ಬಿಹಾರ | ಆರ್‌ಜೆಡಿಯಲ್ಲಿ ಸಚಿವರಾಗಿದ್ದವರ ಅಕ್ರಮಗಳ ತನಿಖೆ- ನಿತೀಶ್‌ ಕುಮಾರ್‌ ಪಟ್ನಾ(ಪಿಟಿಐ): ಆರ್‌ಜೆಡಿ ಜತೆ ಜೆಡಿಯು ಅಧಿಕಾರ ಹಂಚಿಕೊಂಡಿದ್ದಾಗ ನಡೆದಿರುವ ಹಲವು ಅಕ್ರಮಗಳ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಶನಿವಾರ ತಿಳಿಸಿದರು. ಹಿಂದಿನ ಮಹಾಘಟಬಂಧನ್‌ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ತೇಜಸ್ವಿ ಯಾದವ್‌ ಮತ್ತು ಆರ್‌ಜೆಡಿಯ ಸಚಿವರಾಗಿದ್ದ ಲಲಿತ್‌ ಯಾದವ್‌, ರಮಾನಂದ್‌ ಯಾದವ್‌ ಅವರು ನೋಡಿಕೊಳ್ಳುತ್ತಿದ್ದ ಇಲಾಖೆಗಳು ಕೈಗೊಂಡ ಎಲ್ಲ ನಿರ್ಧಾರಗಳನ್ನು ಪರಿಶೀಲಿಸಲು ಆದೇಶ ಹೊರಡಿಸಲಾಗಿದೆ ಎಂದು ಅವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು. ‘ಕೆಲ ಅಕ್ರಮಗಳು ನಡೆದಿವೆ. ನಾವು ಅದನ್ನೆಲ್ಲ ಸಹಿಸುವುದಿಲ್ಲ. ಹೀಗಾಗಿ ಅವುಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದರು. ತೇಜಸ್ವಿ ಯಾದವ್‌ ಉಪ ಮುಖ್ಯಮಂತ್ರಿಯಾಗಿದ್ದಾಗ ಅವರು ಹೊಂದಿದ್ದ ಖಾತೆಗಳಾದ ಆರೋಗ್ಯ, ರಸ್ತೆ ನಿರ್ಮಾಣ, ನಗರಾಭಿವೃದ್ಧಿ ಮತ್ತು ವಸತಿ, ಗ್ರಾಮಿಣಾಭಿವೃದ್ಧಿ ಇಲಾಖೆಯಲ್ಲಿ ತೆಗೆದುಕೊಂಡಿರುವ ಕ್ರಮಗಳನ್ನು ಪರಿಶೀಲಿಸುವಂತೆ ಮುಖ್ಯಮಂತ್ರಿ ನೇತೃತ್ವದ ಸಂಪುಟ ಸಚಿವಾಲಯ ಫೆ 16 (ಶುಕ್ರವಾರ)ರಂದು ಪತ್ರ ಬರೆದು ತಿಳಿಸಿದೆ. ಇದರ ಜತೆಗೆ ಲಲಿತ್‌ ಯಾದವ್‌ ಮತ್ತು ರಮಾನಂದ ಯಾದವ್‌ ಅವರು ಹೊಂದಿದ್ದ ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್‌ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳಲ್ಲಿ ತೆಗೆದುಕೊಂಡಿರುವ ನಿರ್ಧಾರಗಳನ್ನು ಪರಿಶೀಲಿಸುವಂತೆಯೂ ಹಿರಿಯ ಅಧಿಕಾರಿಗಳಿಗೆ ಸರ್ಕಾರ ಸೂಚಿಸಿದೆ. ‘ನಾನು, ಮಿತ್ರಪಕ್ಷಗಳು ಮತ್ತು ವಿರೋಧ ಪಕ್ಷಗಳ ನಾಯಕರ ಜತೆ ಯಾವಾಗಲೂ ಉತ್ತಮ ಸಂಬಂಧ ಹೊಂದಿದ್ದೇನೆ. ಆ ನಾಯಕರನ್ನು ಭೇಟಿಯಾದಾಗ ಅವರೊಂದಿಗೆ ಹಸ್ತಲಾಘವ ಮಾಡುತ್ತೇನೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಗುರುವಾರವಷ್ಟೇ ನಿತೀಶ್‌ ಅವರು ವಿಧಾನಸಭೆ ಆವರಣದಲ್ಲಿ ಲಾಲು ಪ್ರಸಾದ್‌ ಅವರೊಂದಿಗೆ ಕೈಕುಲುಕಿದ್ದರು. ಇದಾದ ಮರು ದಿನ ಲಾಲು ಪ್ರಸಾದ್‌ ಅವರು, ‘ನಿತೀಶ್‌ಗಾಗಿ ನಮ್ಮ ಬಾಗಿಲು ಸದಾ ತೆರೆದಿರುತ್ತದೆ’ ಎಂದು ಪ್ರತಿಕ್ರಿಯಿಸಿದ್ದರು. - ಎನ್‌ಡಿಎಗೆ ಹೆಚ್ಚು ಸ್ಥಾನ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟವು 2019ರ ಲೋಕಸಭಾ ಚುನಾವಣೆಯಲ್ಲಿ ಗಳಿಸಿದ್ದಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪಡೆಯಲಿದೆ. ಈ ಕುರಿತು ನನಗೆ ಪೂರ್ಣ ವಿಶ್ವಾಸವಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು. ‘ಇಂಡಿಯಾ’ ಮೈತ್ರಿ ಕೂಟದಲ್ಲಿ ಮೂಡಿರುವ ಬಿರುಕಿನ ಕುರಿತು ಹೇಳಿದ ನಿತೀಶ್‌ ‘ಅವರು (ಇಂಡಿಯಾ ಕೂಟದ ನಾಯಕರು) ಏನನ್ನೂ ಮಾಡುತ್ತಿಲ್ಲ. ಅದಕ್ಕಾಗಿಯೇ ಅಲ್ಲಿ ಬಿರುಕುಗಳೂ ಮೂಡುತ್ತಿವೆ. ಈ ಮೈತ್ರಿಕೂಟಕ್ಕೆ ಇಟ್ಟಿರುವ ಹೆಸರು (ಭಾರತ) ನನ್ನ ಆಯ್ಕೆಯಲ್ಲ. ಅವರು ತಾವಾಗಿಯೇ ಇದನ್ನು ನಿರ್ಧರಿಸಿದ್ದರು. ಈಗ ನನಗೂ ಅವರಿಗೂ ಯಾವುದೇ ಸಂಬಂಧ ಇಲ್ಲ ನಾನು ಎನ್‌ಡಿಎಗೆ ಹಿಂತಿರುಗಿದ್ದೇನೆ’ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.