ಕಮಲ್‌ ನಾಥ್‌ ಪಕ್ಷ ತ್ಯಜಿಸಲ್ಲ: ಕಾಂಗ್ರೆಸ್‌ ಮುಖ್ಯಸ್ಥ ಜಿತು ಪತ್ವಾರಿ ಭೋಪಾಲ್‌: ಪಕ್ಷ ತ್ಯಜಿಸುವುದಿಲ್ಲ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಕಮಲ್‌ ನಾಥ್‌ ಅವರೇ ತಿಳಿಸಿದ್ದಾರೆ ಎಂದು ಮಧ್ಯಪ್ರದೇಶ ಕಾಂಗ್ರೆಸ್‌ ಮುಖ್ಯಸ್ಥ ಜಿತು ಪತ್ವಾರಿ ಭಾನುವಾರ ಹೇಳಿದರು. ಈ ಮೂಲಕ ಕಮಲ್‌ ನಾಥ್‌ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿಯನ್ನು ಅಲ್ಲಗಳೆದರು. 'ಮಾಧ್ಯಮವನ್ನು ಬಿಜೆಪಿ ದುರುಪಯೋಗ ಮಾಡಿಕೊಳ್ಳುತ್ತಿದೆ ಮತ್ತು ವ್ಯಕ್ತಿಯ ನಿಷ್ಠೆಯನ್ನು ಪ್ರಶ್ನಿಸುತ್ತಿದೆ. ನಾನು ಕಮಲ್‌ ನಾಥ್‌ ಅವರೊಂದಿಗೆ ಮಾತನಾಡಿದೆ. ಈ ವೇಳೆ ಅವರು, ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವರದಿಗಳು ಪಿತೂರಿಯ ಭಾಗ. ತಾವು ಕಾಂಗ್ರೆಸ್ಸಿಗ ಮತ್ತು ಕಾಂಗ್ರೆಸ್ ಪಕ್ಷದ ನಾಯಕನಾಗಿಯೇ ಮುಂದುವರಿಯುವುದಾಗಿ ಹೇಳಿದರು. ಗಾಂಧಿ ಕುಟುಂಬದೊಂದಿಗಿನ ತಮ್ಮ ಸಂಬಂಧ ಅತ್ಯಂತ ಗಾಢವಾದುದು. ಪಕ್ಷದ ಸಿದ್ಧಾಂತದೊಂದಿಗೆ ಜೀವಿಸಿರುವುದಾಗಿಯೂ ತಿಳಿಸಿ, ಜೀವನ ಪರ್ಯಂತ ಇದೇ ರೀತಿ ಬದುಕುವುದಾಗಿ ಹೇಳಿದ್ದಾರೆ’ ಎಂದರು. ಸ್ವತಃ ಕಮಲ್‌ ನಾಥ್‌ ಅವರೇ ಏಕೆ ಈ ಬಗ್ಗೆ ಸ್ಪಷ್ಟನೆ ನೀಡುತ್ತಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ, ‘ಸರಿಯಾದ ಸಮಯದಲ್ಲಿ ಅವರು ಮಾತನಾಡಲಿದ್ದಾರೆ. ಅವರ ಪರವಾಗಿ ನಾನು ಇಷ್ಟು ಹೇಳಿದ್ದೇನೆ’ ಎಂದು ತಿಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.