ಮಹಾರಾಷ್ಟ್ರ | ಪಕ್ಷ ತೊರೆದವರನ್ನು‘ದ್ರೋಹಿ’ಗಳು ಎಂದು ಕರೆದ ಕಾಂಗ್ರೆಸ್‌ ನವದೆಹಲಿ: ಲೋಕಸಭಾ ಚುನಾವಣೆಗೂ ಮುನ್ನ ಮಹಾರಾಷ್ಟ್ರ ಕಾಂಗ್ರೆಸ್‌ನಲ್ಲಿ ಪಕ್ಷ ತೊರೆಯುವವರ ಸಂಖ್ಯೆ ಹೆಚ್ಚುತ್ತಿದ್ದು, ಮಿಲಿಂದ್‌ ದಿಯೋರ್‌, ಬಾಬಾ ಸಿದ್ದಿಕಿ ನಂತರ ಇದೀಗ ಮಾಜಿ ಮುಖ್ಯಮಂತ್ರಿ ಅಶೋಕ್‌ ಚೌಹಾಣ್‌ ಪಕ್ಷದಿಂದ ನಿರ್ಗಮಿಸಿದ್ದಾರೆ. ಪಕ್ಷದ ತೊರೆದವರನ್ನು ದ್ರೋಹಿಗಳು ಎಂದು ಕರೆದಿರುವ ಕಾಂಗ್ರೆಸ್‌, ಇಂತವರ ನಿರ್ಗಮನದಿಂದ ಉಳಿದವರಿಗೆ ಪಕ್ಷ ಸಂಘಟಿಸುವ ಅವಕಾಶ ಸಿಕ್ಕಿದಂತಾಗಿದೆ ಎಂದಿದೆ. ಚೌಹಾಣ್‌–ಸಿದ್ದಿಕಿ–ಮಿಲಿಂದ್‌ ಅವರ ಹೆಸರು ಉಲ್ಲೇಖಿಸದೆ ಎಕ್ಸ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್‌ ಹಿರಿಯ ನಾಯಕ ಜೈರಾಮ್ ರಮೇಶ್‌, ‘ತಮ್ಮ ಅರ್ಹತೆಗೂ ಮೀರಿದ ಸ್ಥಾನಗಳನ್ನು ನೀಡಿದ ರಾಜಕೀಯ ಪಕ್ಷವನ್ನು ಸ್ನೇಹಿತರು, ಸಹೋದ್ಯೋಗಿಗಳು ತೊರೆದಾಗ ನಿಜಕ್ಕೂ ದುಃಖವಾಗುತ್ತದೆ. ಆದರೆ ದುರ್ಬಲರಿಗೆ ಸೈದ್ಧಾಂತಿಕ ಬದ್ಧತೆ, ವೈಯಕ್ತಿಕ ನಿಷ್ಠೆಗಳಿಗಿಂತ ಬೇರೆ ವಿಷಯಗಳೇ ಹೆಚ್ಚು ಆಕರ್ಷಕವಾಗಿರುತ್ತದೆ’ ಎಂದರು. ‘ತಮ್ಮ ನಿರ್ಗಮನವು ಇತರರಿಗೆ ಹೊಸ ಅವಕಾಶಗಳನ್ನು ತೆರೆಯುತ್ತದೆ ಎಂಬುವುದು ಈ ದ್ರೋಹಿಗಳಿಗೆ ಅರ್ಥವಾಗುವುದಿಲ್ಲ’ ಎಂದು ಕಿಡಿಕಾರಿದ್ದಾರೆ. ಇಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಅವರಿಗೆ ಪತ್ರ ಬರೆದ ಅಶೋಕ್ ಚೌಹಾಣ್‌, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದರು. ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿರುವ ಅವರು, ವಿಧಾನಸಭೆ ಸ್ಪೀಕರ್ ರಾಹುಲ್‌ ನಾರ್ವೇಕರ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.