್ಲಿ ಸ್ಥಾನ ಪಡೆದಿದೆ ಎಂದು ಹೇಳಿದ್ದರು. ನಿನ್ನೆ ರಾಜ್ಯಸಭೆಯಲ್ಲಿ ಮಾತನಾಡಿದ್ದ ಮೋದಿ ಸಹ ಇದೇ ಆರೋಪ ಮಾಡಿದ್ದರು. ಈ ನಡುವೆ, ಇಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸಲು 54 ಪುಟಗಳ ಕಪ್ಪು ಪತ್ರವನ್ನು ಬಿಡುಗಡೆ ಮಾಡಿದರು. ಅದರಲ್ಲಿ, ಮೋದಿ ಆಡಳಿತದ ಕಳೆದ 10 ವರ್ಷಗಳು ಬೆಲೆ ಏರಿಕೆ, ನಿರುದ್ಯೋಗ, ಪ್ರಮುಖ ಸಂಸ್ಥೆಗಳ ಬುಡಮೇಲು ಮತ್ತು ಬಿಜೆಪಿಯೇತರ ಪಕ್ಷಗಳ ಆಡಳಿತವಿರುವ ರಾಜ್ಯಗಳಿಗೆ ತಾರತಮ್ಯ ಸೇರಿ ಅನ್ಯಾಯದ ವರ್ಷಗಳಾಗಿದ್ದವು ಎಂದು ಕಾಂಗ್ರೆಸ್ ದೂಷಿಸಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.