ಅತ್ಯಾಚಾರ ಆರೋಪ: ಸ್ವಯಂಘೋಷಿತ ದೇವಮಾನವ ಸೇರಿದಂತೆ ಐವರ ಬಂಧನ ಬಿಲಾಸಪುರ: ಹದಿನಾಲ್ಕು ವರ್ಷದ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಸ್ವಯಂಘೋಷಿತ ದೇವಮಾನವ ಸೇರಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಛತ್ತೀಸಗಢದ ಬಿಲಾಸಪುರ ಜಿಲ್ಲಾ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಸ್ವಯಂಘೋಷಿತ ದೇವಮಾನವ ಕುಲೇಶ್ವರ ಸಿಂಗ್ ರಜಪೂತ್ ಅಲಿಯಾಸ್ ಪಂಡಿತ್ ಠಾಕೂರ್ ಮತ್ತು ಅವರ ಸಹಚರರಾದ ಗಣೇಶ್ ಸಾಹು, ಧನಿಯಾ ಬಂಜಾರೆ, ಕನ್ಹಯ್ಯ ಹಾಗೂ ಹುಲ್ಸಿ ರಾತ್ರೆ ಎಂಬ ಮಹಿಳೆಯನ್ನು ಗುರುವಾರ ಬಂಧಿಸಲಾಗಿದೆ ಎಂದು ಪ್ರಭಾರ ಪೊಲೀಸ್ ವರಿಷ್ಠಾಧಿಕಾರಿ ಅರ್ಚನಾ ಝಾ ತಿಳಿಸಿದ್ದಾರೆ. ಸಂತ್ರಸ್ತೆಯರ ಪೋಷಕರನ್ನು ಭೇಟಿಯಾಗಿದ್ದ ಬಂಜಾರೆ ಮತ್ತು ರಾತ್ರೆ, ಬಿಲಾಸಪುರದಲ್ಲಿ ನಡೆಯಲಿರುವ ರಜಪೂತರ ಧಾರ್ಮಿಕ ಆಚರಣೆಯಲ್ಲಿ ಭಾಗಿಯಾದರೆ ಹಣ ನೀಡುವುದಾಗಿ ಭರವಸೆಯ ಆಮಿಷವೊಡ್ಡಿದ್ದರು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಜ.11ರಂದು ಬಾಲಕಿಯರೊಟ್ಟಿಗೆ ಕುಟುಂಬದವರು ಬಿಲಾಸಪುರದ ರತನಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಸಾಹು ಮನೆಗೆ ಹೋಗಿದ್ದರು. ರಜಪೂತ್ ಬಾಲಕಿಯರ ಮೇಲೆ ಅಲ್ಲಿ ಅತ್ಯಾಚಾರ ಎಸಗಿದ್ದಾನೆ. ನಂತರ ಆರೋಪಿಯು ಎರಡು ಕುಟುಂಬಕ್ಕೆ ₹2 ಸಾವಿರ, ₹4 ಸಾವಿರ ನೀಡಿದ್ದಾನೆ. ಬಾಲಕಿಯರು ಮನೆಗೆ ಮರಳುವಾಗ ದೌರ್ಜನ್ಯದ ಬಗ್ಗೆ ಪೋಷಕರಿಗೆ ತಿಳಿಸಿದ್ದಾರೆ. ಬಳಿಕ ರತನ್‌ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.