ಕಂದಕಕ್ಕೆ ಉರುಳಿದ ಎಸ್‌ಯುವಿ: 15 ದಿನದ ಮಗು ಸೇರಿ ಮೂವರ ಸಾವು; 12 ಮಂದಿಗೆ ಗಾಯ ಶ್ರೀನಗರ: ಎಸ್‌ಯುವಿ ಕಾರು ಕಂದಕಕ್ಕೆ ಉರುಳಿ ಮಗು ಸೇರಿದಂತೆ ಮೂವರು ಮೃತಪಟ್ಟಿದ್ದು, ಹನ್ನೆರಡು ಮಂದಿ ಗಾಯಗೊಂಡಿರುವ ಘಟನೆ ಕಾಶ್ಮೀರದ ಕಿಶ್ತಾವರ್‌ ಜಿಲ್ಲೆಯಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರನ್ನು ತುಂಬಿದ್ದ ಕಾರು ಹಾಕೂ ಹಳ್ಳಿಯ ಗುಲಾಬ್‌ಗರ್‌ –ಮಚೈಲ್‌ ರಸ್ತೆಯಲ್ಲಿ ಅಪಘಾತಕ್ಕೀಡಾಗಿದೆ ಎಂದು ಅವರು ಹೇಳಿದ್ದಾರೆ. ಅವಘಡದಲ್ಲಿ ದಯಾ ಕೃಷ್ಣ (36), ಸಬಿತ ದೇವಿ (30) ಮತ್ತು 15 ದಿನದ ಶಿಶು ಸೇರಿದಂತೆ ಮೂರು ಮಂದಿ ಮೃತಪಟ್ಟಿದ್ದಾರೆ. ಹನ್ನೆರಡು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನಾಲ್ವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಮ್ಮುವಿನ ಸರ್ಕಾರಿ ವೈದ್ಯಕೀಯ ಕಾಲೇಜಿ (ಜಿಎಮ್‌ಸಿ)ಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ಕುಟುಂಬದವರಿಗೆ ₹50 ಸಾವಿರ ಹಾಗೂ ಗಂಭೀರವಾಗಿ ಗಾಯಗೊಂಡವರಿಗೆ ₹10 ಸಾವಿರ ಎಕ್ಸ್‌ ಗ್ರೇಷಿಯಾ ಪರಿಹಾರ ನಿಧಿಯನ್ನು ಜಿಲ್ಲಾ ರೆಡ್‌ ಕ್ರಾಸ್‌ ಫಂಡ್‌ ಅಡಿಯಲ್ಲಿ ಕಿಶ್ತಾವರ್‌ ಜಿಲ್ಲಾಡಳಿತ ಘೋಷಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.