ಹಾದಿಗೆ ಮುಳ್ಳು ಇಡುವುದು ಅಮೃತಕಾಲವೇ ಅಥವಾ ಅನ್ಯಾಯಕಾಲವೇ?: ಪ್ರಿಯಾಂಕಾ ನವದೆಹಲಿ: ರೈತರು ಕರೆ ನೀಡಿರುವ ‘ದೆಹಲಿ ಚಲೊ’ ರ‍್ಯಾಲಿ ತಡೆಯುವ ಉದ್ದೇಶದಿಂದ ರಾಷ್ಟ್ರ ರಾಜಧಾನಿಯ ಗಡಿ ಸಮೀಪದ ಕೆಲವು ರಸ್ತೆಗಳಿಗೆ ಅಡ್ಡಲಾಗಿ ಬ್ಯಾರಿಕೇಡ್‌ ಮತ್ತು ಮೊಳೆಗಳ ಪಟ್ಟಿ ಹಾಕಲಾಗಿದೆ ಎಂಬ ವರದಿಗಳ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ರಸ್ತೆಗೆ ಅಡ್ಡಲಾಗಿ ಮೊಳಗಳ ಪಟ್ಟಿ ಹಾಕಿರುವ ವಿಡಿಯೊವನ್ನು ‘ಎಕ್ಸ್‌’ನಲ್ಲಿ ಹಂಚಿಕೊಂಡಿರುವ ಅವರು, ಅನ್ನದಾತರನ್ನು ಹೀಗೇಕೆ ತುಚ್ಛವಾಗಿ ಕಾಣುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ‘ರೈತರ ಹಾದಿಗೆ ಅಡ್ಡಲಾಗಿ ಮುಳ್ಳು, ಬ್ಯಾರಿಕೇಡ್ ಇಡುವುದು ಅಮೃತಕಾಲವೇ ಅಥವಾ ಅನ್ಯಾಯಕಾಲವೇ? ಇಂಥ ಅಸೂಕ್ಷ್ಮ ಮತ್ತು ರೈತ ವಿರೋಧಿ ಮನಸ್ಥಿತಿಯೇ 750 ರೈತರ ಜೀವವನ್ನು ಬಲಿಪಡೆದಿದೆ. ರೈತರು ತಮ್ಮ ಧ್ವನಿ ಎತ್ತಲು ಅವಕಾಶ ನೀಡದಷ್ಟು ರೈತ ವಿರೋಧಿ ಸರ್ಕಾರ ಇದಾಗಿದೆ’ ಎಂದು ಅವರು ಹರಿಹಾಯ್ದಿದ್ದಾರೆ. ‘ರೈತರಿಗೆ ನೀಡಿದ್ದ ಭರವಸೆಯನ್ನು ಸರ್ಕಾರ ಈಡೇರಿಸಿಲ್ಲ. ಕನಿಷ್ಠ ಬೆಂಬಲ ಬೆಲೆ ಕಾನೂನು ರೂಪಿಸಿಲ್ಲ, ರೈತರ ಆದಾಯವೂ ದ್ವಿಗುಣವಾಗಿಲ್ಲ. ರೈತರು ತಮ್ಮ ಅಹವಾಲುಗಳನ್ನು ತಮ್ಮದೇ ದೇಶದ ಸರ್ಕಾರದ ಬಳಿಗೆ ಕೊಂಡೊಯ್ಯಬಾರದು ಎಂದಾದರೆ ಇನ್ಯಾರ ಬಳಿ ಕೊಂಡೊಯ್ಯಲು ಸಾಧ್ಯ’ ಎಂದು ಪ್ರಶ್ನಿಸಿದ್ದಾರೆ. ‘ಪ್ರಧಾನಮಂತ್ರಿಗಳೇ! ರೈತರೊಂದಿಗೆ ಇಂಥ ವರ್ತನೆ ಏಕೆ? ಅವರಿಗೆ ನೀಡಿದ್ದ ಭರವಸೆಯನ್ನು ಏಕೆ ಈಡೇರಿಸಿಲ್ಲ’ ಎಂದು ಕೇಳಿದ್ದಾರೆ. ಉತ್ತರ ಪ್ರದೇಶ, ಹರಿಯಾಣ ಮತ್ತು ಪಂಜಾಬ್‌ನ ಅಸಂಖ್ಯಾತ ರೈತರು ಮಂಗಳವಾರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೆಹಲಿಯತ್ತ ರ‍್ಯಾಲಿ ನಡೆಸಲಿದ್ದಾರೆ. ಈ ರ‍್ಯಾಲಿ ಹಿನ್ನೆಲೆಯಲ್ಲಿ ದೆಹಲಿಯ ಈಶಾನ್ಯ ಜಿಲ್ಲೆಗಳಲ್ಲಿ ಸಿಆರ್‌ಪಿಸಿಯ ಸೆಕ್ಷನ್ 144ರ ಅಡಿಯಲ್ಲಿ ನಿಷೇದಾಜ್ಞೆ ಜಾರಿ ಮಾಡಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.