ಆಸ್ತಿ, ಸಂಪನ್ಮೂಲದ ಮೇಲೆ ಕೆಲ ಉದ್ಯಮಿಗಳ ಏಕಸ್ವಾಮ್ಯ– ಆತಂಕ: ರಾಹುಲ್‌ ಗಾಂಧಿ ಕೊರ್ಬಾ, ಛತ್ತೀಸಗಢ: ಬಿಜೆಪಿಯ ‘ಹಿಂದೂ ರಾಷ್ಟ್ರ’ ಪರಿಕಲ್ಪನೆಯ ವಿರುದ್ಧ ವಾಗ್ದಾಳಿಯನ್ನು ನಡೆಸಿರುವ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ, ದೇಶದ ಆಸ್ತಿ, ಸಂಪನ್ಮೂಲದ ಮೇಲೆ ಇಂದು ಕೆಲವೇ ಉದ್ಯಮಿಗಳು ಏಕಸ್ವಾಮ್ಯ ಹೊಂದುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಇಂದು ಬಡವರು, ನಿರ್ಲಕ್ಷ್ಯಿತರನ್ನು ದೋಚಲಾಗುತ್ತಿದೆ. ಈ ಬಗ್ಗೆ ಜಾಗೃತಿ ಮೂಡಬೇಕಾಗಿದೆ ಎಂದು ಹೇಳಿದರು. ‘ಭಾರತ್‌ ಜೋಡೊ ನ್ಯಾಯಯಾತ್ರೆ’ ಅಂಗವಾಗಿ ಅವರು ಇಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. ಜಾತಿಗಣತಿಯು ಅಗತ್ಯ ಎಂದು ಒತ್ತಿ ಹೇಳಿದ ಅವರು, ಭಾರತದ ಉನ್ನತ 200 ಕಂಪನಿಗಳ ಮೇಲ್‌ಸ್ತರದ ಸ್ಥಾನಗಳಲ್ಲಿ ಹಿಂದುಳಿದವರು, ದಲಿತರು, ಆದಿವಾಸಿಗಳು ಸೇರಿದಂತೆ ನಿರ್ಲಕ್ಷ್ಯಿತ ಸಮುದಾಯಗಳ ಅನುಪಸ್ಥಿತಿ ಕಾಡುತ್ತಿದೆ. ಇದು ಕೂಡಾ ದೇಶದ ಆಸ್ತಿ ಮೇಲಿನ ಏಕಸ್ವಾಮ್ಯಕ್ಕೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು. ಅಯೋಧ್ಯೆಯಲ್ಲಿನ ಬಾಲರಾಮ ಪ್ರತಿಷ್ಠಾಪನೆ ಕಾರ್ಯಕ್ರಮ ಉಲ್ಲೇಖಿಸಿದ ಅವರು, ‘ಅಲ್ಲಿಯೂ ತಾರತಮ್ಯವನ್ನು ಗಮನಿಸಬಹುದಾಗಿತ್ತು. ಅಂದಿನ ಕಾರ್ಯಕ್ರಮದಲ್ಲಿ ನೀವು ಬಡವರು, ಕಾರ್ಮಿಕರು, ನಿರುದ್ಯೋಗಿ ಯುವಜನರು, ಸಣ್ಣ ವ್ಯಾಪಾರಿಗಳನ್ನು ನೋಡಿದಿರಾ?. ನನಗೆ ಗೌತಮ್ ಅದಾನಿ, ಮುಖೇಶ್‌ ಅಂಬಾನಿ, ಅಮಿತಾಬ್‌ ಬಚ್ಚನ್, ಐಶ್ವರ್ಯ ರೈ, ಇತರೆ ಉದ್ಯಮಿಗಳು ಕಂಡರು. ಅವರೇ ದೊಡ್ಡ ಹೇಳಿಕೆ ಕೊಡುತ್ತಿದ್ದರು’ ಎಂದು ಹೇಳಿದರು. ಕಲ್ಯಾಣ ಕಾರ್ಯಕ್ರಮಗಳ ನೆಪದಲ್ಲಿ ಚೀನಾದ ಉತ್ಪನ್ನಗಳನ್ನು ಮಾರುವ ಮೂಲಕ ಅದಾನಿ ಮತ್ತು ಅಂಬಾನಿ ಅವರ ಕಾರ್ಪೊರೇಟ್‌ ಸಂಸ್ಥೆಗಳು ಲಾಭ ಮಾಡುತ್ತಿವೆ. ಇದು, ಆರ್ಥಿಕ ಅನ್ಯಾಯ ಎಂದು ಆರೋಪಿಸಿದರು. ಮಾಧ್ಯಮಗಳಲ್ಲೂ 24 ಗಂಟೆ ಮೋದಿ, ಅಂಬಾನಿ, ಅದಾನಿ, ರಾಮದೇವ್‌ ಬಾಬಾ ಅವರನ್ನೇ ತೋರಿಸಲಾಗುತ್ತಿದೆ. ನಾನು ಇಂತಹ ವಿಷಯ ಮಾತನಾಡುತ್ತೇನೆ ಎಂದೇ ನನ್ನನ್ನು ತೋರಿಸುತ್ತಿಲ್ಲ ಎಂದು ಹೇಳಿದರು. ಹಿಂದೆ ಜನರು ಮದ್ಯ, ಮಾದಕ ವಸ್ತು ವ್ಯಸನಿಗಳಾಗಿರುತ್ತಿದ್ದರು. ಇಂದು ಮೊಬೈಲ್‌ ಫೋನ್‌ ವ್ಯಸನಿಗಳಾಗುತ್ತಿದ್ದಾರೆ. 8–10 ಗಂಟೆ ಮೊಬೈಲ್‌ಗಳಲ್ಲಿ ಮುಳುಗಿದ್ದಾರೆ. ಇದು ಅಪಾಯಕಾರಿ. ಜನರು ಜಾಗೃತರಾಗಬೇಕು. ರಾಷ್ಟ್ರೀಯ ಸಂಪನ್ಮೂಲದಲ್ಲಿ ತಮ್ಮ ಹಕ್ಕುಗಳನ್ನು ಕೇಳಬೇಕು. ಇದು, ಸಮಾಜದಲ್ಲಿ ಬದಲಾವಣೆ ತರಲಿದೆ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.