| ಬಿಎಸ್‌ಪಿ ಸಂಸದ ರಿತೇಶ್ ಪಾಂಡೆ ಬಿಜೆಪಿಗೆ ಸೇರ್ಪಡೆ ಲಖನೌ/ನವದೆಹಲಿ: ಉತ್ತರ ಪ್ರದೇಶದ ಅಂಬೇಡ್ಕರ್‌ ನಗರ ಲೋಕಸಭಾ ಕ್ಷೇತ್ರದ ಬಿಎಸ್‌ಪಿ ಸಂಸದ ರಿತೇಶ್‌ ಪಾಂಡೆ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಭಾನುವಾರ ರಾಜೀನಾಮೆ ಸಲ್ಲಿಸಿದರು. ಕೆಲವೇ ಗಂಟೆಗಳಲ್ಲಿ ಅವರು ದೆಹಲಿಯಲ್ಲಿ ಬಿಜೆಪಿ ಸೇರ್ಪಡೆಯಾದರು. ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಅವರಿಗೆ ಬರೆದಿರುವ ರಾಜೀನಾಮೆ ಪತ್ರದಲ್ಲಿ ಪಾಂಡೆ ಅವರು, ‘ದೀರ್ಘಕಾಲದಿಂದ ಪಕ್ಷದ ಸಭೆಗಳಿಗೆ ನನ್ನನ್ನು ಕರೆದಿಲ್ಲ. ಅಲ್ಲದೆ ಪಕ್ಷದ ನಾಯಕತ್ವವೂ ನನ್ನೊಂದಿಗೆ ಮಾತುಕತೆ ನಡೆಸಿಲ್ಲ. ಹೀಗಿರುವಾಗ ಪಕ್ಷಕ್ಕೆ ನನ್ನ ಸೇವೆ ಅಗತ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದೇನೆ’ ಎಂದು ಉಲ್ಲೇಖಿಸಿದ್ದಾರೆ. ಅವರು ತಮ್ಮ ರಾಜೀನಾಮೆ ಪತ್ರವನ್ನು ‘ಎಕ್ಸ್‌’ನಲ್ಲೂ ಹಂಚಿಕೊಂಡಿದ್ದಾರೆ. ‘ನಿಮ್ಮನ್ನು (ಮಾಯಾವತಿ) ಮತ್ತು ಪಕ್ಷದ ಹಿರಿಯ ನಾಯಕರನ್ನು ಸಂಪರ್ಕಿಸಲು ಸಾಕಷ್ಟು ಪ್ರಯತ್ನಿಸಿದೆ. ಆದರೆ ಅದು ಫಲಿಸಲಿಲ್ಲ. ಹೀಗಾಗಿ ಪಕ್ಷಕ್ಕೆ ನನ್ನ ಇರುವಿಕೆಯ ಬಗ್ಗೆಯಾಗಲಿ, ನನ್ನ ಸೇವೆಯಾಗಲಿ ಅಗತ್ಯವಿಲ್ಲ ಎಂದು ನಾನು ತೀರ್ಮಾನಕ್ಕೆ ಬಂದಿದ್ದೇನೆ’ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ. ‘ಈ ಅವಧಿಯಲ್ಲಿ ನಾನು ನನ್ನ ಕ್ಷೇತ್ರದ ಕೆಲಸಗಳಲ್ಲಿ ತೊಡಗಿಕೊಂಡಿದ್ದೇನೆ. ಅಲ್ಲದೆ ಅನ್ಯ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರನ್ನೂ ಸಂಪರ್ಕಿಸಿದ್ದೇನೆ’ ಎಂದು ಅವರು ತಿಳಿಸಿದ್ದಾರೆ. ‘ಪಕ್ಷದ ಜತೆಗಿನ ಸಂಬಂಧ ಕಡಿದುಕೊಳ್ಳುವುದು ಭಾವನಾತ್ಮಕವಾಗಿ ಕಠಿಣ ನಿರ್ಧಾರ. ಆದರೆ ನನಗೆ ಬೇರೆ ಆಯ್ಕೆ ಇಲ್ಲ. ಈ ರಾಜೀನಾಮೆಯನ್ನು ಅಂಗೀಕರಿಸಿ’ ಎಂದು ಅವರು ಕೋರಿದ್ದಾರೆ. ರಾಜೀನಾಮೆ ಸಲ್ಲಿಸಿದ ಕೆಲ ಗಂಟೆಗಳ ಬಳಿಕ ಪಾಂಡೆ ಅವರು, ಉತ್ತರ ಪ್ರದೇಶದ ಬಿಜೆಪಿ ಉಸ್ತುವಾರಿ ಬೈಜಯಂತ್‌ ಜಯ ಪಾಂಡಾ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್‌ ಚುಗ್‌, ಉತ್ತರ ಪ್ರದೇಶದ ಘಟಕದ ಅಧ್ಯಕ್ಷ ಭೂಪೇಂದ್ರ ಸಿಂಗ್‌, ಮಾಧ್ಯಮ ಉಸ್ತುವಾರಿ ಅನಿಲ್ ಬಲೂನಿ ಮತ್ತು ಇತರ ನಾಯಕರ ಸಮ್ಮುಖದಲ್ಲಿ ಬಿಜೆಪಿ ಸೇರಿದರು. ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಬ್ರಜೇಶ್‌ ಪಾಠಕ್‌ ಅವರೂ ಉಪಸ್ಥಿತರಿದ್ದರು. ‘ಬಹಳ ಪ್ರೀತಿ ಮತ್ತು ಗೌರವದಿಂದ ಬಿಜೆಪಿ ನನ್ನನ್ನು ಬರಮಾಡಿಕೊಂಡಿದೆ. ದೇಶದ ಸರ್ವತೋಮುಖ ಅಭಿವೃದ್ಧಿಯನ್ನು ಕಂಡು ಮತ್ತು ದೇಶವನ್ನು ಅಭಿವೃದ್ಧಿ ದೇಶವಾಗಿಸುವ ಪ್ರಧಾನಿಯವರ ಪ್ರಯತ್ನಕ್ಕೆ ಕೊಡುಗೆ ಕೊಡುವುದಕ್ಕಾಗಿ ಬಿಜೆಪಿ ಸೇರಿದ್ದೇನೆ’ ಎಂದು ಪಾಂಡೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ‘ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದೆ. ಇದನ್ನು ಸಾಧಿಸಲು ನಾನೂ ಶ್ರಮಿಸುತ್ತೇನೆ’ ಎಂದು ಅವರು ಹೇಳಿದರು. . . , . ../ . , . ../qgEad7nIzk ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.