ಸಂದೇಶ್‌ಖಾಲಿಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿಯೋಗ ‌ಭೇಟಿ ಕೋಲ್ಕತ್ತ: ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಾಲಿಯಲ್ಲಿ ಮಕ್ಕಳ ಮೇಲೆ ದೌರ್ಜನ್ಯ ನಡೆದಿದೆ ಎಂ‌ಬ ದೂರುಗಳು ಬಂದಿರುವ ಕಾರಣ ಪಶ್ಚಿಮ ಬಂಗಾಳದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (ಡಬ್ಲ್ಯುಬಿಸಿಪಿಸಿಆರ್‌) ಆರು ಮಂದಿ ಸದಸ್ಯರ ನಿಯೋಗವು ಶನಿವಾರ ಅಲ್ಲಿಗೆ ಭೇಟಿ ನೀಡಿದೆ. ದುಷ್ಕರ್ಮಿಗಳು ಏಳು ತಿಂಗಳ‌ ಹಸುಳೆಯನ್ನು ತಾಯಿಯ ಮಡಿಲಿನಿಂದ ಎಳೆದು ದೂರ ಎಸೆದಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದರು. ಆಯೋಗದ ಅಧ್ಯಕ್ಷೆ ತೂಲಿಕಾ ದಾಸ್‌ ಅವರ ನೇತೃತ್ವದಲ್ಲಿ ನಿಯೋಗವು ಸಂದೇಶ್‌ಖಾಲಿಗೆ ಭೇಟಿ ನೀಡಿದೆ. ‘ಸಂದೇಶ್‌ಖಾಲಿಗೆ ಸ್ವಯಂಪ್ರೇರಿತವಾಗಿ ಭೇಟಿ ನೀಡಿದ್ದೇವೆ. ದೌರ್ಜನ್ಯ ಎಸಗಲಾಗಿದೆ ಎನ್ನಲಾದ ಮಗುವಿನ ತಾಯಿಯ ಜೊತೆಗೆ ಮಾತನಾಡಿದ್ದೇ‌ವೆ. ಅವರಿಗೆ ಅಗತ್ಯವಿರುವ ವೈದ್ಯಕೀಯ ಸಹಾಯ, ಆಹಾರ ಮತ್ತು ರಕ್ಷಣೆಯನ್ನು ಒದಗಿಸಿದ್ದೇವೆ’ ಎಂದು ತೂಲಿಕಾ ದಾಸ್‌ ಸುದ್ದಿಗಾರರಿಗೆ ತಿಳಿಸಿದರು. ಟಿಎಂಸಿ ನಾಯಕ ಶಹಜಹಾನ್‌ ಶೇಖ್‌ ಹಾಗೂ ಬೆಂಬಲಿಗರು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಇಲ್ಲಿನ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.