ರಾಜ್ಯಪಾಲರನ್ನು ಗೋಡ್ಸೆ ಅನುಯಾಯಿ ಎಂದ ಸ್ಪೀಕರ್: ರಾಜಭವನ ಆರೋಪ ಚೆನ್ನೈ : ತಮಿಳುನಾಡಿನ ಸದನದಲ್ಲಿ ರಾಜ್ಯಪಾಲರ ಭಾಷಣಕ್ಕೂ ಮೊದಲು ಹಾಗೂ ಭಾಷಣದ ನಂತರದಲ್ಲಿ ರಾಷ್ಟ್ರಗೀತೆಗೆ ಸೂಕ್ತ ಗೌರವ ಸಲ್ಲಿಸಬೇಕು ಎಂದು ರಾಜ್ಯಪಾಲ ಆರ್.ಎನ್. ರವಿ ಅವರು ನೀಡಿದ್ದ ಸಲಹೆಯನ್ನು ಡಿಎಂಕೆ ನೇತೃತ್ವದ ಸರ್ಕಾರವು ಅಲಕ್ಷಿಸಿದೆ ಎಂದು ತಮಿಳುನಾಡಿನ ರಾಜಭವನ ದೂರಿದೆ. ತಮಿಳುನಾಡು ವಿಧಾನಸಭೆಯ ಸ್ಪೀಕರ್ ಎಂ. ಅಪ್ಪಾವು ಅವರು ರಾ‌ಜ್ಯಪಾಲರನ್ನು ಗುರಿಯಾಗಿಸಿಕೊಂಡು ನಿಂದನಾತ್ಮಕ ಮಾತು ಆಡಿದರು. ರಾಜ್ಯಪಾಲರನ್ನು ‘ನಾಥೂರಾಮ್‌ ಗೋಡ್ಸೆಯ ಅನುಯಾಯಿ’ ಎಂದು ಕರೆದರು. ಹೀಗಾಗಿ, ತಾವು ಹೊಂದಿರುವ ಸ್ಥಾನದ ಗೌರವವನ್ನು ಗಮನದಲ್ಲಿ ಇರಿಸಿಕೊಂಡು ರಾಜ್ಯಪಾಲರು ಸದನದಿಂದ ನಿರ್ಗಮಿಸಿದರು. ಅಪ್ಪಾವು ಅವರ ನಡತೆಯು ಅವರ ಸ್ಥಾನಕ್ಕೆ ತಕ್ಕುದಾಗಿರಲಿಲ್ಲ, ಅದು ಸ್ಪೀಕರ್ ಸ್ಥಾನದ ಹಾಗೂ ಸದನದ ಘನತೆಯನ್ನು ಕುಗ್ಗಿಸಿತು ಎಂದು ರಾಜಭವನ ಹೇಳಿದೆ. ರಾಜ್ಯಪಾಲರಿಗೆ ಸಿದ್ಧಪಡಿಸಿ ಕೊಟ್ಟಿದ್ದ ಭಾಷಣದಲ್ಲಿ ತಪ್ಪುದಾರಿಗೆ ಎಳೆಯುವ ಸಂಗತಿಗಳು ಇದ್ದವು. ಅವುಗಳನ್ನು ಓದಿದ್ದರೆ ಸಂವಿಧಾನವನ್ನು ನಗೆಪಾಟಲಿಗೆ ಈಡುಮಾಡಿದಂತೆ ಆಗುತ್ತಿತ್ತು ಎಂದು ರಾಜ್ಯಪಾಲ ರವಿ ಅವರ ಕಚೇರಿಯು ಹೇಳಿದೆ. ರಾಜ್ಯಪಾಲರ ಭಾಷಣದ ಕರಡು ಪ್ರತಿಯು ಶುಕ್ರವಾರ ಕೈಸೇರಿತು. ಅದರಲ್ಲಿ ಹಲವು ಸತ್ಯಕ್ಕೆ ದೂರವಾದ ಹಲವು ಮಾತುಗಳು ಇದ್ದವು. ಹೀಗಾಗಿ ರವಿ ಅವರು ಅದನ್ನು ಹಿಂದಿರುಗಿಸಿದರು. ರಾಜ್ಯಪಾಲರ ಭಾಷಣಕ್ಕೂ ಮೊದಲು ಹಾಗೂ ಭಾಷಣದ ನಂತರ ರಾಷ್ಟ್ರಗೀತೆಯನ್ನು ನುಡಿಸುವಂತೆ ಸೂಚಿಸಿದರು. ಈ ವಿಚಾರವಾಗಿ ರಾಜ್ಯಪಾಲರು ಮುಖ್ಯಮಂತ್ರಿ ಮತ್ತು ಸ್ಪೀಕರ್ ಅವರಿಗೆ ಪತ್ರ ಬರೆದಿದ್ದರು. ಆದರೆ ಅವುಗಳನ್ನು ರಾಜ್ಯ ಸರ್ಕಾರವು ಅಲಕ್ಷಿಸಿತು ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ. ರಾಜ್ಯಪಾಲರ ಭಾಷಣವು ಸರ್ಕಾರದ ಸಾಧನೆಗಳನ್ನು, ನೀತಿಗಳನ್ನು ಮತ್ತು ಯೋಜನೆಗಳನ್ನು ಹೇಳಬೇಕು. ಆ ಭಾಷಣವು ತಪ್ಪು ದಾರಿಗೆ ಎಳೆಯುವ ಹೇಳಿಕೆಗಳನ್ನು ನೀಡಲು, ಪಕ್ಷಪಾತಿಯಾದ ರಾಜಕೀಯ ನಿಲುವುಗಳನ್ನು ವ್ಯಕ್ತ‍ಪಡಿಸಿಲು ವೇದಿಕೆ ಆಗಬಾರದು ಎಂದು ಹೇಳಿಕೆಯು ಉಲ್ಲೇಖಿಸಿದೆ. ಸರ್ಕಾರವು ಸಿದ್ಧಪಡಿಸಿದ ರಾಜ್ಯಪಾಲರ ಭಾಷಣದ ಪ್ರತಿಯನ್ನು ಸ್ಪೀಕರ್ ಅಪ್ಪಾವು ಓದಿದರು... ಅವರು ಅದನ್ನು ಪೂರ್ಣಗೊಳಿಸಿದ ನಂತರ ರಾಜ್ಯಪಾಲರು ರಾಷ್ಟ್ರಗೀತೆಗಾಗಿ ಎದ್ದುನಿಂತರು. ಆದರೆ ಸ್ಪೀಕರ್ ಅವರು ರಾಜ್ಯಪಾಲರನ್ನು ನಿಂದಿಸಲು ಆರಂಭಿಸಿದರು. ರಾಜ್ಯಪಾಲರನ್ನು ನಾಥೂರಾಮ್‌ ಗೋಡ್ಸೆಯ ಹಿಂಬಾಲಕ ಎಂದು ಜರಿದರು. ಸ್ಪೀಕರ್‌ ಅಪ್ಪಾವು ಅವರು ನಿಂದನೆಯನ್ನು ಮುಂದುವರಿಸಿದರೂ, ಸದನ ಹಾಗೂ ತಾವು ಹೊಂದಿರುವ ಸ್ಥಾನದ ಘನತೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ರವಿ ಅವರು ಸದನದಿಂದ ನಿರ್ಗಮಿಸಿದರು ಎಂದು ತಿಳಿಸಲಾಗಿದೆ. ಸಾಂವಿಧಾನಿಕ ಸಭ್ಯತೆಗೆ ಗೌರವ ನೀಡಿ ರವಿ ಅವರು, ತಪ್ಪು ದಾರಿಗೆ ಎಳೆಯುವ ಅಂಶಗಳು ಇರುವ ಭಾಷಣವನ್ನು ಓದಲು ನಿರಾಕರಿಸಿದರು ಎಂದು ವಿವರಿಸಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.