ಸಂಸದರೊಂದಿಗೆ ಪ್ರಧಾನಿ ಮೋದಿ 'ಆಪ್ತ’ ಭೋಜನ ಕೂಟ ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್‌ ಭವನದಲ್ಲಿ ತಮ್ಮ ಕೆಲವು ಸಹೋದ್ಯೋಗಿಗಳೊಂದಿಗೆ ಗುರುವಾರ ಭೋಜನ ಸವಿದರು. ಈ ವೇಳೆ ತಮ್ಮ ಪಾಕಿಸ್ತಾನ ಭೇಟಿ, ವಿದೇಶ ಪ್ರವಾಸ, ಕೋವಿಡ್ ಬಿಕ್ಕಟ್ಟು ಸೇರಿದಂತೆ ಹಲವು ವಿಷಯಗಳನ್ನು ಅವರು ಹಂಚಿಕೊಂಡರು. ಬಿಜೆಪಿಯ ನಾಲ್ವರು ಸಂಸದರು, ಬಿಜೆಪಿ, ಬಿಜೆಡಿ, ಟಿಡಿಪಿ ಮತ್ತು ಆರ್‌ಎಸ್‌ಪಿಯ ತಲಾ ಒಬ್ಬರು ಒಬ್ಬ ಸಂಸದರು ಭೋಜನ ಕೂಟದಲ್ಲಿ ಭಾಗವಹಿಸಿದ್ದರು. ‘ಪ್ರಧಾನ ಮಂತ್ರಿಗಳ ಕಚೇರಿಗೆ ಬರಬೇಕೆಂದು ತಮಗೆ ಆಹ್ವಾನ ಬಂತು. ನಾವು ಅಲ್ಲಿಗೆ ಹೋದಾಗ ಪ್ರಧಾನಿ ಅಲ್ಲಿದ್ದರು. ‘ನಿಮಗೆ ಶಿಕ್ಷೆ ಕಾದಿದೆ, ಬನ್ನಿ’ ಎಂದು ಪ್ರಧಾನಿ ಮೋದಿ ಹಾಸ್ಯ ಮಾಡಿದರು’ ಎಂದು ಭೋಜನ ಕೂಟದಲ್ಲಿ ಭಾಗವಹಿಸಿದ್ದ ಸಂಸದರೊಬ್ಬರು ತಿಳಿಸಿದರು. ನಂತರ ಸಂಸದರನ್ನು ನೂತನ ಸಂಸತ್ ಭವನದ ಮೊದಲ ಮಹಡಿಯಲ್ಲಿರುವ ಊಟದ ಕೊಠಡಿ ‘ಸಂಗಮ್‌’ಗೆ ಕರೆದೊಯ್ಯಲಾಯಿತು. ಪ್ರಧಾನಿಯವರ ನೆಚ್ಚಿನ ಕಿಚಡಿ ಸೇರಿದಂತೆ ಹಲವು ಬಗೆಯ ಸಸ್ಯಾಹಾರಿ ಖಾದ್ಯಗಳು ಅಲ್ಲಿದ್ದವು ಎಂದು ಭೋಜನ ಕೂಟದಲ್ಲಿ ಭಾಗವಹಿಸಿದ್ದ ಮತ್ತೊಬ್ಬ ಸಂಸದರು ಹೇಳಿದ್ದಾರೆ. ‘ಊಟದ ವೇಳೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದೆವು. ನಾವು ಪ್ರಶ್ನೆ ಕೇಳಿದರೆ, ಪ್ರಧಾನಿ ಅದಕ್ಕೆ ಉತ್ತರಗಳನ್ನು ನೀಡುತ್ತಿದ್ದರು. ಪಾಕಿಸ್ತಾನದ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಧಾನಿಯ 2015ರ ಲಾಹೋರ್ ಭೇಟಿಯ ಬಗ್ಗೆ ನಾವು ಪ್ರಶ್ನೆ ಕೇಳಿದೆವು. ಅಫ್ಗಾನಿಸ್ತಾನಕ್ಕೆ ಹೋಗುವ ಹಾದಿಯಲ್ಲಿ ತಾವು ಲಾಹೋರ್‌ನಲ್ಲಿ ಇಳಿದ ಸಂದರ್ಭವನ್ನು ಮೋದಿ ವಿವರಿಸಿದರು’ ಎಂದು ಸಂಸದರು ತಿಳಿಸಿದ್ದಾರೆ. ಕೋವಿಡ್ ಬಿಕ್ಕಟ್ಟನ್ನು ಎದುರಿಸಲು ತಮಗೆ ಗುಜರಾತ್‌ ಮುಖ್ಯಮಂತ್ರಿಯಾಗಿ 15 ವರ್ಷ ಅಧಿಕಾರ ನಡೆಸಿದ್ದ ಅನುಭವ ನೆರವಿಗೆ ಬಂತು ಎಂದು ಪ್ರಧಾನಿ ಮೋದಿ ಭೋಜನ ಕೂಟದ ವೇಳೆ ಸಂಸದರಿಗೆ ತಿಳಿಸಿದರು. ವಿದೇಶ ಪ್ರವಾಸ, ಪ್ರಧಾನಿಗಳ ದಿನಚರಿ ಮುಂತಾದ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆದಿದ್ದಾಗಿ ಸಂಸದರು ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.