ಮಣಿಪುರಿ ಅಸ್ಸಾಂನ ಸಹ ಅಧಿಕೃತ ಭಾಷೆ; ಸಂಪುಟ ಒಪ್ಪಿಗೆ ಗುವಾಹಟಿ: ಅಸ್ಸಾಂನ ನಾಲ್ಕು ಜಿಲ್ಲೆಗಳಲ್ಲಿ ಸಹ ಅಧಿಕೃತ ಭಾಷೆಯನ್ನಾಗಿ ಮಣಿಪುರಿಯನ್ನು ಪರಿಗಣಿಸಲು ಅಲ್ಲಿಯ ಸಂಪುಟವು ಒಪ್ಪಿಗೆ ನೀಡಿದೆ. ಕಾಚರ್‌, ಕರೀಂಗಂಜ್‌, ಹೈಲಕಂಡಿ ಮತ್ತು ಹೋಜಾಯ್ ಜಿಲ್ಲೆಗಳಲ್ಲಿ ಮಣಿಪುರಿಯನ್ನು ಸಹ ಅಧಿಕೃತ ಭಾಷೆ ಎಂದು ಅಂಗೀಕರಿಸುವ ಅಸ್ಸಾಂ ಅಧಿಕೃತ ಭಾಷೆ (ತಿದ್ದುಪಡಿ) ಮಸೂದೆ– 2024ನ್ನು ಅಸ್ಸಾಂ ಸಂಪುಟ ಅಂಗೀಕರಿಸಿತು. ಇದು ಅಸ್ಸಾಂ ಅಧಿಕೃತ ಭಾಷೆ ಕಾಯ್ದೆ– 1960ರ ತಿದ್ದುಪಡಿ ಮಸೂದೆಯಾಗಿದೆ. ಅಸ್ಸಾಂನಲ್ಲಿ ನೆಲೆಸಿರುವ ಮಣಿಪುರಿ ಸಮುದಾಯದ ಸಂಸ್ಕೃತಿ, ಪರಂಪರೆ, ಸಾಮಾಜಿಕ ಮತ್ತು ರಾಜಕೀಯ ಗುರುತನ್ನು ರಕ್ಷಿಸುವ ಹಾಗೂ ಉತ್ತೇಜಿಸಲು ಯೋಜನೆ ರೂಪಿಸುವ ಸಲುವಾಗಿ ತಡರಾತ್ರಿ ತಮ್ಮ ನೇತೃತ್ವದಲ್ಲಿ ಸಂಪುಟ ಸಭೆ ನಡೆಯಿತು. ಆ ವೇಳೆ ಈ ನಿರ್ಧಾರ ತೆಗದುಕೊಳ್ಳಲಾಯಿತು ಎಂದು ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಹೇಳಿದ್ದಾರೆ. ಬುಡಕಟ್ಟು ಸಮುದಾಯಗಳ ಹಿತಾಸಕ್ತಿ ಕಾಪಾಡಲು ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ– 2020ರಲ್ಲಿ ನೀಡಲಾಗಿರುವ ಅವಕಾಶಗಳನ್ನು ಜಾರಿಗೊಳಿಸುವ ದಿಸೆಯಲ್ಲಿ ಮಿಸಿಂಗ್‌, ರಭಾ, ಕಬ್ರಿ, ತಿವಾ, ದಿಯೋರಿ ಮತ್ತು ದಿಮಸಾ ಭಾಷೆಗಳನ್ನು ಶಿಕ್ಷಣ ಮಾಧ್ಯಮದಲ್ಲಿ ಪರಿಚಯಿಸಲು ಸಂಪುಟ ಸಚಿವರು ನಿರ್ಧರಿಸಿದರು. ಈ ನಿರ್ಧಾರದಿಂದ, ಬುಡಕಟ್ಟು ಜನಾಂಗದ ಮಕ್ಕಳಿಗೆ ತಮ್ಮ ಮಾತೃಭಾಷೆಯಲ್ಲೇ ಶಾಲಾ ಶಿಕ್ಷಣ ಪಡೆಯಲು ಅನುಕೂಲವಾಗುತ್ತದೆ ಎಂದು ಶರ್ಮಾ ಹೇಳಿದ್ದಾರೆ. ಅಹೋಮ್‌, ಕೋಚ್‌ ರಾಜ್‌ಬೋಂಗ್‌ಶಿ ಮತ್ತು ಗೋರ್ಖಾ ಸಮುದಾಯಗಳ ಭೂಮಿ ಹಕ್ಕನ್ನು ಕಾಪಾಡಲೂ ಕ್ರಮ ಕೈಗೊಳ್ಳಲಾಗುವುದು. ಬಾಲಿಪಾಢ ಬುಡಕಟ್ಟು ಪ್ರದೇಶದ ರಕ್ಷಿತ ವರ್ಗಗಳ ಜನರ ಪಟ್ಟಿಗೆ ಈ ಸಮುದಾಯಗಳನ್ನು ಸೇರಿಸಲಾಗುವುದು ಎಂದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.