ಎಂಎಸ್‌ಪಿಗೆ ಕಾನೂನು ಖಾತ್ರಿ: ಕಾಂಗ್ರೆಸ್‌ ಭರವಸೆ ನವದೆಹಲಿ: ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬಂದಲ್ಲಿ, ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನು ಖಾತ್ರಿ ನೀಡಬೇಕು ಎಂಬ ರೈತರ ಪ್ರಮುಖ ಬೇಡಿಕೆಯನ್ನು ಈಡೇರಿಸುವುದಾಗಿ ಕಾಂಗ್ರೆಸ್‌ ಮಂಗಳವಾರ ಹೇಳಿದೆ. ‘ಪಕ್ಷ ನೀಡಿರುವ ಈ ಭರವಸೆಯು ಕ್ರಾಂತಿಕಾರಿ’ ಎಂದು ಬಣ್ಣಿಸಿರುವ ಕಾಂಗ್ರೆಸ್‌, ‘ಪಕ್ಷದ ಪರಿಕಲ್ಪನೆಯು ದೇಶದ ಜನರ ಬೆಂಬಲದಿಂದಾಗಿ ಶೀಘ್ರವೇ ಕಾರ್ಯರೂಪಕ್ಕೆ ಬರಲಿದೆ’ ಎಂದೂ ವಿಶ್ವಾಸ ವ್ಯಕ್ತಪಡಿಸಿದೆ. ಈ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಪಕ್ಷದ ನಾಯಕ ರಾಹುಲ್‌ ಗಾಂಧಿ, ‘ರೈತಾಪಿ ಸಹೋದರರೇ, ಇಂದು ಐತಿಹಾಸಿಕ ದಿನ! ಸ್ವಾಮಿನಾಥನ್‌ ಆಯೋಗದ ಶಿಫಾರಸಿನಂತೆ, ಬೆಳೆಗಳಿಗೆ ನೀಡುವ ಎಂಎಸ್‌ಪಿಗೆ ಕಾನೂನು ಖಾತ್ರಿ ನೀಡಲು ಕಾಂಗ್ರೆಸ್‌ ತೀರ್ಮಾನಿಸಿದೆ’ ಎಂದು ಹೇಳಿದ್ದಾರೆ. ‘ಪಕ್ಷ ಕೈಗೊಂಡಿರುವ ಈ ನಿರ್ಧಾರದಿಂದ 15 ಕೋಟಿ ರೈತ ಕುಟುಂಬಗಳ ಅಭಿವೃದ್ಧಿಯಾಗಿ, ಅವರ ಜೀವನವೇ ಬದಲಾಗುವುದು. ರೈತರಿಗೆ ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಕಾಂಗ್ರೆಸ್‌ ನೀಡುವ ಮೊದಲ ಗ್ಯಾರಂಟಿ ಇದು’ ಎಂದು ಅವರು ಹಿಂದಿಯಲ್ಲಿ ಪೋಸ್ಟ್‌ ಮಾಡಿದ್ದಾರೆ. ‘ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ನೇರವಾಗಿ ಮಾತುಕತೆ ನಡೆಸಿ, ಅವರಿಗೆ ನ್ಯಾಯ ಒದಗಿಸಿ ಕೊಡಬೇಕು’ ಎಂದು ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೂ ಈ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದು, ‘ತಾವು ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆ ಪಡೆಯುವುದು ರೈತರ ಹಕ್ಕು’ ಎಂದಿದ್ದಾರೆ. ‘ರೈತರು ಗೌರವಯುತವಾದ ಆದಾಯ ಬಯಸುತ್ತಾರೆಯೇ ಹೊರತು, ಅಶ್ರುವಾಯು ಪ್ರಯೋಗ, ಗುಂಡೇಟು, ಹಿಂಸಾಚಾರವನ್ನಲ್ಲ. ನ್ಯಾಯಯುತ ಬೇಡಿಕೆಗಳಿಗೆ ಹೋರಾಡುತ್ತಿರುವ ರೈತರೊಂದಿಗೆ ಕಾಂಗ್ರೆಸ್‌ ನಿಲ್ಲುತ್ತದೆ’ ಎಂದೂ ಹೇಳಿದ್ದಾರೆ. ಛತ್ತೀಸಗಢದ ಅಂಬಿಕಾಪುರದಲ್ಲಿ ಭಾರತ ಜೋಡೊ ನ್ಯಾಯ ಯಾತ್ರೆ ಅಂಗವಾಗಿ ನಡೆದ ಸಭೆಯಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಮುಂಬರುವ ಲೋಕಸಭಾ ಚುನಾವಣೆಗಳ ನಂತರ ಕೇಂದ್ರದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ, ಎಂಎಸ್‌ಪಿಗೆ ಕಾನೂನು ಖಾತ್ರಿ ನೀಡಲಿದೆ’ ಎಂದು ಹೇಳಿದ್ದಾರೆ. ಪಕ್ಷದ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಮಾತನಾಡಿ, ‘ಇದು ಆರಂಭ ಮಾತ್ರ. ಸದ್ಯ, ಹರಿಯಾಣ ಮತ್ತು ಪಂಜಾಬ್‌ ರೈತರು ಮಾತ್ರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಶೀಘ್ರವೇ, ದೇಶದ ಎಲ್ಲ ಭಾಗಗಳ ರೈತರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವರು’ ಎಂದು ಎಚ್ಚರಿಕೆ ನೀಡಿದರು. ‘ಸರ್ಕಾರದ ಮೇಲೆ ಶತ್ರುಗಳೇನಾದರೂ ದಾಳಿ ಮಾಡಿದ್ದಾರೆಯೇ? ಸರ್ಕಾರ ಯಾವುದಕ್ಕೆ ಹೆದರಿದೆ’ ಎಂದು ಅವರು ಪ್ರಶ್ನಿಸಿದ್ದಾರೆ. ಅವಸರದಲ್ಲಿ ಕಾನೂನು ರಚನೆ ಸಾಧ್ಯವಿಲ್ಲ: ಮುಂಡಾ ‘ಎಲ್ಲ ಭಾಗೀದಾರರೊಂದಿಗೆ ಮಾತುಕತೆ ನಡೆಸುವುದು ಅಗತ್ಯ. ಹೀಗಾಗಿ ಬೆಳಿಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತ್ರಿಪಡಿಸುವ ಕಾನೂನನ್ನು ಅವಸರದಲ್ಲಿ ರಚಿಸಲು ಸಾಧ್ಯ ಇಲ್ಲ’ ಎಂದು ಕೇಂದ್ರ ಕೃಷಿ ಸಚಿವ ಅರ್ಜುನ್‌ ಮುಂಡಾ ಮಂಗಳವಾರ ಹೇಳಿದ್ದಾರೆ. ‘ಪ್ರತಿಭಟನೆ ನಡೆಸುತ್ತಿರುವ ರೈತರ ಗುಂಪುಗಳು ಈ ವಿಚಾರವಾಗಿ ಸರ್ಕಾರದೊಂದಿಗೆ ರಚನಾತ್ಮಕ ಚರ್ಚೆ ನಡೆಸಬೇಕು. ಅಷ್ಟಕ್ಕೂ ಕೃಷಿಯು ರಾಜ್ಯಗಳಿಗೆ ಸಂಬಂಧಪಟ್ಟ ವಿಷಯ’ ಎಂದು ಹೇಳಿದ್ದಾರೆ. ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಅವರು ‘ಕೆಲ ಪಟ್ಟಹಿತಾಸಕ್ತಿಗಳು ತಮ್ಮ ರಾಜಕೀಯ ಲಾಭಕ್ಕಾಗಿ ಈ ಪ್ರತಿಭಟನೆಗೆ ಮಸಿ ಬಳಿಯಲು ಯತ್ನಿಸುವ ಬಗ್ಗೆ ರೈತರಲ್ಲಿ ಅರಿವು ಮತ್ತು ಜಾಗ್ರತೆ ಅಗತ್ಯ’ ಎಂದು ಹೇಳಿದ್ದಾರೆ. ‘ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಎರಡು ಸುತ್ತುಗಳ ಮಾತುಕತೆ ನಡೆಸಲಾಗಿದ್ದು ಅವರ ಹಲವು ಬೇಡಿಕೆಗಳನ್ನು ಒಪ್ಪಿಕೊಂಡಿದ್ದೇವೆ. ಆದರೆ ಕೆಲ ವಿಷಯಗಳ ಕುರಿತು ಸಹಮತ ಮೂಡದ ಕಾರಣ ಮಾತುಕತೆ ನಡೆಯುತ್ತಿದೆ’ ಎಂದಿದ್ದಾರೆ. ‘ರೈತರ ಕೆಲ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದ್ದು ಅವುಗಳನ್ನು ಆಡಳಿತಾತ್ಮಕ ಹಂತದಲ್ಲಿಯೇ ಈಡೇರಿಸಬಹುದಾಗಿದೆ. ಎಂಎಸ್‌ಪಿಗೆ ಕಾನೂನು ಖಾತ್ರಿ ನೀಡಬೇಕು ಎಂಬ ಬೇಡಿಕೆಯು ನೀತಿ ನಿರೂಪಣೆಗೆ ಸಂಬಂಧಪಟ್ಟಿರುವ ಕಾರಣ ಸಮಗ್ರವಾಗಿ ಪರಿಶೀಲನೆ ಅಗತ್ಯ. ರಾಜ್ಯ ಸರ್ಕಾರಗಳು ಸೇರಿದಂತೆ ಸಂಬಂಧಿಸಿದ ಭಾಗೀದಾರರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ಸಚಿವ ಮುಂಡಾ ವಿವರಿಸಿದ್ದಾರೆ. ‘ರೈತರು ಸೇರಿದಂತೆ ಎಲ್ಲ ಭಾಗೀದಾರರ ಅಭಿವೃದ್ಧಿಗಾಗಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ದೃಢವಾದ ಕೆಲಸ ಮಾಡುತ್ತದೆ. ಆದರೆ ಮುಂದಿನ ದಿನಗಳಲ್ಲಿ ವ್ಯರ್ಥ ಪ್ರಯತ್ನವೆನಿಸುವಂತಹ ಯಾವುದೇ ಘೋಷಣೆಗಳನ್ನು ಅವಸರದಲ್ಲಿ ಮಾಡುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ‘ಕೇಂದ್ರ ಸರ್ಕಾರ ಕೆಲ ಘೋಷಣೆಗಳನ್ನು ಮಾಡಬೇಕು ಎಂಬುದು ರೈತರ ಬಯಕೆ. ಆದರೆ ಸರ್ಕಾರ ಇರುವುದು ಕೆಲಸ ಮಾಡುವುದಕ್ಕಾಗಿಯೇ ಹೊರತು ಘೋಷಣೆಗಳನ್ನು ಮಾಡುವುದಕ್ಕಲ್ಲ. ಪರಿಪಕ್ವ ಚರ್ಚೆ ನಂತರ ಘೋಷಣೆ ಮಾಡಲಾಗುತ್ತದೆ. ಇಂತಹ ಪರಿಪಕ್ವ ಚರ್ಚೆ ನಡೆಸುವಾಗ ಪ್ರತಿಯೊಬ್ಬ ಭಾಗೀದಾರನ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ’ ಎಂದೂ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.