ಕೇರಳ: ‘ಜೈ ಹಿಂದ್‌’ ಚಾನೆಲ್‌ನ ಬ್ಯಾಂಕ್‌ ಖಾತೆ ಸ್ಥಗಿತ ಆರೋಪ ತಿರುವನಂತಪುರ: ಬಾಕಿ ಇರುವ ತೆರಿಗೆಗೆ ಸಂಬಂಧಿಸಿ, ಆದಾಯ ತೆರಿಗೆ ಇಲಾಖೆಯು ತನ್ನ ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಿದೆ ಎಂದು ‘ಜೈಹಿಂದ್‌ ಟಿವಿ’ಯನ್ನು ಮುನ್ನಡೆಸುತ್ತಿರುವ ಕಾಂಗ್ರೆಸ್‌ ಬೆಂಬಲಿತ ಸಂಸ್ಥೆ ಶನಿವಾರ ಆರೋಪಿಸಿದೆ. ಜೈಹಿಂದ್‌ ಟಿವಿಯ ಮಾತೃಸಂಸ್ಥೆಯಾದ ಭಾರತ್‌ ಬ್ರಾಡ್‌ಕಾಸ್ಟಿಂಗ್ ಕಂಪನಿಯಿಂದ ಬಾಕಿ ಇರುವ ತೆರಿಗೆ ಮೊತ್ತವನ್ನು ವಸೂಲಿ ಮಾಡುವಂತೆ ಎರಡು ಪ್ರಮುಖ ಖಾಸಗಿ ಬ್ಯಾಂಕುಗಳಿಗೆ ಇಲ್ಲಿನ ಕೇಂದ್ರ ಜಿಎಸ್‌ಟಿ ಮತ್ತು ಎಕ್ಸೈಸ್ ಕಚೇರಿಯ ಸಹಾಯಕ ಆಯುಕ್ತರು ಇತ್ತೀಚೆಗೆ ನೋಟಿಸ್‌ ನೀಡಿದ್ದರು. ಇದರ ಬೆನ್ನಲ್ಲೇ ಈಗ ಸಂಸ್ಥೆಯ ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಮೂಲಗಳು ಹೇಳಿವೆ. ಸಂಸ್ಥೆಯ ಖಾತೆಗಳನ್ನು ಸ್ಥಗಿತಗೊಳಿಸಿ ಕೈಗೊಂಡಿರುವ ಕ್ರಮಕ್ಕೂ, 7 ವರ್ಷಗಳ ಹಿಂದಿನ ಸೇವಾ ತೆರಿಗೆ ಬಾಕಿಗೆ ಸಂಬಂಧಿಸಿದ ಇದೇ ಸಂಸ್ಥೆಗೆ ಸಂಬಂಧಿಸಿದ ಪ್ರಕರಣಕ್ಕೂ ನಂಟಿದೆ. ಸೇವಾ ತೆರಿಗೆ ಬಾಕಿ ಕುರಿತ ಪ್ರಕರಣದ ವಿಚಾರಣೆ ಸದ್ಯ ಕೇರಳ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ ಎಂದು ಇವೇ ಮೂಲಗಳು ಹೇಳಿವೆ. ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಎದುರಿಸುತ್ತಿರುವ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಈ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದ್ದು, ಈ ಕುರಿತು ವಿವರ ನೀಡುವಂತೆ ಸಂಸ್ಥೆಗೆ ಸಿಬಿಐ ನೋಟಿಸ್‌ ನೀಡಿತ್ತು. ಈ ಕಾರಣದಿಂದಾಗಿ ಜೈಹಿಂದ್‌ ಟಿವಿ ಇತ್ತೀಚೆಗೆ ಗಮನ ಸೆಳೆದಿತ್ತು. ‘ತೆರಿಗೆ ಬಾಕಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಹೈಕೋರ್ಟ್‌ನಲ್ಲಿ ಬಾಕಿ ಇದೆ. ಹೀಗಾಗಿ ತೆರಿಗೆ ಅಧಿಕಾರಿಗಳು ಕೈಗೊಂಡಿರುವ ಕ್ರಮ ಅಚ್ಚರಿ ಮೂಡಿಸಿದೆ’ ಎಂದು ಚಾನೆಲ್‌ನ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್‌.ಶಿಜು ಪ್ರತಿಕ್ರಿಯಿಸಿದ್ದಾರೆ. ‘ಇಲಾಖೆ ಕೈಗೊಂಡಿರುವ ಈ ದಿಢೀರ್‌ ಕ್ರಮ ದುರದೃಷ್ಟಕರ ಮಾತ್ರವಲ್ಲ, ಇದರಿಂದ ಚಾನೆಲ್‌ ಸಂಕಷ್ಟಕ್ಕೆ ಸಿಲುಕಿದೆ’ ಎಂದೂ ಹೇಳಿದ್ದಾರೆ. ‘ಡಿ.ಕೆ.ಶಿವಕುಮಾರ್‌ ಮತ್ತು ಅವರ ಕುಟುಂಬದ ಸದಸ್ಯರು ಸಂಸ್ಥೆಯಲ್ಲಿ ಮಾಡಿರುವ ಹೂಡಿಕೆ ಕುರಿತು ಮಾಹಿತಿ ನೀಡುವಂತೆ ಕಳೆದ ಡಿಸೆಂಬರ್‌ 22ರಂದು ನೋಟಿಸ್‌ ನೀಡಲಾಗಿತ್ತು. ಈ ವಿಚಾರವಾಗಿ ನಾವು ತನಿಖಾ ಸಂಸ್ಥೆಗೆ ಸಹಕಾರ ನೀಡುತ್ತಿದ್ದೇವೆ. ಇದಾದ ನಂತರ, ನಾವು ಕೇಂದ್ರದ ವಿವಿಧ ಇಲಾಖೆಗಳಿಂದ 10ಕ್ಕೂ ಹೆಚ್ಚು ನೋಟಿಸ್‌ಗಳನ್ನು ಪಡೆದಿದ್ದೇವೆ’ ಎಂದು ಶಿಜು ಹೇಳಿದ್ದಾರೆ. ‘ರಾಜಕೀಯ ದ್ವೇಷದಿಂದಾಗಿ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬುದು ಸ್ಪಷ್ಟ’ ಎಂದು ಕಾಂಗ್ರೆಸ್‌ ಮುಖಂಡರೂ ಆಗಿರುವ ಶಿಜು ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.