‘ದೇವಸ್ಥಾನಗಳ ಜತೆಗೇ ವೈದ್ಯಕೀಯ ಕಾಲೇಜುಗಳ ನಿರ್ಮಾಣ’ ಸಂಭಾಲ್ (ಪಿಟಿಐ/ಪ್ರಜಾವಾಣಿ ವಾರ್ತೆ): ಅಯೋಧ್ಯೆಯ ಬಾಲರಾಮ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯಲ್ಲಿ ಮುಖ್ಯ ಯಜಮಾನರಾಗಿ ಭಾಗವಹಿಸಿ ರಾಮಮಂದಿರ ಉದ್ಘಾಟನೆ ನೆರವೇರಿಸಿದ್ದ ಮೋದಿ, ಒಂದು ತಿಂಗಳೊಳಗೇ ಸೋಮವಾರ ಮತ್ತೊಂದು ದೇಗುಲದ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿರುವ ಹಿಂದೂಗಳ ಪ್ರಸಿದ್ಧ ತೀರ್ಥಕ್ಷೇತ್ರ ಶ್ರೀ ಕಲ್ಕಿ ಧಾಮ ದೇವಾಲಯ ನಿರ್ಮಾಣಕ್ಕೆ ಪ್ರಧಾನಿ ವಿಶೇಷ ಪೂಜೆ ನೆರವೇರಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ, ‘ದೇಶದಲ್ಲಿ ದೇಗುಲಗಳ ನಿರ್ಮಾಣದ ಜತೆಗೇ ವೈದ್ಯಕೀಯ ಕಾಲೇಜುಗಳನ್ನೂ ನಿರ್ಮಿಸಲಾಗುತ್ತಿದೆ. ಒಂದೆಡೆ, ತೀರ್ಥಕ್ಷೇತ್ರಗಳನ್ನು ಅಭಿವೃದ್ಧಿಪಡಿಲಾಗುತ್ತಿದೆ. ಮತ್ತೊಂದೆಡೆ, ನಗರಗಳಲ್ಲಿ ಹೈಟೆಕ್ ಮೂಲಸೌಕರ್ಯ ಅಭಿವೃದ್ಧಿಪಡಿಸಲಾಗುತ್ತಿದೆ. ಇದು ಕಾಲ ಬದಲಾಗಿದೆ ಎನ್ನುವುದನ್ನು ಸೂಚಿಸುತ್ತದೆ’ ಎಂದು ಹೇಳಿದರು. ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ಅಯೋಧ್ಯೆಯ ರಾಮಮಂದಿರ ಮತ್ತು ಅಬುಧಾಬಿಯ ದೇಗುಲಗಳನ್ನೂ ಪ್ರಸ್ತಾಪಿಸಿದರು. ‘ಅಯೋಧ್ಯೆಯಲ್ಲಿ 500 ವರ್ಷಗಳ ಕನಸು ಸಾಕಾರಗೊಂಡಿದ್ದಕ್ಕೆ ನಾವು ಸಾಕ್ಷಿಯಾಗಿದ್ದೆವು. ಅದೇ ರೀತಿ ನೂರಾರು ಕಿ.ಮೀ. ದೂರದ ಅಬುಧಾಬಿಯಲ್ಲಿ ಭವ್ಯ ದೇಗುಲದ ಉದ್ಘಾಟನೆಗೂ ಸಾಕ್ಷಿಯಾಗಿದ್ದೇವೆ’ ಎಂದು ಅವರು ಹೇಳಿದರು. ‘ಕಾಶಿ ವಿಶ್ವನಾಥ ಧಾಮ, ಸೋಮನಾಥ ಮಂದಿರದ ಅಭಿವೃದ್ಧಿ, ಕೇದಾರನಾಥ ದೇಗುಲದ ಪುನರ್ ನಿರ್ಮಾಣವನ್ನೂ ನಾವು ಕಂಡೆವು. ‘ವಿಕಾಸ್ ಭೀ, ವಿರಾಸತ್ ಭೀ (ವಿಕಾಸವೂ ಪರಂಪರೆಯೂ)-ಇದು ನಮ್ಮ ಮಂತ್ರ‘ ಎಂದು ಅವರು ತಿಳಿಸಿದರು. ‘ಈಗ ನಮ್ಮ ಪುರಾತನ ಶಿಲ್ಪಗಳನ್ನು ವಿದೇಶಗಳಿಂದ ಮರಳಿ ತರಲಾಗುತ್ತಿದೆ. ದಾಖಲೆ ಪ್ರಮಾಣದ ವಿದೇಶಿ ಬಂಡವಾಳ ಹರಿದುಬರುತ್ತಿದೆ. ಈ ಬದಲಾವಣೆಯು ಕಾಲಚಕ್ರ ತಿರುಗಿ ಹೊಸ ಯುಗದ ಆಗಮನವಾಗಿರುವುದರ ಪುರಾವೆಯಾಗಿದೆ. ಇದು ನಾವು ಆ ಬದಲಾವಣೆಯನ್ನು ತೆರೆದ ಮನಸ್ಸಿನಿಂದ ಸ್ವಾಗತಿಸಬೇಕಾದ ಸಮಯವಾಗಿದೆ. ಭಾರತವು ಮೊದಲ ಬಾರಿಗೆ ಇತರರನ್ನು ಅನುಸರಿಸದೆ ಮೇಲ್ಪಂಕ್ತಿ ನಿರ್ಮಿಸಿದೆ’ ಎಂದು ಮೋದಿ ಅಭಿಪ್ರಾಯಪಟ್ಟರು. ಕಳೆದ ದಶಕದಲ್ಲಿ ತಮ್ಮ ಸರ್ಕಾರ ಮಾಡಿದ ಸಾಧನೆಗಳನ್ನು ಸ್ಮರಿಸಿದ ಪ್ರಧಾನಿ ಮೋದಿ, ‘ದೇಶವು ಇಂದು ನಾವೀನ್ಯದ ಕೇಂದ್ರವಾಗಿ ಬದಲಾಗುತ್ತಿದ್ದು, ಜಗತ್ತಿನ ಐದನೇ ಅತಿ ದೊಡ್ಡ ಆರ್ಥಿಕತೆಯಾಗುವ ಅಂಚಿನಲ್ಲಿದೆ’ ಎಂದು ಹೇಳಿದರು. ₹10 ಲಕ್ಷ ಕೋಟಿಯ ಯೋಜನೆ ಉದ್ಘಾಟಿಸಿದ ಮೋದಿ ಲಖನೌ (ಪಿಟಿಐ): ಉತ್ತರ ಪ್ರದೇಶದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ₹10 ಲಕ್ಷ ಕೋಟಿ ಮೌಲ್ಯದ 14000 ಯೋಜನೆಗಳಿಗೆ ಚಾಲನೆ ನೀಡಿದರು. ಇವು ಉತ್ಪಾದನೆ ನವೀಕೃತ ಇಂಧನ ಆಹಾರ ಸಂಸ್ಕರಣೆ ವಸತಿ ಆತಿಥ್ಯ ಮನರಂಜನೆ ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ಯೋಜನೆಗಳಾಗಿವೆ. ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿ ಬೇನ್ ಪಟೇಲ್ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉಪಸ್ಥಿತರಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.